ಜಿಪಂ ಗದ್ದುಗೆ ಸುತ್ತ ನೀರೆಯರ ಹುತ್ತ
ಕ.ಪ್ರ. ವಾರ್ತೆ , ಗುಲ್ಬರ್ಗ , ಏ.30
ಇಲ್ಲಿನ ಜಿಲ್ಲಾ ಪಂಚಾಯ್ತಿ ಮೂರನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳೆರಡೂ ಮಹಿಳೆಯರ ಉಡಿಗೆ ಬಿದ್ದಿವೆ. ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ(ಮಹಿಳೆ)ಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ(ಮಹಿಳೆ)ಗೆ ಮೀಸಲಾಗಿದೆ. ಹೀಗಾಗಿ ಈ ಬಾರಿ ಜಿಪಂ ಆಡಳಿತದ ಅತ್ಯುನ್ನತ 2 ಹುದ್ದೆಗಳಲ್ಲಿ ನೀರೆಯರಿಬ್ಬರು ರಾರಾಜಿಸುವುದು ನಿಶ್ಚಿತವಾಗಿದೆ.
ಇತ್ತ ಮೀಸಲಾತಿ ಹೊರಬೀಳುತ್ತಿದ್ದಂತೆಯೇ ಆಕಾಂಕ್ಷಿಗಳು ತಮ್ಮ ತಮ್ಮ ರಾಜಕೀಯ ಆಸರೆದಾತರ ಸಂಪರ್ಕದಲ್ಲಿದ್ದು ಗದ್ದುಗೆ ಹತ್ತಲು ತೆರೆಮರೆ ಕಸರತ್ತು ಶುರು ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿಗಳಲ್ಲಂತೂ ಈ ಹುದ್ದೆಗಳಲ್ಲಿ ಹತ್ತ ಬಯಸುವವರ ಪೈಪೋಟಿ ಭಾರಿ ಪ್ರಮಾಣದಲ್ಲಿ ಕಂಡುಬಂದಿದೆ.
ಆರಂಭದ 2 ಅವಧಿಯಲ್ಲೇ ಇಲ್ಲಿನ ಜಿಪಂನಲ್ಲಿ ಅವಿಶ್ವಾಸ ಪರ್ವ ಶುರುವಾಗಿ 50 ತಿಂಗಳಲ್ಲಿ ಕಡೆ ಪಕ್ಷ 30 ತಿಂಗಳು ಈ ಪರ್ವ ತನ್ನ ಆಟಾಟೋಪ ಪ್ರದರ್ಶಿಸಿದ್ದಲ್ಲದೆ ಅಲ್ಪಾವಧಿಯಲ್ಲೇ ನಾಲ್ವರು ಅಧ್ಯಕ್ಷರು, ನಾಲ್ವರು ಉಪಾಧ್ಯಕ್ಷರನ್ನು ಈ ಜಿಪಂ ಕಂಡಿದ್ದು ಇತಿಹಾಸ.
ರಾಜಕೀಯ ಹೊಸ ಸಮೀಕರಣ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಂತಹ ಪ್ರಮುಖ ಪಕ್ಷಗಳಿಂದ ಗೆದ್ದು ಬಂದಂತಹ ಸದಸ್ಯರಲ್ಲಿ ಅನೇಕರು ಅನ್ಯ ಪಕ್ಷಗಳತ್ತ ಒಲವು ತೋರಿದ್ದರಿಂದ ಇಲ್ಲಿನ ಆಡಳಿತ ಒಮ್ಮೆ 'ಕೈ' ವಶವಾದರೆ, ಇನ್ನೊಮ್ಮೆ ಗದ್ದುಗೆಯಲ್ಲಿ ಕಮಲ ಅರಳಿತ್ತು, ಇವೆರಡನ್ನೂ ಹೊರತುಪಡಿಸಿ ಜೆಡಿಎಸ್ ಸಹ ಈ ಗದ್ದುಗೆಯಲ್ಲಿ ರಾರಾಜಿಸಿದ್ದು ಇತಿಹಾಸ.
