ಗುಲ್ಬರ್ಗಾ

ಕೊಡಾಲದಲ್ಲಿ ಕುಡಿಯೋಕೆ ಸಿಗೋದು ಚರಂಡಿ ನೀರು!

Published On :

ಹಿರೇವಡಗೇರಾ: ಇಲ್ಲಿಗೆ ಸಮೀಪವಿರುವ ಕೋಡಾಲ ಗ್ರಾಮದ ನಿವಾಸಿಗಳಿಗೆ ದಿನಾಲೂ ಚರಂಡಿಯ ಹೊಲಸು ನೀರನ್ನು ಕುಡಿಯುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪರಿಸ್ಥಿತಿ ಹದಗೆಟ್ಟಿದ್ದರೂ, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.
ಅಸಲಿ ಕಾರಣ ಏನು?: ಗ್ರಾಮದಲ್ಲಿ ನಳ ಬೀಡುವ ಟ್ಯಾಂಕ್ ಕೆಳಗೆ ನೀರು ಸರಬರಾಜು ಮಾಡುವ ವಾಲ್ವ್ ಇದೆ. ವಾಲ್ವ್‌ನಿಂದ ನೀರು ಸೋರುತ್ತಿದ್ದು, ಪಕ್ಕದಲ್ಲಿಯೇ ಚರಂಡಿ ಇರುವುದರಿಂದ ಚರಂಡಿ ನೀರು ಅದರಲ್ಲಿ ಸೇರಿ ಪೈಪ್‌ಗಳ ಮುಖಾಂತರ ನಳಗಳಲ್ಲಿ ಬರುತ್ತಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಸ್ವಚ್ಛ ಕುಡಿಯುವ ನೀರು ಸಿಗುತ್ತಿಲ್ಲ.
ತಿಪ್ಪೆ ಕೊಳಚೆ ಬೋನಸ್!: ನೀರು ಬೀಡುವ ವಾಲ್ವ್ ಹತ್ತಿರ ನೀರು ಸಂಗ್ರಹವಾಗಿರುವುದರಿಂದ ಅದರಲ್ಲಿ ಹಂದಿ, ನಾಯಿಗಳು ವಿಶ್ರಾಂತಿ ಪಡೆಯುತ್ತಿವೆ. ಹಾಗೆಯೇ ಆ ವಾಲ್ವ್ ಸುತ್ತಲೂ ತಿಪ್ಪೆ ಹಾಕಿರುವುದರಿಂದ ನಳಗಳಲ್ಲಿ ಬರುತ್ತಿರುವ ಚರಂಡಿಯ ನೀರಿನ ಜೊತೆಗೆ ತಿಪ್ಪೆಯಲ್ಲಿರುವ ಕೊಳಚೆಯೂ ಬರಲಾರಂಭಿದೆ.
ಗ್ರಾಮಸ್ಥರು ಈ ನೀರನ್ನೇ ಕುಡಿಯುತ್ತಿರುವದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಬೆಂಡಬೆಂಬಳಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನೀರು ಪೋಲು: ಈಗಾಗಲೇ ಈ ಭಾಗದಲ್ಲಿ ಬೇಸಿಗೆ ಆರಂಭವಾಗಿದೆ ವಾಲ್ವ್ ಸೋರಿಕೆ ಆಗುತ್ತಿರುವುದರಿಂದ ಅಮೂಲ್ಯವಾದ ಕುಡಿಯುವ ನೀರು ಪೋಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಟ್ಯಾಂಕ್‌ನಲ್ಲಿ ಶೇಖರವಾಗಿರುವ ನೀರು ಪೂರ್ತಿಯಾಗಿ ಖಾಲಿಯಾಗಿ ಬೇಸಿಗೆಯಲ್ಲಿ ನೀರಿಗಾಗಿ ಅಲೆದಾಡಬೇಕಾಗುತ್ತದೆ ಎಂದು ಗ್ರಾಮದ ಹಿರಿಯರಾದ ಮಲ್ಲಪ್ಪ ಪೂಜಾರಿ ಹೇಳುತ್ತಾರೆ. ಆದಕಾರಣ ಪಂಚಾಯತಿಯಯ ಅಭಿವೃದ್ಧಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ನೀರು ಬಿಡುವ ವಾಲ್ವ್ ರಿಪೇರಿ ಮಾಡಿಸಿ ಗ್ರಾಮಸ್ಥರಿಗೆ ಸ್ವಚ್ಛ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.