ಗುಲ್ಬರ್ಗಾ

ಆರಂಭದಲ್ಲೇ ಅಪಸ್ವರ

Published On :

ಕನ್ನಡಪ್ರಭ ವಾರ್ತೆ, ಹುಣಸಗಿ, ಏ.5
ನಾರಾಯಣಪುರದಿಂದ ಆರಂಭಗೊಂಡಿರುವ ಎಡದಂಡೆ ಮುಖ್ಯ ಕಾಲುವೆಯ ನವೀಕರಣ ಕಾಮಗಾರಿಗೆ ಈಗಲೇ ಅಪಸ್ವರ ಕೇಳಿಬರುತ್ತಿದೆ.
  ಕಾಲುವೆಯ ಒಳಬದಿಯಲ್ಲಿ ಎರಡು ಅಡಿಗಳವರೆಗೆ ಹಳೆಯ ಮಣ್ಣನ್ನು ತೆಗೆದು, ಹೊಸ ಮರುಮನ್ನು ಬಳಸಿ ಅದಕ್ಕೆ ಟ್ರಿಮ್ಮಿಂಗ್ ಮಾಡಬೇಕು. ಆದರೆ ಕಾಮಗಾರಿ ನಡೆದಿರುವ ಸ್ಥಳದಲ್ಲಿ ಕೆಬಿಜೆಎನ್ನೆಲ್ ಅಧಿಕಾರಿಗಳು ಕಾಣುತ್ತಿಲ್ಲ. ಬರೀ ಗುತ್ತಿಗೆದಾರರೇ ತಮ್ಮ ಮನಬಂದಂತೆ ಕಾಮಗಾರಿ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
  ಪ್ರಾರಂಭದ ಹಂತದಲ್ಲಿಯೇ ಕಾಮಗಾರಿ ಗುಣಮಟ್ಟದ್ದಾಗಿಲ್ಲ. ಗುಣಮಟ್ಟ ಕಾಪಾಡುವ ಗುಣಮಟ್ಟ ನಿಯಂತ್ರಣ ತಂಡ ಎಲ್ಲೂ ಕಂಡುಬರುತ್ತಿಲ್ಲ. ಇದಕ್ಕೆ ಕೆಲವರು ಚುನಾವಣಾ ಕೆಲಸದಲ್ಲಿ ತೊಡಗಿರುವುದಾಗಿ ತಿಳಿದು ಬಂದಿದೆ. ಹೀಗಾದರೆ 551 ಕೋಟಿ ವೆಚ್ಚದ ಎಡದಂಡೆ ಮುಖ್ಯ ಕಾಲುವೆಯ ಅಚ್ಚುಕಟ್ಟಿನಲ್ಲಿ ಕಾಲುವೆ ಕಾಮಗಾರಿಯ ಮುಕ್ತಾಯ ಯಾವ ರೀತಿ ಆಗುತ್ತಿದೆ ಎಂಬುದನ್ನು ಸರಳವಾಗಿ ಊಹಿಸಬಹುದು.
ಹಳೆಯ ಲೈನಿಂಗ್ ಮೇಲೆ ಆರ್ಸಿಸಿ: ಈಗಾಗಲೇ ಮುಖ್ಯ ಕಾಲುವೆಯ 0 ಕಿಮೀದಿಂದ 35 ಕಿಮೀವರೆಗೆ ಕಾಲುವೆಯ ಹಳೆಯ ಆರ್ಸಿಸಿ ಭಾಗಗಳನ್ನು ತೆಗೆಯಲಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಕಾಲುವೆಯ ಸಂಪೂರ್ಣ 2 ಪೀಟ್ ಆಳ ತೆಗೆಯಲಾಗುತ್ತಿದೆ. ಆದರೆ ಕೆಲವು ಭಾಗದಲ್ಲಿ ಮಾತ್ರ ಹಳೆಯ ಲೈನಿಂಗ್ ಮೇಲೆಯೇ ಆರ್ಸಿಸಿ ಹಾಕಲು ಸಿದ್ಧತೆ ಮಾಡಿಕೊಂಡಿರುವುದು ಆಘಾತಕಾರಿ ವಿಷಯವಾಗಿದೆ.
  ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಲ್ಲಿ ಅಧಿಕಾರಿಗಳು, ಗುಣಮಟ್ಟ ನಿಯಂತ್ರಣ ಸಿಬ್ಬಂದಿ, ಮೂಡಿ ಕನ್ಸ್ಟ್ರಕ್ಷನ್ ಕಂಪನಿ ಬೆಂಗಳೂರು ಗುಣಮಟ್ಟ ನಿಯಂತ್ರಣದ ಉಸ್ತುವಾರಿ ಪಡೆದಿದ್ದು, ಅವರೂ ಸ್ಥಳದಲ್ಲಿ ಕಂಡು ಬರುತ್ತಿಲ್ಲ ಎಂದು ರಾಜನಕೋಳೂರ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರದ್ದೇ ಕಾರುಬಾರು: ಪ್ರತಿ ಕಿಮೀ ಕಾಮಗಾರಿ ಬಳಿ ಯಾವ ಅಧಿಕಾರಿಗಳು ಇರಬೇಕು ಎನ್ನುವದನ್ನು ಸಹ ಗುತ್ತಿಗೆದಾರರೇ ಸೂಚಿಸುತ್ತಿದ್ದಾರೆ ಎಂದು ಪಾಟೀಲ್ ಆರೋಪಿಸಿದ್ದಾರೆ.
  ಇದುವರೆಗೆ ನಿಗಮದ ಗುಣಮಟ್ಟ ನಿಯಂತ್ರಣ ತಂಡ ಕೇವಲ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಇದುವರೆಗೂ ಈ ತಂಡವಾಗಲಿ ಮೂರನೇ ವೀಕ್ಷಣಾ ದಳವಾಗಲಿ ನಿರೀಕ್ಷಿತ ಪ್ರಮಾಣದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ಆರೋಪಿಸುತ್ತಾರೆ.
ತಿಂಗಳಾದರೂ ಭೇಟಿ ನೀಡಿಲ್ಲ: ಹಲವು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ಕಾಮಗಾರಿಗಾಗಿ ಸುಮಾರು 1500 ಕೋಟಿ ಖರ್ಚು ಮಾಡಲಾಗುತ್ತಿದೆ. ಕಾಮಗಾರಿ ಆರಂಭವಾಗಿ ತಿಂಗಳಾದರೂ ನಿಗಮದ ಎಂಡಿ ಸೇರಿದಂತೆ ಇತರರು ಇದುವರೆಗೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡದಿರುವುದು ವಿಷಾದನೀಯ. ಈ ಹಿಂದೆ ನಡೆದ ನವೀಕರಣ ಸಂದರ್ಭದಲ್ಲಿ ವಾರಕ್ಕೊಮ್ಮೆಯಾದರೂ ಎಂಡಿ ಭೇಟಿ ನೀಡುತ್ತಿದ್ದರು. ಆದರೆ ಸದ್ಯ ಹೆಚ್ಚುವರಿ ಮುಖ್ಯ ಅಭಿಯಂತರರು ಕಾಲುವೆ ನವಿಕರಣದ ಮೇಲ್ವಿಚಾರಣೆ ಮಾಡಲಿದ್ದಾರೆ. ಇದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.