ಗುಲ್ಬರ್ಗಾ

ದೇಶದ ಮುಂದಿನ ಪ್ರಧಾನಿ ಮೋದಿ: ಯಡಿಯೂರಪ್ಪ

Published On :

ಜೇವರ್ಗಿ: ಮುಂಬರುವ ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ರ್ಕಾರ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದು ಶತಸಿದ್ಧವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ಭಾರತ ಗೆಲ್ಲಿಸಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೋದಿ ಒಂದು ಶಕ್ತಿ: ನರೇಂದ್ರ ಮೋದಿ ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ. ದೇಶದ ಪ್ರತಿಶತ 70ರಷ್ಟು ಜನತೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ತೀರ್ಮಾನಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳಲ್ಲಿ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಬಿಜೆಪಿಗೆ ಸೇರ್ಪಡೆ: ಅಪ್ಪಾಸಾಹೇಬಗೌಡ ಪಾಟೀಲ್ ರದ್ದೇವಾಡಗಿ, ಮಲ್ಲಿನಾಥಗೌಡ ಯಲಗೋಡ, ಬಸವರಾಜ ಗುಳಗಿ, ಶಿವರಾಜ ಪಾಟೀಲ್, ರೇವಣಸಿದ್ದಪ್ಪ ಸಂಕಾಲಿ, ಅಮೃತಗೌಡ ಗುಡೂರ ಸೇರಿದಂತೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಕೆಜೆಪಿ ತೊರೆದು ಬಿಜೆಪಿ ಸೇರ್ಪಡೆಯಾದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಸುನೀಲ್ ವಲ್ಲ್ಯಾಪುರೆ, ಬಾಬುರಾವ ಚವ್ಹಾಣ, ಬಿಜೆಪಿ ರಾಜ್ಯ ಕಾರ್ರ್ಯದರ್ಶಿ ಶಿವಾನಂದ ಕಲ್ಲೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ರಾಜಕುಮಾರ ತೇಲ್ಕೂರ, ವಿದ್ಯಾಸಾಗರ ಕುಲಕರ್ಣಿ, ಸುಭಾಷ ಬಿರಾದಾರ, ಧರ್ಮಣ್ಣ ದೊಡ್ಮನಿ ಸೇರಿದಂತೆ ಸಹಸ್ರಾರು ಜನ ಬಿಜೆಪಿ ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮಾಲಿಪಾಟೀಲ್ ಸ್ವಾಗತಿಸಿದರು. ಭೀಮರಾವ್ ಗುಜಗೊಂಡ ನಿರೂಪಿಸಿದರು.
'ಮಠ ಮಾನ್ಯಗಳಿಗೂ ಅನುದಾನ'
ಜೇವರ್ಗಿ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಜೇವರ್ಗಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಜೊತೆಗೆ ಮಠ-ಮಾನ್ಯಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಮಾತನಾಡಿದ ಅವರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸಮಾಡುವ ಮೂಲಕ ಕಂಡರಿಯದ ಅಭಿವೃದ್ಧಿ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ. ಪಟ್ಟಣದಲ್ಲಿರುವ ರಾಘವೇಂದ್ರಸ್ವಾಮಿ ಮಠಕ್ಕೆ ತಮ್ಮ ಅವಧಿಯಲ್ಲಿ ಮಾಜಿ ಶಾಸಕ ನರಿಬೋಳ ಅವರ ಮನವಿ ಮೆರೆಗೆ 15 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಅಪ್ಪಾಸಾಹೇಬಗೌಡ ಪಾಟೀಲ್ ರದ್ದೇವಾಡಗಿ, ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಟ್ರಸ್ಟ್ ಕಮಿಟಿ ಅಧ್ಯಕ್ಷ ರಮೇಶಬಾಬು ವಕೀಲ್, ಎಂ.ಬಿ.ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
