ಬಿಂದಿಗೆ ಸಾಲು ಹೆಚ್ಚಾಯ್ತು, ನೀರಿನ ಪೂರೈಕೆ ಸಾಲದಾಯ್ತು
ಮಂಜುನಾಥ ಸ್ವಾಮಿ
ಕನ್ನಡಪ್ರಭ ವಾರ್ತೆ ಯಾದಗಿರಿ ಏ.7
ಬೇಸಿಗೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ 389 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸಿದೆ. ಇದರಲ್ಲಿ 106 ಗ್ರಾಮಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಯಾದಗಿರಿ 50 ಹಾಗೂ ಶಹಾಪುರದ 59 ಗ್ರಾಮಗಳಿದ್ದು, ಇಲ್ಲಿನ ನೀರಿನ ಕಾಮಗಾರಿಗಳಿಗೆ ರು. 5.9 ಕೋಟಿ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಮುಂದಿನ ತಿಂಗಳು ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ.
ಟ್ಯಾಂಕರ್ಗಳ ಮೂಲಕ ಪೂರೈಕೆ: ಜಿಲ್ಲೆಯ 19 ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಯಾದಗಿರಿ 17, ಹಾಗೂ ಸುರಪುರದ 2 ಗ್ರಾಮಗಳಿಗೆ ರು. 75 ಲಕ್ಷ ವೆಚ್ಚದಲ್ಲಿ ಟ್ಯಾಂಕರ್ಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ.
ಸಮಸ್ಯೆ ಉಲ್ಬಣ: ಜಿಲ್ಲೆಯಲ್ಲಿ 264 ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳಿದ್ದು, ಯಾದಗಿರಿ ತಾಲೂಕಿನಲ್ಲಿ 58, ಶಹಾಪುರ ತಾಲೂಕಿನಲ್ಲಿ 126 ಹಾಗೂ ಸುರಪುರದಲ್ಲಿ 85 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆ ಮಾಡಲು ಮತ್ತು ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲು ಜಿಲ್ಲಾಡಳಿತ ರು. 5.19 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಮುಗಿದರೆ, ಇನ್ನು ಕೆಲವು ಕಾಮಗಾರಿಗಳು ಪ್ರಾರಂಭವಾಗಬೇಕಾಗಿದೆ.
ಅನುಷ್ಠಾನವಾಗದ ಗ್ರಾಮ ಯೋಜನೆ: ಜಿಲ್ಲೆಯಲ್ಲಿ ಕಿರದಳ್ಳಿ, ಅರಕೇರಾ, ಗೋಗಿ, ಗೊಂದೆಡಗಿ, ಆನೂರ.ಕೆ., ಯರಗೋಳ ಗ್ರಾಮ ಸೇರಿದಂತೆ ಒಟ್ಟು 39 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಗ್ರಾಮಗಳಿಗೆ ಸರಬರಾಜು ಮಾಡಲು ಪೈಪ್ಲೈನ್ ಕಾಮಗಾರಿಗಳಿಗೆ ವಿವಿಧ ಗ್ರಾಮಗಳ ಬಳಿ ರೇಲ್ವೆ ಹಳಿ ಇರುವುದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಯೋಜನೆ ಕಾಮಗಾರಿಗಳಿಗೆ ರೇಲ್ವೆ ಇಲಾಖೆ ಅನುಮತಿ ಬೇಕು. ಆದರೆ 6 ವರ್ಷ ಕಳೆದರೂ, ರೇಲ್ವೆ ಇಲಾಖೆ ಅನುಮತಿ ಸಿಗದೆ ವಿಳಂಬವಾಗುತ್ತಿವೆ ಎಂಬುದು ಅಧಿಕಾರಿಗಳ ವಾದ. ಆದರೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ವಕೇತ್ರವಾದ ಕೆಲವು ಗ್ರಾಮಗಳಿಗೆ ಅನುಮತಿ ಸಿಕ್ಕಿದೆ. ಆದರೆ ಈ ಗ್ರಾಮಗಳ ಯೋಜನೆಗೆ ಹಸಿರು ನಿಶಾನೆ ದೊರಕಿಲ್ಲ. ಆದುದರಿಂದ ಯೋಜನೆಯ ಅನೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.
ಕೇವಲ ರೇಲ್ವೆ ಇಲಾಖೆ ನೆಪವೊಂದನ್ನೇ ಮುಂದಿಟ್ಟುಕೊಂಡು, ಬೇರೆ ಹಳ್ಳಿಗಳಿಗೆ ಕುಡಿವ ನೀರು ಸರಬರಾಜು ಮಾಡದೆ ಇರುವುದು ಸಾರ್ವಜನಿಕರಲ್ಲಿ ಅಸಮಧಾನ ಉಂಟು ಮಾಡಿದೆ.
ಸಮನ್ವಯದ ಕೊರತೆ: ಅನೂರ ಕೆ ಮತ್ತು ಇತರೆ ಗ್ರಾಮಗಳಿಗೆ ಕುಡಿವ ನೀರಿನ ಕಾಮಗಾರಿಗೆ ಈಗಾಗಲೇ ಎಕ್ಸ್ ಪ್ರೆಸ್ ಫೀಡರ್ ಲೈನ್ ಒದಗಿಸಿದ್ದು, ಜೆಸ್ಕಾಂ ಇಲಾಖೆಯವರು ಕೇವಲ 8 ತಾಸು ವಿದ್ಯುತ್ ಒದಗಿಸುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಊಂಟಾಗುತ್ತಿದೆ. ಇದರಿಂದ 5 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿದ್ದು, ಉಳಿದ 4 ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಈ ಸಮಸ್ಯೆಯನ್ನು ಬಗೆ ಹರಿಸುವಂತೆ ಜಿಲ್ಲೆಯ ಉಪವಿಭಾಗದ ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಸಲ್ಲಿಸಿದ್ದಾರೆ.
ಜಿಪಂ ಅಧಿಕಾರಿಗಳು ಮತ್ತು ಜೆಸ್ಕಾಂ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಇನ್ನೂ ಈ ಹಳ್ಳಿಗಳಿಗೆ ನೀರಿನ ಸೌಲಭ್ಯ ಸಿಗುತ್ತಿಲ್ಲ. ಇಲ್ಲಿಯವರೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಷ್ಟು ವರ್ಷಗಳಿಂದಲೂ ಒಬ್ಬರ ಮೇಲೊಬ್ಬರು ಬೆರಳು ಮಾಡಿ ತೋರಿಸುವುದನ್ನು ಬಿಟ್ಟರೆ, ಬೇರೆ ಪ್ರಗತಿ ಕಾಣುತ್ತಿಲ್ಲವೆಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಶುದ್ಧ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಆದರೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಬೇಸಿಗೆ ಆರಂಭದಲ್ಲಿ ಯೋಜನೆಗಳ ಅನುಷ್ಠಾನ ಯಾವಾಗ ಪೂರ್ಣಗೊಳ್ಳುತ್ತದೋ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