ಇದೀಗ ಮೂರನೇ ಅವಧಿಯ ಮೀಸಲಾತಿ ಪಟ್ಟಿಯಂತೆ ಇಲ್ಲಿನ ರಾಜಕೀಯ ಹೊಸ ಸಮೀಕರಣಗಳಿಗೆ ಸಾಕ್ಷಿಯಾಗುತ್ತಿದೆಯಲ್ಲದೆ ಮತ್ತೆ ಎಲ್ಲಾ ಪಕ್ಷಗಳ ಸದಸ್ಯರು ಅನ್ಯ ಪಕ್ಷಗಳ ಒಲವು- ನಿಲುವು ಬಿಟ್ಟುಬಿಡೋಣ ಎಂದು ತಮ್ಮ ಅದೃಷ್ಟ ಖುಲಾಯಿಸುವುದೋ ಎಂದು ಕಾಯುತ್ತಿದ್ದಾರೆ. ಮಹಿಳೆಯರ ಪತಿರಾಯರು ಸಹ ತಮ್ಮ ತಮ್ಮ ಪತ್ನಿಯರನ್ನು ಮೀಸಲಾತಿ ಚೌಕಟ್ಟಲ್ಲೇ ಅದ್ಹೇಗೆ ಗದ್ದುಗೆ ಹತ್ತಿಸುವುದು ಎಂದು ಅತ್ತಿಂದಿತ್ತ, ಇತ್ತಿಂದತ್ತ ನಾಯಕರು, ಶಾಸಕರು, ಪುಢಾರಿಗಳು, ಸಚಿವರುಗಳ ಮನೆ ಎಡತಾಕುತ್ತಿದ್ದಾರೆ.
ಕಾಂಗ್ರೆಸ್ ಆಕಾಂಕ್ಷಿಗಳು ಬಹಳ: ಮೀಸಲಾತಿ ಅನ್ವಯ ಕಾಂಗ್ರೆಸ್ನಲ್ಲಿ ಅಧ್ಯಕ್ಷ ಪದವಿಗೆ ಈಗಿನ ಉಪಾಧ್ಯಕ್ಷೆ ಅನಿತಾ ಪವನ ವಳಕೇರಿ, ರೇಣುಕಾ ಹೇಮಲಾ ಚವ್ಹಾಣ್ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಈಗಾಗಲೇ ಉಪಾಧ್ಯಕ್ಷರಾಗಿರುವ ಅನಿತಾ ವಳಕೇರಿ ಅಧ್ಯಕ್ಷ ಹುದ್ದೆಗೆ ಅರ್ಹರು ಎಂಬ ಚರ್ಚೆಗಳು ಸಾಗಿವೆ. ಆದರೆ ಉಪಾಧ್ಯಕ್ಷರಾಗಿರುವ ಅನಿತಾಗಿಂತ ತಮಗೂ ಒಂದು ಅವಕಾಶ ಕೊಡಿ ಎಂದು ಹೇಮಲಾ ಚವ್ಹಾಣ್ ತಮ್ಮ ಪತ್ನಿ ಪರವಾಗಿ ಲಾಬಿ ಶುರುಮಾಡಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ 'ಕೈ' ಪಕ್ಷದಿಂದ ಕಮಲಾಬಾಯಿ ಬಸವರಾಜ ಪಾಟೀಲ್, ಮಂದಾಕಿನಿ ನಿಷ್ಟಿ, ಮೀನಾಕ್ಷಿ ಗುರು ಪಾಟೀಲ್, ಕಸ್ತೂರಿಬಾಯಿ ಗೌಡತಿ, ಅಕ್ಕಮಹಾದೇವಿ ರುದ್ರಗೌಡ, ಹೆಸರುಗಳು ಕೇಳಿಬರುತ್ತಿವೆ.
