3.48 ಲಕ್ಷ ಕುಟುಂಬಕ್ಕೆ 'ಸ್ವಸ್ಥ ಬಿಮಾ'
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.11
ರಾಷ್ಟ್ರೀಯ ಸ್ವಸ್ಥ ಬಿಮಾ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ 3.48 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದೆ.
2013ರ ಏ.8 ರವರೆಗೆ ಯಾರ್ಯಾರು ಬಿಪಿಎಲ್ ಕಾರ್ಡು ಹೊಂದಿದ್ದಾರೆಯೋ ಅವರೆಲ್ಲರೂ ಸಹ ಈಗ ಫಲಾನುಭವಿಗಳು. ಈ ಪಟ್ಟಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇವಲ 15 ನಿಮಿಷ ಕೆಲಸ ಮಾಡಿದವರನ್ನೂ ಸಹ ಸೇರಿಸಲಾಗಿದೆ.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಈ ವಿಷಯ ತಿಳಿಸಿದರು.
ಆಧಾರ್ ನೋಂದಣಿ ಮಾದರಿಯಲ್ಲಿ ರಾಷ್ಟ್ರೀಯ ಸ್ವಸ್ಥ ವಿಮಾ ಯೋಜನೆಗೆ ನೋಂದಣಿ ಮಾಡಬೇಕಿದೆ. ಈ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯಲು ಫಲಾನುಭವಿಗಳ ಮನೆಗೆ ಹೋಗಿ ನೋಂದಣಿ ದಿನಾಂಕ, ಸಮಯ, ಸ್ಥಳ ತಿಳಿಸುತ್ತಾರೆ. ಒಬ್ಬರ ನೋಂದಣಿಗೆ ಕನಿಷ್ಠ 15 ನಿಮಿಷಗಳು ಬೇಕಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದರು.
ಆರ್ಎಸ್ಬಿವೈ ಕಾರ್ಡು ಹೊಂದಿರುವ ಫಲಾನುಭವಿಗಳು ದೇಶದ ಯಾವುದೇ ಸ್ಥಳದಲ್ಲಿ ಇದನ್ನು ತೋರಿಸಿ 30000 ವರೆಗೆ ಚಿಕಿತ್ಸೆ ಪಡೆಯಬಹುದು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಯೋಜನೆ ಅನುಷ್ಠಾನ ಕುರಿತಂತೆ ಈಗಾಗಲೇ ತೀರ್ಥಹಳ್ಳಿ ಹಾಗೂ ಸಾಗರದಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಐಸಿಐಸಿಐ ಲೊಂಬಾರ್ಡ್ ಸಂಸ್ಥೆ ಸಹಯೋಗದೊಂದಿಗೆ ಈ ಯೋಜನೆ ಜಾರಿಯಾಗುತ್ತದೆ ಎಂದರು.
ತೀರ್ಥಹಳ್ಳಿ ಸುತ್ತಮುತ್ತ 14 ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೇಳಿದರು. ಈ ನಡುವೆ 9 ಮಲೇರಿಯಾ ಪ್ರಕರಣಗಳೂ ಸಹ ಕಂಡುಬಂದಿವೆ ಎಂದಿರುವ ಅವರು, ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ ಎಂದರು.
ಸೋಲಾರ್ ವಿದ್ಯುತ್: ಶೆಟ್ಟಿಹಳ್ಳಿ ಅಭಯಾರಣ್ಯದ ಚಿತ್ರಶೆಟ್ಟಿಹಳ್ಳಿ ಗ್ರಾಮದ 85 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದರು. ಒಂದೆಡೆ ಕಂಬಗಳನ್ನು ಅಳವಡಿಸಲು ಮರಗಳ ಕಡಿತಲೆ ಮಾಡಲು ಅರಣ್ಯ ಇಲಾಖೆ ಅನುಮತಿ ಕೋರಲಾಗಿದೆ. ಇನ್ನೊಂದೆಡೆ ಇದಕ್ಕೆ ಪರ್ಯಾಯವಾಗಿ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಕಾರ್ಪೋರೇಷನ್ ಮೂಲಕ ಸೋಲಾರ್ ಘಟಕ ಆರಂಭಿಸಲು ಉದ್ದೇಶಿಸಲಾಗಿದೆ. ಸೋಲಾರ್ ಪ್ಯಾನಲ್ ಅಳವಡಿಕೆಗಾಗಿ 1 ಎಕರೆ ಜಾಗ ಬೇಕಾಗಿದ್ದು, ಜಿಲ್ಲಾಧಿಕಾರಿ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದರು.
ವಿಶೇಷ ಘಟಕ ಯೋಜನೆ: ವಿಶೇಷ ಘಟಕ ಯೋಜನೆ ಅನುಷ್ಠಾನದ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡದಿರುವುದಕ್ಕೆ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದರು.
ಸಿಇಓ ಅವರು ಈ ಬಗ್ಗೆ ಎಚ್ಚರಿಕೆ ನೀಡಿ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಅವರೇ ಜವಾಬ್ದಾರರಾಗುತ್ತಾರೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಷಣ್ಮುಖಪ್ಪ ಇದ್ದರು.
ಅಧಿಕಾರಿಗಳ ವಿರುದ್ಧ ಅಸಮಾಧಾನ
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ತರದೇ ಸಭೆಗೆ ಬಂದಿದ್ದಕ್ಕೆ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸಿಇಓ ಸಸಿಕಾಂತ್ ಸೆಂಥಿಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳು ಬರದೇ ಇನ್ನೊಬ್ಬ ಅಧಿಕಾರಿ ಬಂದಿರುವುದಕ್ಕೆ ಆಕ್ಷೇಪಿಸಿದ ಸಿಇಓ, ನೀವು ಏಕೆ ಬಂದಿರಿ ಎಂದು ಪ್ರಶ್ನಿಸಿದರು. ಯಾವ ಕಾಮಗಾರಿಗಳನ್ನು ಕೈಗೊಂಡಿದ್ದೀರಿ ಎಂಬ ಮಾಹಿತಿ ಕೊಡುವುದಕ್ಕೆ ಏಕೆ ಆಗುವುದಿಲ್ಲ? ಅದೇನು ರಹಸ್ಯ ಮಾಹಿತಿಯೇ ಎಂದು ಪ್ರಶ್ನಿಸಿದರು. ನೀವು ಮಾಹಿತಿ ನೀಡಲಿಲ್ಲ ಎಂದರೆ ಏನೂ ಕೆಲಸ ಆಗಿಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.
ಕೊನೆಗೆ ಸಿಇಓ ಅವರು, ಇನ್ನೊಂದು ಗಂಟೆಯಲ್ಲಿ ಮಾಹಿತಿಯನ್ನು ನೀಡಿ ಎಂದು ತಾಕೀತು ಮಾಡಿದರು. ಆದರೆ ಸಭೆ ಅಜೆಂಡಾ ಮುಗಿದರೂ ಮಾಹಿತಿ ಬರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

