ಗುಲ್ಬರ್ಗಾ

ಪೆಟ್ಟಿಗೆ ಅಂಗಡಿಗಳ ತೆರವಿಗೆ ನೋಟಿಸ್

Published On :

ಹಿರೇವಡಗೇರಾ: ಸುಮಾರು ವರ್ಷಗಳಿಂದ ಇಲ್ಲಿಯ ಮಹಾದ್ವಾರದ ಸುತ್ತಮುತ್ತಲು ಸಣ್ಣ ವ್ಯಾಪಾರಸ್ತರು ಹಾಗೂ ಬಡವರು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ಉಪಜೀವನವನ್ನು ನಡೆಸುತ್ತಿದ್ದು, ಇದೀಗ ಏಕಾಏಕಿ ಪಂಚಾಯತಿಯವರು ಯಾವುದೆ ಮುನ್ಸೂಚನೆ ನೀಡದೆ ಜಾತ್ರೆಯ ನೆಪ ಒಡ್ಡಿ ಕೆಲವೊಂದು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಇದರಿಂದ ಅನೇಕ ವ್ಯಾಪಾರಸ್ತರು ಬೀದಿಗೆ ಬಿದ್ದಿದ್ದಾರೆ.
  ಈ ವ್ಯಾಪಾರದ ಮೇಲೆಯೆ ನಮ್ಮ ಜೀವನ ಅವಲಂಬಿತವಾಗಿತ್ತು. ಕೆಲವು ಪಾನ್ ಅಂಗಡಿ ಹಾಗೂ ಪೆಟ್ಟಿಗೆ ಅಂಗಡಗಳನ್ನು ತೆರವುಗೋಳಿಸಿ ಇನ್ನೂ ಕೆಲವೊಂದಕ್ಕೆ ನೋಟಿಸನ್ನು ನೀಡಿರುವುದು ಯಾವ ನ್ಯಾಯ ಎಂದು ಅಂಗಡಿಗಳನ್ನು ಕಳೆದುಕೊಂಡ ವ್ಯಾಪಾರಸ್ಥರು ಪ್ರಶ್ನಿಸುತ್ತಾರೆ.
  ಇಲ್ಲಿಯ ಮುಖ್ಯರಸ್ತೆಯ ಮೇಲೆ ಹಾಗೂ ಮಹಾದ್ವಾರದ ಸುತ್ತಮುತ್ತಲು ಅನಧಿಕೃತವಾಗಿ ಪಾನ್ ಅಂಗಡಿ ಹಾಗೂ ಪೆಟ್ಟಿಗೆ ಅಂಗಡಿಗಳನ್ನು  ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ತರಿಗೆ  ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಇಲ್ಲಿಯ ಪಂಚಾಯತಿ ನೋಟಿಸನ್ನು ಜಾರಿ ಮಾಡಿದೆ.
  ಮುಖ್ಯರಸ್ತೆಯ ಎಡ ಹಾಗೂ ಬಲಬದಿಯಲ್ಲಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟಿರುವದರಿಂದ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಪಂಚಾಯತಿ ಹೇಳಿದೆ.
ನೋಟಿಸ್ ಮುಟ್ಟಿದ ಮೂರು ದಿನಗಳ ಒಳಗಾಗಿ ಅನಧಿಕೃತವಾಗಿ ರಸ್ತೆಯ ಬದಿಯಲ್ಲಿ ಇಟ್ಟಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಫೆ. 22ರಂದು ಪಂಚಾಯತಿಯ ವತಿಯಿಂದ ತೆರವುಗೋಳಿಸಲಾಗುವುದು.  ಅದರ ಖರ್ಚು-ವೆಚ್ಚವನ್ನು ಮಾಲೀಕರೆ ನೀಡಬೇಕಾಗುತ್ತದೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.
  ಆದರೆ ಇಲ್ಲಿ ಇಟ್ಟಿರುವ ಎಲ್ಲಾ ಪೆಟ್ಟಿಗೆ ಅಂಗಡಿಗಳು, ಚಹಾ ಹೋಟಲ್‌ಗಳು ಹಾಗೂ ಕಿರಾಣ ಅಂಗಡಿಗಳು ಪ್ರತಿ ವರ್ಷ ಪಂಚಾಯತಿಗೆ ಕರವನ್ನು ತಪ್ಪದೆ ಕಟ್ಟುತ್ತಾರೆ. ಹಾಗಾದರೆ ಅವು ಅನಧಿಕೃತ ಹೇಗಾಗುತ್ತದೆ ಎಂದು ಕರ ಕಟ್ಟುವ ಅಂಗಡಿಯ ಮಾಲೀಕರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪಿಡಿಓ ಸಂಚಾರಿ ದೂರವಾಣಿಗೆ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸಿಲಿಲ್ಲ.
ಸಾರ್ವಜನಿಕರ ಹರ್ಷ: ಈಗಾಗಲೆ ಹಿರೇವಡಗೇರಾ, ತಾಲೂಕಾ ಕೇಂದ್ರವೆಂದು ಘೋಷಣೆಯಾಗಿದೆ. ಅದರ ಜತೆ ಅನೇಕ ಲಾರಿಗಳು ಪಕ್ಕದಲ್ಲಿರುವ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ತುಂಬಿಕೊಂಡು ಹೋಗುವಾಗ ರಸ್ತೆಯ ಬದಿಗಳಲ್ಲಿ ಅಂಗಡಿಗಳು ಇರುವ ಕಾರಣ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಪಂಚಾಯತಿ ತೆಗೆದುಕೊಂಡ ತೆರವು  ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕರು ಹೇಳುತ್ತಾರೆ.
  ಆದರೆ ಅನೇಕ ವರ್ಷಗಳಿಂದ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ತರಿಗೆ ಏಕಾಏಕಿ ತೆರವುಗೊಳಿಸಿದರೆ ಅವರು ಎಲ್ಲಿಗೆ ಹೋಗಬೇಕು? ಅದಕ್ಕಾಗಿ ಪಂಚಾಯ್ತಿ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ನಂತರ ತೆರವು ಕಾರ್ಯಕೈಗೊಳ್ಳಲು ಕೆಲವು ನಾಗರಿಕರ ಅನಿಸಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.