ಬಿಜೆಪಿಯಲ್ಲೂ ಲಾಬಿ ಬಲುಜೋರು: ಲಾಬಿ ಮಾಡುವಲ್ಲಿ ತಾವೂ ಯಾರಿಗೇನು ಕಮ್ಮಿ ಇಲ್ಲ ಎಂದು ಬಿಜೆಪಿಯೂ ಈ ಬಾರಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಬಲವಾದಂತಹ ಲಾಬಿಗೆ ಇಳಿದಿದೆ. ಮಹಿಳೆಯರದ್ದೇ ಅವಕಾಶ ಎಂದಾದ ಮೇಲೆ ರಾಜಕೀಯವಾಗಿ ತುಂಬಾ ಪ್ರಭಾವ ಇರುವ ಕೆಲವು ಸದಸ್ಯರು ಮೌನದ ಮೊರೆ ಹೊಕ್ಕಿದ್ದಾರಾದರೂ ಗೆಳೆತನಕ್ಕೆ ಕಟ್ಟುಬಿದ್ದು ಅವರು ತಮ್ಮ ಗೆಳೆಯರ ಪತ್ನಿಯರ ಪರವಾಗಿ ಲಾಬಿಗೆ ಮುಂದಾಗಿದ್ದಾರೆ.
ರೇಣುಕಾ ಗಂಗಾರಂ, ಪಾರ್ವತಿ ಶಂಕರ ಚವ್ಹಾಣ್, ಮಂಜುಳಾ ಕುಸ್ತಿ, ಶ್ರೀಮತಿ ಪರಶುರಾಂ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ಸಾಲಲ್ಲಿ ಕಂಡರೆ, ಅನ್ನಪೂರ್ಣ ಅರುಣ ಪಾಟೀಲ್, ಅರ್ಚನಾ ದಿಲೀಪ್ ಪಾಟೀಲ್, ಸುನಂದಾ ರವಿರಾಜ್ ಕೊರವಿ ಇವರ ಹೆಸರುಗಳು ಮುಂಚೂಣಿಯಲ್ಲಿವೆ. ಕೆಜೆಪಿ- ಬಿಜೆಪಿ ಮೈತ್ರಿ, ಪಕ್ಷದೊಂದಿಗೆ ಗುರುತಿಸಿಕೊಂಡ ಸದಸ್ಯರ ಪಕ್ಷ ನಿಷ್ಠೆ ಇತ್ಯಾದಿಗಳೆಲ್ಲವೂ ಈ ಬಾರಿ ಪರೀಕ್ಷೆಗೆ ಬರುವ ಸಂಭವಗಳಿರುವುದರಿಂದ ಬಿಜೆಪಿ ಈ ಬಾರಿ ಯಾರಿಗೆ ಅವಕಾಶ ನೀಡುವುದೋ ಎಂಬುದೇ ನಿಗೂಢವಾಗಿದೆ.
'ಅಭಿವೃದ್ಧಿ ರಂಗ' ಪ್ರತ್ಯೇಕ ಗುಂಪು: ಬಿಜೆಪಿಗೆ ಕಳೆದ 2 ಅವಧಿಯಲ್ಲಿ ಸ್ವಪಕ್ಷೀಯರೇ ಬೇತಾಳದಂತೆ ಕಾಡಿದರು, 7 ಸದಸ್ಯರು ತೆಗೆದುಕೊಂಡ ನಿಲುವು ಪಕ್ಷ ಇಲ್ಲಿನ ಆಡಳಿತ ಗದ್ದುಗೆಯಿಂದಲೇ ಇಳಿಯುವಂತೆ ಮಾಡಿತ್ತು. ಹೀಗಾಗಿ ಪಕ್ಷದ ಜಿಲ್ಲಾ ನಾಯಕರು ಈ ಬಾರಿ ಜಿಪಂ ಗದ್ದುಗೆ ಹತ್ತುವ ಅವಕಾಶಕ್ಕಾಗಿ ಜಾಣರಾದವರು ಹಾಗೂ ಪಕ್ಷ ನಿಷ್ಠೆ ಇರುವವರನ್ನೇ ಆಯ್ಕೆ ಮಾಡುವ ಸಂಭವಗಳೇ ಹೆಚ್ಚು ಎನ್ನಲಾಗುತ್ತಿದೆ.
