ರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ
ಕ.ಪ್ರ.ವಾರ್ತೆ, ಸೊರಬ, ಫೆ. 11
ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಬುಧವಾರದಿಂದಲೇ ಅಗತ್ಯ ಸಿದ್ಧತೆ ನಡೆಸಲು ಹಸಿರು ನಿಶಾನೆ ದೊರೆತಂತಾಗಿದೆ.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸಭೆ ನಡೆಯಿತು. ಶಾಸಕ ಮಧುಬಂಗಾರಪ್ಪ ಉಪಸ್ಥಿತಿಯಲ್ಲಿ ಪಟ್ಟಣದ ನಿವಾಸಿಗಳು ಹಾಗೂ ಅಧಿಕಾರಿಗಳ ನಡುವೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
17ರಿಂದ ಕಾಮಗಾರಿ: ಸಾಗರ ಉಪವಿಭಾಗಾಧಿಕಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಸ್ತೆ ಅಗಲೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ 1.73 ಕೋಟಿ ರು. ಬಿಡುಗಡೆಯಾಗಿದೆ. ಫೆ. 17ರ ಸೋಮವಾರದಿಂದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸ್ಥಳದಲ್ಲಿಯೆ ಪರಿಹಾರ ಕೂಡ ನೀಡುವ ಬಗ್ಗೆ ಯೋಜಿಸಲಾಗಿದೆ ಎಂದು ತಿಳಿಸಿದರು. ಈ ಹಣ ಫೆಬ್ರವರಿ ಅಂತ್ಯದೊಳಗೆ ವಿತರಣೆ ಮಾಡುವ ಶರತ್ತಿಗೊಳಪಟ್ಟು ಮಂಜೂರಾಗಿದೆ. ಕಂಟ್ರಾಕ್ಟರ್ ಹೆಚ್ಚಿನ ಹಣವನ್ನು ಸರ್ಕಾರದಿಂದ ಪಡೆಯುತ್ತಾನೆ. ಇದರಿಂದ ಕಾಮಗಾರಿಗೆ ಏನೂ ತೊಂದರೆ ಇಲ್ಲ. ಇದು ಸೊರಬ ಮುಖ್ಯರಸ್ತೆಯ ಅಗಲೀಕರಣ ಎನ್ನುವುದಕ್ಕಿಂತ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಪರಿವರ್ತಿಸುವುದು ಎನ್ನಲು ಅಡ್ಡಿಯಿಲ್ಲ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ: ಶಾಸಕ ಮಧು ಬಂಗಾರಪ್ಪ ಮಾತನಾಡಿ, ಸೊರಬಕ್ಕಾಗಿ ಹೊಸ ಕಾನೂನು ರಚನೆ ಮಾಡಲು ಸಾಧ್ಯವಿಲ್ಲ. ಹಿಂದಿನ ಶಾಸಕರು ಮಾಡಿದ ಗಾಯಕ್ಕೆ ನಾವು ಔಷಧ ನೀಡಬೇಕಾಗಿದೆ. ಅಂದು ಶಾಸಕರು ನಿಗದಿಪಡಿಸಿದ ಮೊತ್ತಕ್ಕಿಂತಲೂ 200 ರು.ಗಳನ್ನು ಹೆಚ್ಚುವರಿಯಾಗಿ ಮಂಜೂರಾತಿ ದೊರೆತು ಅನುದಾನ ಕೂಡ ಬಿಡುಗಡೆಯಾಗಿದೆ. ಈಗಾಗಲೆ ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಂಡಿದ್ದು, ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ವಿನಂತಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಸುರೇಶ್, ಸಿಪಿಐ ನಾಗರಾಜ, ಎಸ್ಐ ಭೀಮನಗೌಡ, ವೀರೇಶ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

