ಸುದ್ದಿ ಸಂಕ್ಷೇಪ
ದೇವೇಗೌಡ, ಮನಗೂಳಿ ಪ್ರತಿಮೆ ಅನಾವರಣ 12ಕ್ಕೆ
ರಾಯಚೂರು: ಸದಾ ಬರಗಾಲದಿಂದ ಕೂಡಿದ್ದ ಜಿಲ್ಲೆ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಸಂಪೂರ್ಣ ನೀರಾವರಿಗೆ ಒಳಪಡಲು ಕಾರಣರಾದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಕಂಚಿನ ಪ್ರತಿಮೆಗಳನ್ನು ಕೃತಜ್ಞಾ ದ್ಯೋತಕವಾಗಿ, ಪಕ್ಷಾತೀತವಾಗಿ ಫೆ.12ರಂದು ಅನಾವರಣಗೊಳಿಸಲಾಗುವುದು ಎಂದು ಗುತ್ತಿ ಬಸವಣ್ಣ ಏತ ನೀರಾವರಿ ರೈತ ಹಿತರಕ್ಷಣಾ ಸಮಿತಿ ಮುಖಂಡರು ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡರು, ಸಿದ್ದೇಶ್ವರ ಶ್ರೀಗಳು 1994ರಲ್ಲಿ ಅಂದಿನ ಶಾಸಕ ಎಂ.ಸಿ.ಮನಗೂಳಿ ಅವರಿಗೆ ಈ ಭಾಗದ ರೈತರ ಭೂಮಿಗೆ ನೀರು, ಸಿಂದಗಿ ಪಟ್ಟಣಕ್ಕೆ ಕುಡಿವ ನೀರು ಪೂರೈಸಿ ಎಂದು ಸಲಹೆ ನೀಡಿದ್ದರು. ಅವರ ಅಣತಿಯಂತೆ ಮನಗೂಳಿ ಅವರು ಈ ಕಾರ್ಯಕ್ಕೆ ಚಾಲನೆ ನೀಡುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪಣ ತೊಟ್ಟು 3 ವರ್ಷ ಬರಿಗಾಲಿನಲ್ಲಿ ಸಂಚರಿಸಿ ನೀರಾವರಿ ಅನುಷ್ಠಾನಕ್ಕೆ ಪ್ರಯತ್ನಿಸಿದರು. ಅಂದಿನ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಜೆ.ಎಚ್.ಪಟೇಲರೊಂದಿಗೆ 1997ರಲ್ಲಿ ಸಿಂದಗಿಗೆ ಆಗಮಿಸಿ ಈ ಯೋಜನೆಗೆ ಚಾಲನೆ ನೀಡಿದ್ದರು. ಮನಗೂಳಿ ಅವರ ಭಗೀರಥ ಪ್ರಯತ್ನದಿಂದ ಈ ಭಾಗ ಹಸಿರಾಯಿತು. ಇದಕ್ಕಾಗಿ ಅಂದು ವಾಗ್ದಾನ ಮಾಡಿದಂತೆ ಈ ಭಾಗದ ರೈತರು ಸ್ವಯಂಸ್ಫೂರ್ತಿಯಿಂದ 50ರಿಂದ 50 ಸಾವಿರ ವಂತಿಗೆ ಸಂಗ್ರಹಿಸಿ 20 ಲಕ್ಷ ವೆಚ್ಚದಲ್ಲಿ ಎಂ.ಸಿ.ಮನಗೂಳಿ ಮತ್ತು ದೇವೇಗೌಡರ ಕಂಚಿನ ಪ್ರತಿಮೆಗಳನ್ನು ನಿರ್ಮಿಸಿದ್ದು ಫೆ. 12ರಂದು ಗೋಲಗೇರಿಯಲ್ಲಿ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು. ಫೆ. 12ರಂದು ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಗದುಗಿನ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ವಹಿಸುವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಂ.ಸಿ.ಮನಗೂಳಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಚೆನ್ನಮ್ಮ ನೆನಹು
ಸಿಂಧನೂರು: ನಗರದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ರಾಣಿ ಚೆನ್ನಮ್ಮರ ಸ್ಮೃತಿ ದಿನದ ಅಂಗವಾಗಿ ನಮನ ಸಲ್ಲಿಸಿ ವೃತ್ತದಲ್ಲಿನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಸದಸ್ಯ ಕೆ.ಬಾಳಪ್ಪ ಮಾತನಾಡಿ, ಇಂದಿನ ಯುವತಿಯರು ರಾಣಿ ಚೆನ್ನಮ್ಮರಂತೆ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಕಟಿಬದ್ಧರಾಗಬೇಕೆಂದು ಕರೆ ನೀಡಿದರು. ಸಮಿತಿಯ ಕಾರ್ಯಕರ್ತರು ಜಯಘೋಷ ಹಾಕಿ ಸ್ಮ್ರತಿ ದಿನಾಚರಣೆಯನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಪ್ರಕಾಶ ಜಿರಾವಾಲ, ಅವಿನಾಶ ದೇಶಪಾಂಡೆ, ಬಸವನಗೌಡರು, ಲಿಂಗನಗೌಡರು, ಪ್ರಶಾಂತ, ವೈ.ಎಸ್. ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಹೊಲಿಗೆ ಉಚಿತ ತರಬೇತಿ ಶಿಬಿರ