ಬಿಜೆಪಿಯ 8 ಸದಸ್ಯರು 'ಅಭಿವೃದ್ಧಿ ರಂಗ' ಎಂದು ಪ್ರತ್ಯೇಕ ಗುಂಪು ಮಾಡಿಕೊಂಡು ಜಿಪಂ ಸದನದಲ್ಲಿ ಪ್ರತ್ಯೇಕ ಆಸನ ಪಡೆದಿದ್ದರು. ಆದರೆ ಇವರ ರಾಜಕೀಯ 'ಗಾಡ್ ಫಾದರ್' ಆಗಿದ್ದ ಕೆಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ನಾಯಕರೇ ಬಿಜೆಪಿಗೆ ಮರಳಿದ್ದರಿಂದ ಈ ಅಷ್ಟ ಸದಸ್ಯರೂ ಬಿಜೆಪಿಗೆ ಮರಳಿದ್ದಾರೆ. ಆದರೆ ಇಲ್ಲಿ ಈ ಸದಸ್ಯರ ನಿಲುವು ಪಕ್ಷ ಅದ್ಹೇಗೆ ಸ್ವೀಕರಿಸುವುದೋ ಎಂಬುದೇ ಕುತೂಹಲದ ವಿಚಾರ.
20 ಸದಸ್ಯ ಬಲದ ಬಿಜೆಪಿಗೆ ಅಧಿಕಾರ ಗದ್ದುಗೆ ಹತ್ತಲು ಇಬ್ಬರು ಸದಸ್ಯರ ನೆರವು ಬೇಕು. ಮೊದಲ ಅವಧಿಗೆ ಜೆಡಿಎಸ್ನ ಒಲವು ಗಳಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಇಲ್ಲಿ ಗದ್ದುಗೆ ಹತ್ತಿತ್ತು. ಈ ಬಾರಿ ಕಮಲಕ್ಕೆ ಯಾರು ಆಸರೆಯಾಗುವರೋ ಕಾದುನೋಡಬೇಕಷ್ಟೆ.
ಕಾಂಗ್ರೆಸ್ನಲ್ಲೂ ಗೊಂದಲಗಳು ಅನೇಕ: ಇಲ್ಲಿ 19 ಸದಸ್ಯ ಬಲವಿರುವ ಕಾಂಗ್ರೆಸ್ನಲ್ಲಿಯೂ ರಾಜಕೀಯ ಗೊಂದಗಳು ಹಲವು. ಇಬ್ಬರು ಸದಸ್ಯರು ಪಕ್ಷದ್ರೋಹ ಎಸಗಿದ್ದಾರೆಂದು ಆರೋಪಿಸಿ ಡಿಸಿಸಿ ಆಯೋಗಕ್ಕೆ ದೂರಿತ್ತಲ್ಲದೆ ಅವರ ಸದಸ್ಯತ್ವ ರದ್ದತಿಗೂ ಕೋರಿತ್ತು. ನಂತರದ ಚುನಾವಣೆಗಳಲ್ಲಿ ಪಕ್ಷಕ್ಕೆ ಇವರ ಬೆಂಬಲ ಬೇಕಾಗಿದ್ದರಿಂದ ಜಿಲ್ಲಾ ಕಾಂಗ್ರೆಸ್ ಕಮಿಟಿ ಈ ವಿಚಾರದಲ್ಲಿ ಮೌನವಾಗಿದೆ.
