ಗುಲ್ಬರ್ಗಾ

'ಕೈ' ಪಾಳಯಕ್ಕೆ ಅಫಜಲ್ಪುರದ್ದೇ ಚಿಂತೆ

Published On :

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ     ಗುಲ್ಬರ್ಗ     ಏ.2
ಅಫಜಲ್ಪುರ ಅಸೆಂಬ್ಲಿಯ ಮೂಡ್ ಹೇಗಪ್ಪಾ..
- ಇದು ಕಾಂಗ್ರೆಸ್ಸಿಗರನ್ನು ಕಾಡುತ್ತಿರುವ ಆತಂಕ ಭರಿತ ಪ್ರಶ್ನೆ.
ಅರೆ! ಇದೇನಿದು, ಈಗಿರೋದು ಲೋಕಸಭಾ ಚುನಾವಣೆ. ಆದರೂ ಅಫಜಲ್ಪುರ ಅಸೆಂಬ್ಲಿ ಕ್ಷೇತ್ರದ ಬಗ್ಗೆ ಯಾಕೆ ಕಳವಳ ಅಂತೀರೇನು, ಇದಕ್ಕೂ ಕಾರಣವಿದೆ.
ಈ ಅಸೆಂಬ್ಲಿ ಕ್ಷೇತ್ರ ಕೈವಶವಾಗಿದ್ದರೂ(ಮಾಲೀಕಯ್ಯಾ ಗುತ್ತೇದಾರ್ ಶಾಸಕ) ಇಲ್ಲಿನ ರಾಜಕೀಯ ಒಳಸುಳಿ ಅದ್ಯಾವಾಗ ತನ್ನ ಸ್ವರೂಪ ಬದಲಿಸುವುದೋ ಗೊತ್ತೇ ಆಗದು. ಅದಕ್ಕಾಗಿಯೇ ಅಫಜಲ್ಪುರ ತನ್ನೊಡಲಲ್ಲಿನ ರಾಜಕೀಯ, ಚಿತ್ರ ವಿಚಿತ್ರ ಬೆಳವಣಿಗೆಗಳಿಂದಾಗಿ ಜಿಲ್ಲಾದ್ಯಂತ ಚರ್ಚೆಯಲ್ಲಿರುವ ಕ್ಷೇತ್ರ.
ಅಭಿವೃದ್ಧಿ ವಿಚಾರದಲ್ಲಿ ಸುದ್ದಿಯಾಗದಿದ್ರೂ ರಾಜಕೀಯವಾಗಿ ಸದಾ ಸುದ್ದಿಗೆ ಗ್ರಾಸವಾಗೋ ಈ ಕ್ಷೇತ್ರ 2009ರಲ್ಲಿ ಕಾಂಗ್ರೆಸ್ ಶಾಸಕರನ್ನೇ ಹೊಂದಿದ್ದರೂ ತನ್ನಲ್ಲಿನ ಬೆಳವಣಿಗೆಗಳಿಂದಾಗಿ ಕೈ ಪಾಳಯದಲ್ಲೇ ಕಂಪನವಾಗುವಂತೆ ಮಾಡಿತ್ತು.
ಆಗ ನಡೆದ ಲೋಕ ಸಮರದಲ್ಲಿ ಬಿಜೆಪಿಗೆ ಜೈ ಎಂದಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರಿದ್ದರೂ 13,000ಕ್ಕೂ ಹೆಚ್ಚು ಬಹುಮತಗಳನ್ನು ಬಿಜೆಪಿ ಪಡೆದಿತ್ತು. ರಾಜಕೀಯದ ಈ ತಲ್ಲಣ ಬಲು ಹತ್ತಿರದಿಂದ ಗಮನಿಸಿರುವ ಕಾಂಗ್ರೆಸ್ ಹಿರಿಯ- ಕಿರಿಯ ನಾಯಕರು, ಕಾರ್ಯಕರ್ತರೆಲ್ಲರೂ ಅಫಜಲ್ಪುರ ಏನಂತದ್ರಿ ಎಂದೇ ಪ್ರಶ್ನಿಸುತ್ತ ಅಲ್ಲಿನ ತಮ್ಮ ಪಕ್ಷಗಳ ಬಲಾಬಲ, ಕಾರ್ಯಕರ್ತರ ಮೂಡ್, ಅಲ್ಲಿ ಹೇಗೆಲ್ಲಾ ಪ್ರಚಾರ ಮಾಡಬೇಕು, ಶಾಸಕರ ಬಲ- ಬೆಂಬಲ ಹೇಗೆ ಬಳಸಿಕೊಳ್ಳಬೇಕೆಂದು ಮಾತಿಗೆ ಮುಂದಾಗುತ್ತಿದ್ದಾರೆ.
ಜಿಪಂ, ತಾಪಂ, ಪಪಂ ಅನ್ಯರ ಪಾಲು: ಅಫಜಲ್ಪುರದ ರಾಜಕೀಯವೇ ವಿಚಿತ್ರ. ಇಲ್ಲಿ ಶಾಸಕರು ಕೈ ಪಕ್ಷದವರಿದ್ದರೂ ಜಿಪಂ, ತಾಪಂ, ಪಪಂ, ಗ್ರಾಪಂ, ಪಿಎಲ್ಡಿ ಬ್ಯಾಂಕ್... ಯಾವುದೇ ಚುನಾವಣೆ ನಡೆಯುವ ಕ್ಷೇತ್ರ ಪರಿಗಣಿಸಿದರೂ ಅಲ್ಲಿ ಅನ್ಯ ಪಕ್ಷಗಳವರದ್ದೇ ಜೋರಾಗಿರುತ್ತದೆ.
