ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ರಸ್ತೆ ಕಾಮಗಾರಿಗೆ ಚಾಲನೆ
ಅಫಜಲ್ಪುರ: ರಾಜ್ಯ ಹೆದ್ದಾರಿ ಚವಡಾಪುರ- ಕರಜಗಿ ಮಾರ್ಗಕ್ಕೆ ಶಾಸಕ ಮಾಲಿಕಯ್ಯ ಗುತ್ತೇದಾರ ಅವರು ಶಿರವಾಳ ಗ್ರಾಮದ ಹತ್ತಿರ ಚಾಲನೆ ನೀಡಿದರು. ರಾಜ್ಯ ಹೆದ್ದಾರಿಯನ್ನು ಆದಷ್ಟು ಬೇಗನೆ ಮುಗಿಸಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ತಾಲೂಕಿನ ಎಲ್ಲ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಕುರಿತು ನೀಲನಕ್ಷೆ ಸಿದ್ಧಪಡಿಸಿ ಅಭಿವೃದ್ಧಿಪಡಿಸಲಾಗುವುದು. ಇನ್ನೂ ಕರ್ಜಗಿ ಮಾರ್ಗವಾಗಿ ಸಕ್ಕರೆ ಕಾರ್ಖಾನೆಗೆ ಬರುವ ಕಬ್ಬಿನ ವಾಹನಗಳಿಗೆ ಅನುಕೂಲವಾಗವ ನಿಟ್ಟಿನಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಈ ವೇಳೆ ಕಾಮಗಾರಿಯ ವ್ಯವಸ್ಥಾಪಕ ಎಸ್.ಎನ್. ಅವತಾರಂ, ಮುಖಂಡರಾದ ಎಪಿಎಂಸಿ ಅಧ್ಯಕ್ಷ ಬಸವಣಪ್ಪ ಪಾಟೀಲ್, ವಿಶ್ವನಾಥ ರೇವೂರ, ಅರವಿಂದ ಹಾಳಕಿ, ಸಿದ್ದು ಹಳಗೋಧಿ, ಶಾಂತಯ್ಯ ಹಿರೇಮಠ, ಶ್ರೀಶೈಲ್ ಬಳೂರ್ಗಿ, ಗುರುಬಾಳಪ್ಪ ಜಕಾಪುರ, ರಾಜಶೇಖರ ಹಿರೇಮಠ, ಸಿದ್ದಯ್ಯ ಆಕಾಶ ಮಠ, ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ ಇತರರು ಇದ್ದರು.
ಗ್ರಾಪಂ ಅವಿಶ್ವಾಸಕ್ಕೆ ಸೋಲು
ಅಫಜಲ್ಪುರ: ತಾಲೂಕಿನ ಗೌರ(ಬಿ) ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ್ ವಿರುದ್ಧ ನಡೆದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದರಿಂದ ಪುನಃ ರುದ್ರಗೌಡ ಪಾಟೀಲ್ ಅವರನ್ನು ಗ್ರಾಪಂ ಅಧ್ಯಕ್ಷರೆಂದು ಘೋಷಿಸಲಾಯಿತು. ಒಟ್ಟು 21 ಸದಸ್ಯ ಬಲದ ಗ್ರಾಪಂಗೆ ಅಧ್ಯಕ್ಷರ ವಿರುದ್ಧ ಕೆಲ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಆದರೆ ಅವಿಶ್ವಾಸ ಮಂಡಿಸಿದ ಸದಸ್ಯರ ಬಲ ಕಡಿಮೆ ಇದ್ದು ಅವಿಶ್ವಾಸಕ್ಕೆ ಸೋಲಾಗಿ ಎಲ್ಲ ಸದಸ್ಯರು ಗೈರು ಹಾಜರಾದ ಪರಿಣಾಮ ಪುನಃ ಹಾಲಿ ಅಧ್ಯಕ್ಷರನ್ನೇ ಮುಂದುವರೆಸಲಾಯಿತು. ಈ ಸಂದರ್ಭದಲ್ಲಿ ಶಿವುಕುಮಾರ ಮಾಸ್ತಾರ, ಅಶೋಕ ಕಲ್ಲೂರ, ಈಶ್ವರಪ್ಪ ಅಂಕಲಗಿ, ರಮೇಶ ಪೂಜಾರಿ, ಚಂದಪ್ಪ ಕರ್ಜಗಿ, ಮಂಜುನಾಥ ಕುದರಿ, ಕಲ್ಲಪ್ಪ ನಂದಗೆರಿ, ಬಸವರಾಜ ಅಗಸಿ, ಮಲ್ಲಿಕಾರ್ಜುನ ಕಿರಸಾವಳಗಿ, ಖಾಜಪ್ಪ ಹೊಸ್ಮನಿ, ಬಸವಂತ್ರಾಯ ಪಾಟೀಲ್, ಅರ್ಜುನ ವಾಲೀಕಾರ ಸೇರಿದಂತೆ ಇತರರು ಇದ್ದರು.
