ಗುಲ್ಬರ್ಗಾ

ಇಲ್ಲಿ ನರ್ಸೇ ವೈದ್ಯರು, ಕೇಳೋರ್ಯಾರು?

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ನ. 27
'ತಾಲೂಕಿನ ಗಡಿಭಾಗದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದು ತಿಂಗಳಿಂದ ವೈದ್ಯರಿಲ್ಲದ ಕಾರಣ ಗಡಿಭಾಗದ ಬಡ ರೋಗಿಗಳು ತೊಂದರೆ ಪಡಬೇಕಾಗಿದೆ. ಹೊಸದಾಗಿ ನೇಮಕಗೊಂಡ ವೈದ್ಯರು ಮದ್ಯ ಸೇವಿಸಿ ಮಲಗುತ್ತಾರೆ. ರೋಗಿಗಳನ್ನು ನೋಡುವವರೇ ದಿಕ್ಕಿಲ್ಲ. ಇಲ್ಲಿನ ನರ್ಸ್‌ಗಳೇ ವೈದ್ಯರಾಗಿದ್ದಾರೆ...'
ಹೀಗೆಂದು ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ವೈದ್ಯರ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತರಾಟೆ: ತಾಲೂಕು ಪಂಚಾಯತ್ ಹಂಗಾಮಿ ಅಧ್ಯಕ್ಷೆ ತಾರಾಮತಿ ಶಿವಶರಣಪ್ಪ ಕುಂಬಾರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರಾದ ನರಸಿಂಹಲು ಕುಂಬಾರ, ಶರಣು ಹುಲಿ, ರಾಮರಾವ ಪಾಟೀಲ್ ತಾಲೂಕು ಅರೋಗ್ಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ರುದನೂರ, ಮೋಘಾ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರಿಯಾಗಿವೆ. ತಾಲೂಕಿನಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಮತ್ತು ಮಾತ್ರೆಗಳ ಕೊರತೆಯಿಲ್ಲವೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ಬುಳ್ಳಾ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ತಾಲೂಕಿನಲ್ಲಿ ಯಾವುದೇ ಗ್ರಾಮಗಳಲ್ಲಿ ಕಾಲು ಬಾಯಿ ರೋಗದಿಂದ ಎತ್ತುಗಳು ಮೃತಪಟ್ಟಿಲ್ಲವೆಂದು ಪಶು ವೈದ್ಯಾಧಿಕಾರಿ ಡಾ. ಧನರಾಜ ಬೊಮ್ಮ ಸಭೆಯಲ್ಲಿ ವಿವರಿಸುತ್ತಿದ್ದಾಗ ಅಣವಾರ ತಾಪಂ ಸದಸ್ಯ ಶರಣು ಹುಲಿ ಮಧ್ಯಪ್ರವೇಶಿಸಿ ಹಾವು ಕಡಿತದಿಂದ ಮನುಷ್ಯ ಮೃತಪಟ್ಟರೆ ಸರ್ಕಾರ ಪರಿಹಾರ ನೀಡುತ್ತದೆ, ಆದರೆ  ರೈತರ ಎತ್ತುಗಳು ಹಾವು ಕಡಿತದಿಂದ ಸಾವಿಗೀಡಾದರೆ ಅವುಗಳಿಗೆ ಯಾಕೆ ಪರಿಹಾರ ನೀಡುವುದಿಲ್ಲವೆಂದು ಪ್ರಶ್ನಿಸಿದರು.
ಪ್ರಗತಿ ವಿವರಣೆ: ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ್ ಪುಲಾರಿ ಮಾತನಾಡಿದರು. ಜಿಪಂ ಎಇಇ ರೇವಣಸಿದ್ದಪ್ಪ ಹಾಜಗರಿ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಜಲಾನಯನ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಬೆಡಸೂರ, ಸಿಡಿಪಿಒ ಭೀಮಶೇನ್ ಚವ್ಹಾಣ್, ಕೃಷಿ ಅಧಿಕಾರಿ  ವಿಜಯಕುಮಾರ್ ಚುಡೆ, ರೇಶ್ಮೆ ಇಲಾಖೆ, ತೋಟಗಾರಿಕೆ ಅಧಿಕಾರಿ ಸಂತೋಷಕುಮಾರ್ ಮುಂತಾದವರು ತಮ್ಮ ಇಲಾಖೆ ಪ್ರಗತಿ ವಿವರಿಸಿದರು.
ಶಿಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ, ಸಣ್ಣ ನೀರಾವರಿ, ಅಬಕಾರಿ, ನೀರಾವರಿ ಯೋಜನೆ ಹಲವು ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಲಿಲ್ಲ.
ತಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಹಂಗಾಮಿ ಅಧ್ಯಕ್ಷರು ಸೇರಿದಂತೆ ಒಬ್ಬ ಮಹಿಳಾ ಸದಸ್ಯರು ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸದೇ ಮೌನವಾಗಿದ್ದರು. ಕೇವಲ ಕಾಟಾಚಾರದ ಸಭೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.