ಗುಲ್ಬರ್ಗಾ

ಕನ್ನಡಕ್ಕೆ ಹಿರಿದಾದ ಇತಿಹಾಸವಿದೆ: ಶಂಕರ್ ಬಿದರಿ

Published On :

ಗುರುಮಠಕಲ್: ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡದ ನೆಲಕ್ಕೆ ಗಟ್ಟಿತನವಿದೆ. ಕನ್ನಡ ನಾಡಿಗೆ ಭವ್ಯ ಪರಂಪರೆ ಇದೆ. ಇದೆಲ್ಲವನ್ನು ಉಳಿಸಿ ಬೆಳೆಸುವಲ್ಲಿ ನಾವು ಸ್ವಯಂ ಪ್ರೇರಿತರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು ನಿಛಿತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಅಭಿಪ್ರಾಯ ಪಟ್ಟರು.
ಪಟ್ಟಣದ ಸ. ಪ.ಪೂ. ಕಾಲೇಜಿನಲ್ಲಿ  ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾಗಿದ್ದ ಸಾಹಿತಿ ಮಾಹಿತಿ ಕನ್ನಡದ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ ಉದ್ಘಾಟಿಸಿ, ಸಾಹಿತ್ಯ ಲೋಕವನ್ನು ಅವಲೋಕನ ಮಾಡಲಾಗಿ ವಚನ ಸಾಹಿತ್ಯ ದಾಸ ಸಾಹಿತ್ಯ, ನವೋದಯ ಸಾಹಿತ್ಯ ಎಂದು ಹಲವು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ.
ನಿರಂತರವಾಗಿರಲಿ: ಗುರುಮಠಕಲ್ ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಕನ್ನಡ ಭಾಷೆಗೆ ಇಲ್ಲಿ ಕೊಡಲಿ ಪೆಟ್ಟು ಬಿದ್ದಿದೆ.
ಇಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಅನೇಕ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಬಿ.ಎಂ.ಶ್ರೀ. ಕುರಿತು ಉಪನ್ಯಾಸ ನೀಡಿದ ಸಾಹಿತಿ ವೆಂಕಟರಾವ್ ಕುಲಕರ್ಣಿ ಮಾತನಾಡಿ, 1884ರ ಮಾ.1 ರಂದು ತುಮಕೂರು ಜಿಲ್ಲೆಯ, ತುರುವೆಕೆರೆ ತಾಲೂಕಿನ, ಸಂಪಿಗೆ ಎಂಬ ಗ್ರಾಮದಲ್ಲಿ ಜನಿಸಿದರು.
ಇವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರತಮ್ಮ. ಇವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ,  ಮದ್ರಾಸ್ ವಿವಿಯಲ್ಲಿ ಎಂ.ಎ. ಪದವಿ ಪಡೆದರು.
ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಮೈಸೂರು ವಿ.ವಿ.ಯ ಕುಲಸಚಿವರಾಗಿ ಕಾರ್ಯ ನಿರ್ವಹಿಸಿದರು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜಾ ಸೇವಾಸಕ್ತ: ಇವರು ಗದಾಯುದ್ದ, ಅಶ್ವತ್ಥಾಮನ ಪಾರಶಿಕರು ಎಂಬ ನಾಟಕಗಳನ್ನು ಕನ್ನಡದಲ್ಲಿ ಬರೆದರು. ಹೊಂಗನಸು, ಇಂಗ್ಲೀಷ್ ಗೀತೆಗಳ ಕವನ ಸಂಕಲನ ರಚಿಸಿದ್ದಾರೆ. ಇವರ ಸೇವೆಯನ್ನು ಮನ್ನಿಸಿ ಮೈಸೂರಿನ ಮಹಾರಾಜರು ರಾಜಾ ಸೇವಾಸಕ್ತ ಎಂಬ ಬಿರುದನ್ನು ನೀಡಿದರು. ಗುಲ್ಬರ್ಗದಲ್ಲಿ ನಡೆದ 14ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರನ್ನು ಕನ್ನಡದ ಕಣ್ವ ಎಂದು ಕರೆಯಲಾಗುತ್ತದೆಂದು ಕುಲಕರ್ಣಿ ತಿಳಿಸಿದರು. ಸಾನ್ನಿಧ್ಯ ವಹಿಸಿ ಮಾತನಾಡಿದ ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿ,  20ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸರೂಪವನ್ನು ನೀಡಿದ ಕವಿ ಮತ್ತು ಸಾಹಿತಿ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ.ಎಂ.ಶ್ರೀ.
ಕನ್ನಡಕ್ಕಾಗಿ ಜೀವನ: ಸುಮಾರು 70 ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲಾ ಕಾರ್ಯಗಳು ಇಂಗ್ಲಿಷ್‌ನಲ್ಲಿಯೇ ನಡೆಯುತ್ತಿತ್ತು. ಆಗ ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನಮಾನಗಳು ಇರಲಿಲ್ಲ. ಅಂತಹ ಸಮಯದಲ್ಲಿ ತಮ್ಮ ಜೀವನವನ್ನು ಕನ್ನಡ ಕಟ್ಟುವುದಕ್ಕಾಗಿ ಮೀಸಲಿಟ್ಟವರು ಬಿಎಂಶ್ರೀ ಎಂದರು. ನೇತೃತ್ವ ವಹಿಸಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಯಾಳಗಿ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.