ಗುಲ್ಬರ್ಗಾ

ಗುಲ್ಬರ್ಗ- ಬೀದರ್- ಯಾದಗಿರಿ ಹಾಲು ಒಕ್ಕೂಟ ಉತ್ಪಾದಕರ ಜೀವನಾಡಿ: ಬಿರಾದಾರ್

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ ನ.26
ಗುಲ್ಬರ್ಗ- ಬೀದರ್- ಯಾದಗಿರಿ ಹಾಲು ಒಕ್ಕೂಟ ಈ ಭಾಗದ ಹಾಲು ಉತ್ಪಾದಕರ ಜೀವನಾಡಿಯಾಗಿದೆ. ಮೂರು ವರ್ಷ 27 ದಿನಗಳ ಕಾಲ ಇದರ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತದ್ದು ನನ್ನ ಸೌಭಾಗ್ಯ ಎಂದು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2010ರ ಅ.1ರಂದು ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಒಕ್ಕೂಟದ ವ್ಯಾಪ್ತಿಯ ಮೂರು ಜಿಲ್ಲೆಗಳು ಒಳಗೊಂಡಂತೆ ಒಟ್ಟು 15 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ 40 ಸಾವಿರ ಲೀಟರ್ ಬೇಡಿಕೆ ಇತ್ತು. ಶಿವಮೊಗ್ಗ ಮತ್ತು ಕೋಲಾರದಿಂದ 25 ಸಾವಿರ ಲೀಟರ್ ಹಾಲು ಆಮದು ಮಾಡಿಕೊಂಡು ಬೇಡಿಕೆ ಪೂರೈಸಲಾಗುತ್ತಿತ್ತು ಎಂದರು.
ಬೇಡಿಕೆಗಿಂತ ಅಧಿಕ ಹಾಲು ಸಂಗ್ರಹ: ಈ ಒಕ್ಕೂಟವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಂಕಲ್ಪ ತೊಟ್ಟ ನಾನು ಹಾಲು ಶೇಖರಣೆ ಮತ್ತು ಮಾರುಕಟ್ಟೆಯನ್ನು ವೃದ್ಧಿಸಲು ಒತ್ತು ನೀಡಿದೆ. ಪರಿಣಾಮವಾಗಿ 6 ತಿಂಗಳಲ್ಲಿ ಹಾಲು ಶೇಖರಣೆ 60 ಸಾವಿರ ಲೀಟರ್‌ಗೆ ಮತ್ತು ಒಂದು ವರ್ಷದಲ್ಲಿ 84 ಸಾವಿರ ಲೀಟರ್‌ಗೆ ಏರಿಕೆಯಾಯಿತು. ಪ್ರಸ್ತುತ 72 ಸಾವಿರ ಲೀಟರ್ ಸಂಗ್ರಹವಾಗುತ್ತಿದ್ದು, 60 ಸಾವಿರ ಲೀಟರ್ ಬೇಡಿಕೆ ಇದೆ. ಇನ್ನುಳಿದ 12 ಸಾವಿರ ಲೀಟರ್ ಹಾಲನ್ನು ಪೌಡರ್ ತಯಾರಿಸಲು ಬಳಸಲಾಗುತ್ತಿದೆ ಎಂದರು.
ಗುಲ್ಬರ್ಗದಲ್ಲಿ ಇದ್ದ 50 ಸಾವಿರ ಲೀಟರ್ ಹಾಲು ಶೇಖರಣೆ ಸಾಮರ್ಥ್ಯದ ಡೇರಿಯನ್ನು 1 ಲಕ್ಷ ಲೀಟರ್‌ಗೆ ಮೇಲ್ದರ್ಜೆಗೆ ಏರಿಸಿ, 2011ರ ಏ.6ರಂದು ಉದ್ಘಾಟಿಸಲಾಯಿತು. ಮೊಸರು, ತುಪ್ಪ ತಯಾರಿಕೆಯ ಬಾಯ್ಲರ್‌ನ್ನು ಅಳವಡಿಸಲಾಯಿತು. 1 ಲಕ್ಷ ಲೀಟರ್ ಸಾಮರ್ಥ್ಯದ ಕೋಲ್ಡ್ ಸ್ಟೋರ್‌ನ್ನೂ ನಿರ್ಮಿಸಲಾಯಿತು ಎಂದರು.
ಉದ್ಯಾನವನ ಅಭಿವೃದ್ಧಿ: ಗುಲ್ಬರ್ಗ ಡೇರಿ ಆವರಣದಲ್ಲಿರುವ 2 ಎಕರೆ ಜಾಗದಲ್ಲಿ ಹಸುಗಳ ಮೂರ್ತಿಗಳು ಒಳಗೊಂಡಂತೆ ಉದ್ಯಾನವನ್ನು ಅಭಿವೃದ್ಧಿಪಡಿಸಲಾಯಿತು. ಹಳೆಯ ಕಟ್ಟಡವನ್ನು 50 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಲಾಯಿತು ಎಂದು ಹೇಳಿದರು.
ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಹಾಲು ಮಾರಾಟವನ್ನು ಪ್ರೋತ್ಸಾಹಿಸಲು ಮೊಬೈಲ್ ವ್ಯಾನ್ ಸೇವೆಯನ್ನು ಆರಂಭಿಸಲಾಯಿತು ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.