ಕಾಮನಟಗಿ ತಾಪಂಗೆ ರೇಣುಕಾ ಉಪಾಧ್ಯಕ್ಷೆ
ಸುರಪುರ: ಇಲ್ಲಿಯ ತಾಪಂ ಉಪಾಧ್ಯಕ್ಷೆ ಸ್ಥಾನಕ್ಕೆ ಕಾಮನಟಗಿ ತಾಪಂ ಕ್ಷೇತ್ರದ ರೇಣುಕಾ ನಂದಣ್ಣ ಎಂಎಟಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಎರಡನೇ ಅವಧಿಯ 10 ತಿಂಗಳು ಅವಧಿ ಪೂರ್ಣಗೊಳಿಸಿದ ಅನ್ನಪೂರ್ಣ ಮಾಲಿ ಪಾಟೀಲ ಅವರ ರಾಜಿನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆಸಲಾಗಿತ್ತು. ಕಾಂಗ್ರೆಸ್‌ನ 18 ಹಾಗೂ ಬಿಜೆಪಿಯ 12 ಸದಸ್ಯರು ಸೇರಿದಂತೆ 30 ಸದಸ್ಯ ಬಲ ಹೊಂದಿದ್ದ ತಾಪಂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಸ್ಪಷ್ಟ ಬಹುಮತ ಹೊಂದಿದ ಕಾಂಗ್ರೆಸ್‌ನ ರೇಣುಕಾ ನಂದಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾಗಿದ್ದ ಯಾದಗಿರಿ ಸಹಾಯಕ ಆಯುಕ್ತ ಬಿ.ಪಿ. ವಿಜಯ ನಾಮಪತ್ರ ಪರಿಶೀಲನೆ ನಂತರ ರೇಣುಕಾ ಎಂಎಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಚುನಾವಣೆಯಲ್ಲಿ ಬಿಜೆಪಿಯ 12 ಸದಸ್ಯರಲ್ಲಿ ನಾರಾಯಣಪುರದ ಚಂದ್ರಶೇಖರ ಮತ್ತು ಮಾರನಾಳದ ಭೀಮವ್ವ ಭಾಗವಹಿಸಿ ಅಚ್ಚರಿ ಮೂಡಿಸಿದರು.
ವಿಜಯೋತ್ಸವ: ತಾಪಂನ ನೂತನ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಯ್ಯ ಹಿರೇಮಠ ಉಪಸ್ಥಿತರಿದ್ದರು. ನಂತರ ಜರುಗಿದ ವಿಜಯೋತ್ಸವ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಶ್ರೀನಿವಾಸಗೌಡ ಸೂಗೂರು ಮಾತನಾಡಿ, ಅಧಿಕಾರದಲ್ಲಿ ಎಷ್ಟು ದಿನ ಇದ್ದೇವೆ ಎನ್ನುವುದು ಮುಖ್ಯವಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ರಸ್ತೆ ಕುಡಿಯುವ ನೀರು ಸೇರಿದಂತೆ ಗ್ರಾಮೀಣ ಜನತೆಗೆ ಮೂಲಸೌಕರ್ಯ ಒದಗಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
--
ಗ್ರಾ.ಪಂ ಅಧ್ಯಕ್ಷರ ಮೇಲೆ ಕ್ರಮಕ್ಕೆ ಆಗ್ರಹ
ಶಹಾಪುರ: ತಾಲೂಕಿನ ಚಾಮನಾಳ ಗ್ರಾ.ಪಂ ಅಧ್ಯಕ್ಷರು, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಯೋಜನಗಳಾದ ಇಂದಿರಾ ಅವಾಸ್ ಹಾಗೂ ಬಸವ ವಸತಿ ಯೋಜನೆ ಅಡಿಯಲ್ಲಿ ಸ್ವತಃ ಮನೆಗಳನ್ನು ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಬಡಿಗೇರ ಆರೋಪಿಸಿದ್ದಾರೆ.
