ಮಾನವೀಯತೆ ಮರೆತವರು
ಯಾದಗಿರಿ: ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ದಿನೇ ದಿನೆ ಹಚ್ಚಾಗುತ್ತಲೇ ಇದೆ. ಹಳ್ಳಿಯ ಜನರು ಕಿಲೋ ಮೀಟರ್ಗಳವರೆಗೂ ನಡೆದುಕೊಂಡು ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಸಮೀಪದ ತಡಬಿಡಿ ಗ್ರಾಮದಲ್ಲಿ ಕುಡಿಯುವ ನೀರನ ಸಮಸ್ಯೆ ಎದುರಾಗಿದೆ. ಕೊಡ ನೀರಿಗಾಗಿ ಗ್ರಾಮಸ್ಥರು ಅಲೆ ಅಲೆದು ಸುಸ್ತಾಗುತ್ತಿದ್ದಾರೆ.
ತಡಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪವಿರುವ ಈ ಸಾರ್ವಜನಿಕ ನಳದ ಪೈಪು ಸೀಳಿ ಹೋಗಿದೆ. ಇದರಿಂದ ಚೆಲ್ಲಾಪಿಲ್ಲಿಯಾಗಿ ನೀರು ಹರಿಯುತ್ತದೆ. ನೀರು ಬರುವ ನಳದ ಪೈಪ್ ಕೈಗೆ ಕಿತ್ತು ಬರುತ್ತದೆ. ಅದಕ್ಕೆ ಸಾರ್ವಜನಿಕರು ಪ್ಲಾಸ್ಟಿಕ್ ಚೀಲವನ್ನು ಕಟ್ಟಿ ನೀರನ್ನು ಪಡೆಯುತ್ತಿದ್ದಾರೆ.
ಹೊಂಡು, ಹೊಲಸು ನೀರು: ಈ ನಳದಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೊಂಡು ಮತ್ತು ಹೊಲಸು ನೀರು ಬರುವುದರ ಜೊತೆಗೆ ಗಬ್ಬು ನಾರುತ್ತದೆ. ಈ ನಳದಿಂದ ನೀರನ್ನು ಪಡೆಯ ಬೇಕಾದರೆ ಕನಿಷ್ಠ ಅರ್ಧ ಗಂಟೆ ನಳವನ್ನು ಚಾಲು ಮಾಡಿ ಬಿಡಬೇಕು. ಅದಾದ ನಂತರ ಬಡಾವಣೆಯ ನಿವಾಸಿಗಳು ನೀರನ್ನು ಪಡೆಯಬೇಕಾಗುತ್ತದೆ.
ಸಾರ್ವಜನಿಕ ನಳ ಇರುವುದರಿಂದ ಬಡಾವಣೆಯಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಪಂಚಾಯ್ತಿಯ ಅನತಿ ದೂರದಲ್ಲಿರುವ ಈ ನಳ ಪಂಚಾಯ್ತಿ ಸದಸ್ಯರ ಗಮನಕ್ಕೂ ಇದೆ. ಆದರೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆಂದು ಬಡಾವಣೆಯ ನಿವಾಸಿಗಳು ಆರೋಪಿಸುತ್ತಾರೆ.
ಜಿಲಾಡಳಿತವು ಅಧಿಕಾರಿಗಳ ಸಭೆಯಲ್ಲಿ ಎಲ್ಲಿಯು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಆ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತದೆ.
ನಳದಲ್ಲಿ ಕೊಳಕು ನೀರು: ಬಡಾವಣೆ ಮೂರರಲ್ಲಿ ಸಾರ್ವಜನಿಕ ನಳದಲ್ಲಿ ಹೊಲಸು ನೀರು ಬರುತ್ತಿದೆ. ಇದನ್ನೇ ಗ್ರಾಮಸ್ಥರು ಕುಡಿಯುತ್ತಿದ್ದಾರೆ. ಇದರಿಂದಾಗಿ ಬಡಾವಣೆಯ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.
ಇದರ ಬಗ್ಗೆ ಪಂಚಾಯ್ತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಇನ್ನೂ ಪಿಡಿಒ ನಮ್ಮ ಕೈಗೆ ಸಿಗುವುದಿಲ್ಲ. ಇನ್ನು ಸಮಸ್ಯೆಯನ್ನು ಆಲಿಸುವುದು ದೂರದ ಮಾತು. ಯಾವಾಗಾದರೂ ಒಮ್ಮೆ ಪಂಚಾಯ್ತಿಗೆ ಬರುತ್ತಾರೆ. ಆಗ ಸಮಸ್ಯೆಯನ್ನು ಹೇಳಿದರೆ ನೋಡೋಣ ಎಂದು ಹಾರಿಕೆ ಉತ್ತರ ಕೊಡುತ್ತಾರೆ ಎಂದು ಬಡಾವಣೆಯ ನಿವಾಸಿ ರಂಗಮ್ಮ ದೂರಿದ್ದಾರೆ.
ನಿವಾಸಿಗಳ ಆಗ್ರಹ: ಆದರೆ ಅಧಿಕಾರಿಗಳು ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ ಎಂಬುದಕ್ಕೆ ತಡಬಿಡಿ ಗ್ರಾಮ ಸಾಕ್ಷಿಯಾಗಿದೆ. ಆದಕಾರಣ ಜಿಲ್ಲಾಡಳಿತವು ಇತ್ತ ಕಡೆ ಗಮನಹರಿಸಿ ಸ್ವಚ್ಛ ಕುಡಿವ ನೀರು ಬಿಡಲು ಕ್ರಮ ತೆಗೆದುಕೊಳ್ಳಬೇಕೆಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.
ಚುನಾವಣಾ ಕಾರ್ಯದ ನೆಪ ಹೇಳಿ ಸಾರ್ವಜನಿಕ ಕಾರ್ಯಗಳಿಂದ ದೂರ ಉಳಿದಿದ್ದ ಅಧಿಕಾರಿಗಳು ಇನ್ನಾದರೂ ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

