ಗುಲ್ಬರ್ಗಾ

ಇಂದು ಯುವ ಚೇತನ, ಯುವ ಪ್ರೇರಣಾ ತರಬೇತಿ

Published On :

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ 2013-14ನೇ ಸಾಲಿನ ಯುವ ಚೇತನ ಹಾಗೂ ಯುವ ಪ್ರೇರಣಾ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ನ. 29 ರಂದು ಬೆಳಗ್ಗೆ 10 ಗಂಟೆಗೆ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಪಂ ಅಧ್ಯಕ್ಷ ರಮೇಶ ಮರಗೋಳ ಅವರು ಶಿಬಿರ ಉದ್ಘಾಟಿಸುವರು. ಶಾಸಕ ದತ್ತಾತ್ರೆಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆಯಲ್ಲಿ ನಡೆವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಅನಿತಾ ಪವನಕುಮಾರ್ ವಳಕೇರಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸಾವಳೇಶ್ವರ ಭಾಗವಹಿಸುವರು. ವಿಶೇಷ ಆಮಂತ್ರಿತರಾಗಿ ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಚ್.ಎಂ. ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ವಿಜಯಲಕ್ಷ್ಮಿ ಆಗಮಿಸುವರು.

ರೇಲ್ವೆ ಸಚಿವ ಖರ್ಗೆ ಪ್ರವಾಸ
ಗುಲ್ಬರ್ಗ: ರೇಲ್ವೆ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಿಂದ 30 ರಂದು ಬೆ. 6ಕ್ಕೆ ಗುಲ್ಬರ್ಗ ನಗರಕ್ಕೆ ಆಗಮಿಸುವರು. ಅಂದು ಬೆ.11ಕ್ಕೆ ಕಡಗಂಚಿಯಲ್ಲಿ ನಡೆಯುವ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಮ.3ಕ್ಕೆ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸುವರು. ಡಿ.1ರಂದು ಬೆ.8ಕ್ಕೆ ಯಾದಗಿರಿಯ ಸೈದಾಪುರಕ್ಕೆ ತೆರಳಿ ನಾರಾಯಣಪುರರೋಡ್ ರೈಲು ನಿಲ್ದಾಣವನ್ನು ಸೈದಾಪುರ ರೈಲು ನಿಲ್ದಾಣವೆಂದು ಮರುನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಡಿ.2ರಂದು ಗುಲ್ಬರ್ಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗುವ ಜಿಲ್ಲಾ ಜಾಗೃತ ಸಮಿತಿ ಸಭೆ ಅಧ್ಯಕ್ಷತೆ ವಹಿಸುವರು.

ಬಿಜೆಪಿ ಪ್ರತಿಭಟನೆ
ಗುಲ್ಬರ್ಗ: ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಯಾಸಿನ್ ಭಟ್ಕಳ್ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾರ್ರಿ ಯಾಸಿನ್ ಭಟ್ಕಳ್ ಎಂದು ಹಾರಿಕೆ ಉಡಾಫೆಯ ಮಾತನಾಡಿರುವ ಕ್ರಮವನ್ನು ಖಂಡಿಸಿ ಗುಲ್ಬರ್ಗದಲ್ಲಿ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿದರು. ಕೂಡಲೇ ಸಿಎಂ ಕ್ಷಮೆ ಯಾಚಿಸಬೇಕು. ಈ ಮಾತು ಹಿಂತೆಗೆದುಕೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಪರಶುರಾಮ ನಸಲವಾಯಿ ಆಗ್ರಹಿಸಿದ್ದಾರೆ. ಹನುಮಂತರೆಡ್ಡಿ, ಬಸವರಾಜ ಮದ್ರಿಕಿ, ಶಿವರಾಜ ಸುಲಳ್ಳಿ, ಮಹೇಶ ಉಜ್ಜೇಕರ್, ಪವನ ದೇಶಮುಖ, ವಿಶ್ವನಾತ ಪವಾಡಶೆಟ್ಟಿ, ಮಂಜುನಾಥ ಜೀವಣಗಿ, ದಯಾನಂದ ರೆಡ್ಡಿ ಇದ್ದರು.

'ಲೆಹರ್‌' ಮಳೆ
ಗುಲ್ಬರ್ಗ: ಆಂಧ್ರಪ್ರದೇಶದ ಮಚಲಿಪಟ್ಟಣ ಕರಾವಳಿಗೆ ಅಪ್ಪಳಿಸಿದ ಲೆಹರ್ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದಿಂದ ವಾತಾವರಣದಲ್ಲಿ ಮಂಜು ಮುಸುಕಿ ತುಂತುರು ಮಳೆ ಶುರುವಾಗಿದೆ. ಮೋಡ ಕವಿದ ವಾತಾವರಣ ರಾತ್ರಿಯೂ ಮುಂದುವರಿದಿದ್ದು, ಜನತೆ ಮೈ ಕೊರೆಯುವ ಚಳಿಯಿಂದಾಗಿ ಬೆಚ್ಚಿ ಬಿದ್ದಿದ್ದಾರೆ. ಮೋಡಕವಿದ ವಾತಾವರಣ 2 ದಿನ ಮುಂದುವರಿದಲ್ಲಿ ತೊಗರಿ ಬೆಳೆಗೆ ತೊಂದರೆ ತಪ್ಪಿದ್ದಲ್ಲ ಎಂಬುದು ರೈತರ ಆತಂಕ.

ಸಚಿವ ಖರ್ಗೆ ಪ್ರವಾಸ
ಗುಲ್ಬರ್ಗ: ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಪರಿಷ್ಕೃತ ಪ್ರವಾಸ ಕಾರ್ಯಕ್ರಮ ಇಂತಿದೆ. ನ.30ರ ಬೆ.11ಕ್ಕೆ ಕಡಗಂಚಿಯ ಕೇಂದ್ರೀಯ ವಿವಿ ನೂತನ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮ ನಂತರ ಮಧ್ಯಾಹ್ನ 3 ಗಂಟೆಗೆ ಪಟ್ಟಣ ಗ್ರಾಮದಲ್ಲಿ ಡಾ. ಅಂಬೇಡ್ಕರರ ಪ್ರತಿಮೆ ಅನಾವರಣಗೊಳಿಸಿ ಗುಲ್ಬರ್ಗದಲ್ಲಿ ವಾಸ್ತವ್ಯ ಮಾಡುವರು. ಡಿ.1ರಂದು ಮ.12ಕ್ಕೆ ದೆಹಲಿಗೆ ಪ್ರಯಾಣಿಸುವರು.

ಬಸ್ ಪಲ್ಟಿ: ನಾಲ್ವರಿಗೆ ಗಾಯ
ಗುಲ್ಬರ್ಗ: ಸೇಡಂ ತಾಲೂಕಿನ ಮಳಖೇಡ ಬಳಿ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ನಾಲ್ಕು ಜನ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಸಾರಿಗೆ ಸಂಸ್ಥೆಯ ಬಸ್ಸೊಂದು 51 ಜನ ಪ್ರಯಾಣಿಕರನ್ನು ಸಾಗಿಸುತ್ತಿದ್ದಾಗ ಸ್ಟಿಯರಿಂಗ್ ತುಂಡಾದ ಪರಿಣಾಮ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ನಾಲ್ಕುದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.