ಸೈಬಣ್ಣ ಅಡ್ಡೇಸಿ, ಪುಷ್ಪಾವತಿ ಇವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆಂದು ದೂರಲಾಗಿತ್ತಾದರೂ ಈಗ ಅಧಿಕಾರ ಗದ್ದುಗೆ ಹತ್ತುವ ಸಮಯದಲ್ಲಿ ಕಾಂಗ್ರೆಸ್ಗೆ ಈ ಇಬ್ಬರು ಸದಸ್ಯರೊಂದಿಗೆ ಇನ್ನೂ ಮೂವರು ಸದಸ್ಯರ ಬೆಂಬಲ ಬೇಕೇಬೇಕು. ಹೀಗಾಗಿ ಕಳೆದ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಕೆಲವರ ಒಲವು ಪಡೆಯುವಲ್ಲಿ ಯಶವಾದಂತೆ ಕಾಂಗ್ರೆಸ್ ಈಗಲೂ ಆಪರೇಷನ್ ರಾಜಕೀಯ ಮಾಡುವುದೋ ಎಂಬುದೇ ಸಸ್ಪೆಂನ್ಸ್.
ಜೆಡಿಎಸ್- ಪಕ್ಷೇತರರತ್ತ ಎಲ್ಲರ ಚಿತ್ತ
ಮೂವರು ಸದಸ್ಯ ಬಲದ ಜೆಡಿಎಸ್ ಒಬ್ಬ ಪಕ್ಷೇತರರ ರಾಜಕೀಯ ನಿಲುವು ಏನು ಎತ್ತ ಎಂಬುದು ಪ್ರತಿಬಾರಿಯ ಅಧ್ಯಕ್ಷಗಿರಿ ಚುನಾವಣೆಯಲ್ಲಿ, ಸರ್ವರ ಚರ್ಚೆಗೆ ವಸ್ತುವಾಗುತ್ತದೆ. ಈ ಬಾರಿಯೂ ಹಾಗೇ ಆಗಿದೆ. ಕಳೆದೆರಡು ಬಾರಿ ಜೆಡಿಎಸ್ ತನ್ನ ಒಲವು ಪ್ರಕಟಿಸಿದ್ದರ ಜೊತೆಗೆ ಜಿಪಂನಲ್ಲಿ ಉನ್ನತ ಹುದ್ದೆ, ಸ್ಥಾಯಿ ಸಮಿತಿಗಳಲ್ಲಿ ರಾರಾಜಿಸುವ ಮೂಲಕ ರಾಜಕೀಯವಾಗಿ ಲಾಭದಲ್ಲಿತ್ತು. ಈ ಬಾರಿ ಈ ಪಕ್ಷದ ಸದಸ್ಯರ ನಿಲುವು ಏನಾಗಬಹುದು ಎಂಬುದು ಕುತೂಹಲಕರ ಸಂಗತಿ. ಪಕ್ಷೇತರ ಸದಸ್ಯೆ ಶೋಭಾ ಬಾಣಿ ಅವರೂ ರಾಜಕೀಯವಾಗಿ ಯಾವ ನಿಲುವು ಪ್ರದರ್ಶಿಸುವರೋ ಎಂಬುದೂ ಸಹ ಚರ್ಚೆಗೆ ಗ್ರಾಸವಾಗಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಜಿಪಂ ಅಂಗಳದಲ್ಲಿ ರಾಜಕೀಯ ಗರಿಗೆದರಿದೆ. ಬರುವ ದಿನಗಳಲ್ಲಿ ಅದು ಇನ್ನೂ ಹೊಸ ತಿರುವು ಪಡೆಯುವ ಲಕ್ಷಣಗಳಿವೆ.
ಪಕ್ಷಗಳ ಬಲಾಬಲ
ಒಟ್ಟು ಸದಸ್ಯರು- 43
ಕಾಂಗ್ರೆಸ್- 19
ಬಿಜೆಪಿ- 20
ಜೆಡಿಎಸ್- 3
ಪಕ್ಷೇತರ- 1
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