ಗ್ರಾಮೀಣ ಮಕ್ಕಳಿಗೆ ಉಚಿತ ಪ್ರವೇಶ
ಗುಲ್ಬರ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2014- 15ನೇ ಸಾಲಿಗೆ 6ರಿಂದ 10ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನವಾಗಿದೆ. 2014- 15ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರತಿ ವಸತಿ ಶಾಲೆಗೆ 50 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು. ಪ್ರಸ್ತುತ ರಾಜ್ಯದ ಯಾವುದೇ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳನ್ನು ಆಯಾ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರಿಂದ ಪಡೆದು ತಾಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿರುವ ಕೇಂದ್ರದಲ್ಲಿ ಮಾತ್ರ ಭರ್ತಿಮಾಡಿದ ಅರ್ಜಿ ಸಲ್ಲಿಸಬೇಕು. ಪ್ರವೇಶ ಪರೀಕ್ಷೆ- ಮಾ.23ರಂದು ನಡೆಯಲಿದೆ. ಅರ್ಹತಾ ಪಟ್ಟಿ ಏ.7ರಂದು ಪ್ರಕಟವಾಗಲಿದೆ. ಕೌನ್ಸೆಲಿಂಗ್ ಏ.21ರಿಂದ ಮೇ 14ರವರೆಗೆ ನಡೆಯಲಿದೆ. ಮೊ. 99013 60670ಗೆ ಸಂಪರ್ಕಿಸಬಹುದು.
ಅವಿರೋಧ ಆಯ್ಕೆ
ಗುಲ್ಬರ್ಗ: ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಯಡಿಯಲ್ಲಿ ಡಿಎಸ್ಪಿ, ಡಿಎಆರ್ ಕಚೇರಿ ಆವರಣದಲ್ಲಿ ಜರುಗಿದ ಸಂಘದ ಮಾಸಿಕ ಸಭೆಯಲ್ಲಿ ಡಿಎಸ್‌ಪಿ ಸೋಮಶೇಖರ ಉಪಾಧ್ಯಕ್ಷ, ಎಎಸ್‌ಐ ವೀರಣ್ಣ ಜಿ, ಹೊನ್ನಶೆಟ್ಟಿ ಪ್ರಧಾನ ಕಾರ್ಯದರ್ಶಿ, ಚೆಂದಪ್ಪ ಎಚ್‌ಸಿ(ರೇಲ್ವೆ) ಜಂಟಿ ಕಾರ್ಯದರ್ಶಿ, ರಾಜಶೇಖರ ಬಿರಾದರ ಎಚ್‌ಸಿ(ರೇಲ್ವೆ) ಸಂಘಟನಾ ಕಾರ್ಯದರ್ಶಿ, ತುಳಜಪ್ಪ, ಎಎಸ್‌ಐ  ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಮ್ಯಾತನೂರ ತಿಳಿಸಿದ್ದಾರೆ.