2013ರಲ್ಲಿ ನಡೆದ ಚುನಾವಣೆಯಲ್ಲಿ ಮಾಲಿಕಯ್ಯ ಕಾಂಗ್ರೆಸ್ನಿಂದ ಗೆದ್ದವರು. ಆದರೆ ಇಲ್ಲಿನ ಜಿಪಂ 6 ಕ್ಷೇತ್ರಗಳಲ್ಲಿ 5 ಬಿಜೆಪಿ ಪಾಲಾಗಿವೆ. ತಾಪಂನಲ್ಲೂ ಬಿಜೆಪಿ ಬಹುಮತ, ಪಪಂನಲ್ಲಿಯೂ ಕಾಂಗ್ರೆಸ್ ನೆಲೆ ಕಂಡಿಲ್ಲ. ಇನ್ನೂ ತಾಲೂಕಿನ ವ್ಯಾಪ್ತಿಯ ಸಿಂಹಪಾಲು ಪಂಚಾಯ್ತಿಗಳಲ್ಲಿಯೂ ಬಿಜೆಪಿ ಬಲ. ಕಾಂಗ್ರೆಸ್ ಶಾಸಕರಿದ್ದರೂ ಯಾಕೆ ಹೀಗೆ, ಅಸೆಂಬ್ಲಿ ಚುನಾವಣೆ ಹೊರತುಪಡಿಸಿ ಉಳಿದೆಲ್ಲ ಚುನಾವಣೆಗಳಲ್ಲಿ ಕೈ ಯಾಕೆ ಇಲ್ಲಿ ಸೋಲೊಪ್ಪುತ್ತದೆ... ಅಫಜಲ್ಪೂರ ರಾಜಕೀಯ ಏರಿಳಿತ ಕಂಡವರು ಕೇಳುವ ಪ್ರಶ್ನೆಗಳಿವು.
2009ರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಅಫಜಲ್ಪರದಲ್ಲಿ ಅದ್ಹೇಗೆ ಕಮಲ ಅರಳಿತು ಎಂಬಂಶ ಕೆಪಿಸಿಸಿ ವಲಯದಲ್ಲಿಯೂ ಬಿಸಿ ಚರ್ಚೆಗೆ ಗ್ರಾಸವಾಗಿದ್ದ ವಿದ್ಯಮಾನ. ಜೊತೆಗೇ ಖರ್ಗೆ ಕೂಡ ಅಫಜಲ್ಪುರದಲ್ಲಿನ ಈ ಬೆಳವಣಿಗೆಯೇ ಗೆಲವಿನ ಅಂತರ ಕುಗ್ಗುವಂತೆ ಮಾಡಿದ್ದು ಎಂದು ಚರ್ಚಿಸಿದ್ದರು.
ಮತದಾರನ ಚಿತ್ತ ಯಾರತ್ತ?: ಅಫಜಲ್ಪುರದ 5 ಹಾಗೂ ಗುಲ್ಬರ್ಗ ತಾಲೂಕಿನ ಫರತಾಬಾದ್ ಜಿಪಂ ಕ್ಷೇತ್ರಗಳ ಪೈಕಿ ಕರ್ಜಗಿ, ಬಡದಾಳ, ಮಾಶಾಳ, ಗೊಬ್ಬೂರ್, ಫರತಾಬಾದ್ ಬಿಜೆಪಿ ಸದಸ್ಯರನ್ನು ಹೊಂದಿವೆ. ಅತನೂರ್ ಮಾತ್ರ ಕಾಂಗ್ರೆಸ್ ಸದಸ್ಯನನ್ನು ಹೊಂದಿದೆ.
ಕಾಂಗ್ರೆಸ್ನ ಮಾಲಿಕಯ್ಯ ಗುತ್ತೇದಾರ್- ಬಿಜೆಪಿಯ ಎಂವೈ ಪಾಟೀಲ್ರ ಜಿದ್ದಾಜಿದ್ದಿ ಕಣ ಹಲವು ರಾಜಕೀಯ ತಿರುವುಗಳಿಂದ ಕೂಡಿರುತ್ತದೆ. 2013ರ ಅಸೆಂಬ್ಲಿಯಲ್ಲಿ ಇನ್ನೇನು ಕೆಜೆಪಿ ಇಲ್ಲಿಂದ ಗೆಲವು ಸಾಧಿಸುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಫಲಿತಾಂಶ ಬಂದು ಜನ 'ಕೈ' ಹಿಡಿದಾಗ ಅಚ್ಚರಿ ಕಾಡಿತ್ತು. ಈಗಲೂ 2014ರ ಲೋಕ ಸಮರದಲ್ಲಿ ಅಫಜಲ್ಪುರ ಮತದಾರರ ಮೂಡ್ ಹೇಗೆ ಎಂದು ವಿಶ್ಲೇಷಿಸುವುದೇ ಕಷ್ಟ.
ಜನರ ಅಸಮಾಧಾನ: ಅಫಜಲ್ಪುರ ಗಡಿ ತಾಲೂಕು. ಮೂಲ ಸೌಕರ್ಯಕ್ಕೆ ಸದಾ ಬರಗಾಲ. ಅದರಲ್ಲೂ ಜಿಲ್ಲಾ ಕೇಂದ್ರ ಗುಲ್ಬರ್ಗದಿಂದ ತಾಲೂಕಿನ ಕೊನೆಯ ಹೊಸೂರ್ವರೆಗಿನ 100 ಕಿಮೀ ರಸ್ತೆ ಹದಗೆಟ್ಟು ಹೋಗಿದೆ. ರಸ್ತೆ ದುರವಸ್ಥೆಯಿಂದಾಗಿಯೇ ಇಲ್ಲಿನ ಪ್ರಗತಿಗೆ ಪೆಟ್ಟು ಬಿದ್ದಿದೆ. ಈಚೆಗಷ್ಟೇ ಚೌಡಾಪುರ- ಕರ್ಜಗಿವರೆಗಿನ ರಸ್ತೆ ಸುಧಾರಣೆಗೆ ಯೋಗಾಯೋಗ ಕೂಡಿ ಬಂದಿದೆಯಾದರೂ ಕಾಮಗಾರಿ ಇನ್ನೂ ಶುರುವಾಗದೆ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಜನರ ಮನಸ್ಸು ಅರಿತು ಅವರಿಗೆ ಅದ್ಯಾರು ಸಮಾಧಾನ ಮಾಡಿ ಅವರ ಆಶೀರ್ವಾದ ಪಡೆಯುವರೋ ನೋಡಬೇಕಷ್ಟೆ.


ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ


ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಮಂತ್ರಿ ಆಗಬೇಕೆಂದು ಕನಸು ಕಂಡವರು. ಸಂಪುಟ ವಿಸ್ತರಣೆಯಾಗಿ ಮಂತ್ರಿಗಿರಿ ಕೈತಪ್ಪಿ ಹೋಯ್ತು ಎಂದಾಗ ಸಿಡಿದೆದ್ದಿದ್ದರು, ಪಕ್ಷದ ವಿರುದ್ಧವೇ ಗುಡುಗಿದ್ದರು. ಹೈಕಮಾಂಡ್ಗೆ ದೂರು ಹೇಳಲು ದೆಹಲಿಗೂ ದೌಡಾಯಿಸಿದ್ದರು. ಗುಲ್ಬರ್ಗಕ್ಕೆ ಸೋನಿಯಾ ಭೇಟಿ ವೇಳೆಯೂ ಮಾಲೀಕಯ್ಯ ಮುನಿದುಕೊಂಡೇ ಇದ್ದರು. 2014ರ ಲೋಕ ಸಮರದಲ್ಲಿ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಗಳಿಕೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳಕ್ಕೆ ಗುತ್ತೇದಾರ್ ಕಾರಣರಾಗುವರೇ ಎಂಬುದೇ ಈ ಕ್ಷಣದ ಕುತೂಹಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.