ಪಂಚಾಯಿತಿಯಲ್ಲಿ ಯಾವುದೇ ಗ್ರಾಮ ಸಭೆ ನಡೆಸದೆ ಬೇರೆಯವರ ಹೆಸರಲ್ಲಿ ಬಿಲ್ ಎತ್ತುತ್ತಾರಲ್ಲದೇ ಜನತೆಗೆ ಮೋಸ ಮಾಡುತ್ತಿದ್ದಾರೆ. ಇದಕ್ಕೆ ಪಿಡಿಒ ಸಾಕ್ಷಿಯಾಗಿ ಸಹಿ ಮಾಡುತ್ತಾರೆ. ಸರ್ಕಾರದಿಂದ ಬರುವ ಯಾವುದೇ ಯೋಜನೆಗಳು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಈ ಅನ್ಯಾಯವನ್ನು ತಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ರೀತಿ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು. ಇಂತಹ ಅವ್ಯವಹಾರ ಮಾಡುವ ಭ್ರಷ್ಟ ಅಧಿಕಾರಿ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೈಜ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಟಿಪ್ಪು ಉದಾತ್ತ ನಾಯಕ: ಆನೆಗುಂದಿ
ಶಹಾಪುರ:ಮೈಸೂರು ಹುಲಿ ಎಂದೇ ಖ್ಯಾತಿ ಪಡೆದ ಟಿಪ್ಪುಸುಲ್ತಾನ್ ಒಬ್ಬ ಉದಾತ್ತ ಸೇನಾನಿ. ಉತ್ತಮ ನಾಯಕನಾಗಿ ಹೊರಹೊಮ್ಮಿದ್ದು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದನು ಎಂದು ಕಸಾಪ ಅಧ್ಯಕ್ಷ ಸಿದ್ಲಿಂಗಣ್ಣ ಆನೆಗುಂದಿ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಟಿಪ್ಪು ಸುಲ್ತಾನ ಸಂಯುಕ್ತ ರಂಗದ ವತಿಯಿಂದ ಆಯೋಜಿಸಿದ್ದ ಟಿಪ್ಪುಸುಲ್ತಾನ್ ಜಯಂತ್ಯುತ್ಸವ ಕಾರ್ಯಕ್ರಮವು ಶಾದಿಮಹಲ್‌ನಲ್ಲಿ ಆಯೋಜಿಸಿದ್ದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬಾಲ್ಯದಲ್ಲೇ ಸಾಹಿತ್ಯ, ರಾಜನೀತಿ, ಯುದ್ಧಕಲೆಯ ಶಿಕ್ಷಣ ಐರೋಪ್ಯ ಮಾದರಿಯ ತರಬೇತಿ ಯುದ್ಧವ್ಯೂಹದ ರಚನೆಯ ತಂತ್ರದಲ್ಲಿಯೂ ನೈಪುಣ್ಯತೆ ಪಡೆದಿದ್ದ ಎಂದರು.
ಪ್ರಮುಖರಾದ ಎಸ್.ಎನ್. ಖಾದ್ರಿ, ಇಸ್ಮಾಯಿಲ್ ಚಾಂದ್, ಸಣ್ಣನಿಂಗಣ್ಣಾ ನಾಯ್ಕೋಡಿ, ಅಬ್ದುಲ್ ಹದಿಮನಿ, ಫೈಯ್ಯುಂ ಖಾದ್ರಿ, ಹಜರತ್ ಸಯದ್ ಖಲೀಂ ಉಲ್ಲಾ ಹುಸೇನಿ, ಸೈಯದ್ ಖಾದ್ರಿ ವೆಂಕಟೇಶ ನಾಯ್ಕೋಡಿ, ಅಲ್ಲಾ ಪಟೇಲ್ ಮುಕ್ತಾಪುರ ಇತರರು ಪಾಲ್ಗೊಂಡಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