20 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು
ಚಿಂಚೋಳಿ: ದೇಶದ ಎಲ್ಲೆಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಹೆಚ್ಚುತ್ತಿದ್ದು, ಮುಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಬೇಕೆನ್ನುವ ಭಾವನೆ ಯುವಕರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ 20 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಮನೆ ಮನೆಗೆ ಬಿಜೆಪಿ ಮತ್ತು ಫೆ. 28ರಂದು ಜಿಲ್ಲೆಗೆ ಆಗಮಿಸಲಿರುವ ನಿಮಿತ್ತ ನರೇಂದ್ರ ಮೋದಿ ರ್ಯಾಲಿ ಪ್ರಚಾರ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಖರ್ಗೆ ಜಿಲ್ಲಾ ಸಚಿವರೇ?: ಜಿಲ್ಲೆಯಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ಇಎಸ್‌ಐ ಆಸ್ಪತ್ರೆ ಕಟ್ಟಡ ತರಾತುರಿಯಲ್ಲಿ ಉದ್ಘಾಟನೆಯಾಗಿದೆ. ನಮ್ಮ ಭಾಗದವರಿಗೆ ನೇಮಕಾತಿ ಮಾಡಿಕೊಂಡಿಲ್ಲ. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ಗುಲ್ಪರ್ಗದಲ್ಲಿಯೇ ಕಳೆದ 3 ತಿಂಗಳಿಂದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ನಡೆಸುತ್ತಿದ್ದಾರೆ. ಖರ್ಗೆ  ಕೇವಲ ಜಿಲ್ಲಾ ಸಚಿವರಾಗಿದ್ದಾರೆಯೇ ಎಂದು  ಪ್ರಶ್ನಿಸಿದರು.
2009ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ನನ್ನನ್ನು ಸೋಲಿಸಲು ಅನೇಕ ಕುತಂತ್ರಗಳನ್ನು ನಡೆಸಿ, ನನ್ನ ಸಂಬಂಧಿಕ ಬೀದರ ಜಿಲ್ಲೆಯ ಬಾಬು ಹೊನ್ನಾನಾಯಕ ಅವರನ್ನು ಕಣಕ್ಕಿಳಿಸಿ ನನ್ನನ್ನು ಸೋಲಿಸಿದ್ದರು ಎಂದು ಹೇಳಿದ ಬೆಳಮಗಿ, ನಾನು ಇನ್ನು ಬಿಜೆಪಿ ಅಭ್ಯರ್ಥಿ ಅಲ್ಲ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಮಾಜಿ ಸಚಿವ ಸುನೀಲ್ ವಲ್ಯಾಪುರೆ, ಬಾಬುರಾವ ಚವ್ಹಾಣ ಅವರಿಗೆ ಟಿಕೆಟ್ ನೀಡಿದರೂ ನನ್ನ ಯಾವದೇ ವಿರೋಧವಿಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಚಿತ್ತಾಪುರದಲ್ಲಿ ಇಂದು ಬೈಕ್ ರ್ಯಾಲಿ
ಚಿತ್ತಾಪುರ: ನಮೋ ಬ್ರಿಗೇಡ್ ಹಾಗೂ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭೀಮಾನ ಟ್ರಸ್ಟ್ ಸಂಯುಕ್ತ ಅಶ್ರಯದಲ್ಲಿ ಫೆ. 25 ಮಂಗಳವಾರ ನಮೋ ಬ್ರಿಗೇಡ್ ಉದ್ಘಾಟನಾ ಸಮಾರಂಭ ಹಾಗೂ ಸಾರ್ವಜನಿಕ ಸಭೆಯನ್ನು ಕಪ್ಪಡ ಬಜಾರದಲ್ಲಿ ಸಾಯಂಕಾಲ 5.30 ಗಂಟೆಗೆ ಹಮ್ಮಿಕ್ಕೊಳ್ಳಲಾಗಿದೆ ಎಂದು ನಮೋ ಬ್ರೀಗೇಡ್ ಸಂಚಾಲಕ ಸತೀಶ ಕಾಂತಾ, ಭಾರತ ಸ್ವಾಭಿಮಾನ ಟ್ರಸ್ಟ ಅಧ್ಯಕ್ಷ ವಿಶ್ವರಾಜ, ಬಾಲಾಜಿ ಬುರಬುರೆ ತಿಳಿಸಿದ್ದಾರೆ.     ಅಂದು ಸಂಜೆ 4 ಗಂಟೆಗೆ ಅಕ್ಕಮಹಾದೇವಿ ದೇವಾಲಯದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ರ್ಯಾಲಿಯಲ್ಲಿ ಬ್ರಿಗೇಡ್ ಧ್ವಜ, ನಮೋ ಬ್ರೀಗೇಡ್ ಟೀ ಶರ್ಟ್, ಭಾರತ ಮಾತೆ ಭಾವಚಿತ್ರ  ಮೆರವಣಿಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.