ಸಿಂಧನೂರು: ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಆಯೋಜಿಸುವ ತರಬೇತಿ ಶಿಬಿರಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಪ್ರತಿಯೊಬ್ಬರ ಕುಟುಂಬ ನಿರ್ವಹಣೆಗೆ ಸ್ವಯಂ ಉದ್ಯೋಗ ಅವಶ್ಯಕ ಎಂದು ಜಿಪಂ ಸದಸ್ಯ ಹಾಗೂ ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಸಲಹೆ ನೀಡಿದರು. ಬಳಗಾನೂರು ಗ್ರಾಮದ ದೇವಾಂಗ ಭವನದಲ್ಲಿ ಎಸ್‌ಬಿಎಚ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ನಿರ್ದೇಶಕ ಮಾನಪ್ಪ ದಾಸರ್, ಡಾ.ಎಸ್.ಎಸ್. ಜಾಗೀರದಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರರಾವ್, ಇಮಾಮ್ ಹುಸೇನ್ ಇದ್ದರು.
'ಹೈ.ಕ. ಸಂಶೋಧನಾ ವಿದ್ಯಾರ್ಥಿಗಳಿಗೆ ಸಮ್ಮೇಳನ ಪ್ರೇರಕ'
ಸಿಂಧನೂರು: ಹೈ-ಕ ಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮ್ಮೇಳನ ಪ್ರೇರಕವಾಗಲಿದೆ ಎಂದು ಬೆಳಗಾವಿ ಚನ್ನಮ್ಮ ವಿವಿಯ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಡಾ. ಮಾರುತಿರಾವ್ ಹೇಳಿದರು.
ನಗರದ ದುದ್ದುಪೂಡಿ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಕರ್ನಾಟಕ ರಾಜ್ಯ ಮಹಿಳಾ ವಿವಿ ಬಿಜಾಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ನ್ಯಾಷನಲ್ ಕಾನ್ಫೆರೆನ್ಸ್ ಆನ್ ಕಾಸ್ಟ್ ಆಪ್ಟಿಮೈಜೇಷನ್ ಕುರಿತ ರಾಷ್ಟ್ರಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನ ಆಯೋಜನೆಗೆ ಶ್ಲಾಘನೆ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಒಮನ್ ದೇಶದ ಕಾಲೇಜ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ. ಇಪ್ತಿಕರ್ ನಾಯಕವಾಡಿ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಇದರ ಪ್ರಯೋಜನ ಪಡೆಯಬೇಕು. ವಿವಿಗಳ ಅನುದಾನವಿಲ್ಲದೆ ಇಂತಹ ದೊಡ್ಡಮಟ್ಟದ ಸಮ್ಮೇಳನಗಳನ್ನು ಏರ್ಪಡಿಸುವುದು ಸುಲಭದ ಮಾತಲ್ಲ. ದುದ್ದುಪೂಡಿ ಕಾಲೇಜಿನ ಈ ಆಯೋಜನೆಯನ್ನು ಶ್ಲಾಘಿಸಿದರು. ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಎಸ್.ಹನುಮಂತಪ್ಪ ಕಾಸ್ಟ್ ಆಪ್ಟಿಮೈಜೇಶನ್ ವಿಷಯದ ಕುರಿತು ಮಾತನಾಡಿದರು. ರಾಷ್ಟ್ರೀಯ ಸಮ್ಮೇಳನದ ಸಂಚಾಲಕ ಎಸ್.ಶಿವರಾಜ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಡಿ.ರಾಮಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಆರ್.ಸಿ. ಪಾಟೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