'ನ್ಯಾಯಕ್ಕಾಗಿ ಹೋರಾಡಿದರೆ ಬದಲಾವಣೆ'
ಶಹಾಬಾದ್: ಶರಣರ ವಿಚಾರಗಳು, ಸಾಮಾಜಿಕ ನ್ಯಾಯಕ್ಕಾಗಿ ಗಟ್ಟಿಯಾಗಿ ನಿಂತು ಹೋರಾಡಿದಾಗ ಮಾತ್ರ ಬದಲಾವಣೆ ಸಾಧ್ಯ,. ಎಲ್ಲಾ ಸಮಾಜದೊಂದಿಗೆ ಸಂಯಮದಿಂದ ಹೋಗುವುದು ಮುಖ್ಯವಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಶಿವಶರಣ ಮಾದರ ಚನ್ನಯ್ಯ ಜಯಂತೋತ್ಸವ ಸಮಿತಿಯಿಂದ ಸನ್ಮಾನ ಸ್ವೀಕರಿಸಿ, ಬಸವಣ್ಣನವರು 12ನೇ ಶತಮಾನದಲ್ಲಿ ಹೇಳಿದ ವಿಚಾರಗಳು 8 ನೂರು ವರ್ಷಗಳ ನಂತರವೂ ಜೀವಂತ ಇವೆ. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಹೋರಾಟ ಮಾಡುತ್ತಿದ್ದೇವೆ. ಶಿಕ್ಷಣದಿಂದ ಮಾತ್ರ ತಿಳಿವಳಿಕೆ ಬರುತ್ತದೆ. ತಿಳುವಳಿಕೆಯಿಂದ ಸಂಘಟನೆ ಸಾಧ್ಯ, ಸಂಘಟನೆಯೊಂದಿಗೆ ಸಂಘರ್ಷ ಬೇಕು ಎಂದು ಹೇಳಿದರು.
ಕೇಂದ್ರ ಸಣ್ಣ ಕೈಗಾರಿಕೆ ಸಚಿವ ಕೆ.ಎಚ್. ಮುನಿಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಶೇ. 18ರಷ್ಟು ಮೀಸಲಾತಿ ಇದ್ದರೂ, ಅವಲಂಬನೆ ಬಿಟ್ಟಿಲ್ಲ. ಅಂತರಿಕ ಜ್ಯಾತಿ ವ್ಯವಸ್ಥೆಯಿಂದ ನಮ್ಮಲ್ಲಿ ಸಮಾನತೆ ಕಾಣುವುದು ಅಗಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಜಿ. ರಾಮಕೃಷ್ಣ, ಮಾಜಿ ಸಂಸದ ಇಕ್ಬಾಲ್ ಅಹ್ಮದ ಸರಡಗಿ, ಚಂದ್ರಿಕಾ ಪರಮೇಶ್ವರ, ನಗರಸಭೆ ಸದಸ್ಯ ಗಿರೀಶ ಕಂಬಾನೂರ, ಡಿಸಿಸಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸಂತೋಷಕುಮಾರ ಇಂಗಿನಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಾಹಿತಿ ನಾಗಪ್ಪ ಬೆಳಮಗಿ ಪ್ರಾರ್ಥಿಸಿದರು. ಶಿವಯೋಗಿ ಓಣಿ ನಿರೂಪಿಸಿದರು.
ಹಲಚೇರಾ ಕೃಷಿ ಸಹಕಾರ ಸಂಘಕ್ಕೆ ಆಯ್ಕೆ

ಚಿಂಚೋಳಿ: ತಾಲೂಕಿನ ಹಲಚೇರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಸಣ್ಣ ಮುದನಾಳ ಅಧ್ಯಕ್ಷರಾಗಿ ಮತ್ತು ಜಿಲಾನಿ ಮದರಶಹಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಲಚೇರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸಣ್ಣ ಶಿವಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಿಲಾನಿ ಮದರಶಹಾ ಮಕಾನದಾರ್, ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಬಸಣ್ಣ ಶಿವಪ್ಪ ಮುದನಾಳ ಅವರನ್ನು ಅಧ್ಯಕ್ಷರೆಂದು ಮತ್ತು ಜಿಲಾನಿ ಮದರ ಶಹಾ ಮಕಾನದಾರ ಉಪಾಧ್ಯಕ್ಷರೆಂದು ಅವಿರೋಧವಾಗಿ ಆಯ್ಕೆ ಮಾಡಿದ್ದಾಗಿ ಚುನಾವಣಾಧಿಕಾರಿ ಅನವರ ಪಟೇಲ್ ತಿಳಿಸಿದ್ದಾರೆ.
ಚುನಾವಣೆಯಲ್ಲಿ ನಿರ್ದೇಶಕ ಸೋಮಶೇಖರ ಚಿಂಚೋಳಿ, ನಾಗಪ್ಪಾ ಸಾಯಬಣ್ಣ, ಸೂರ್ಯಕಾಂತ ಬಸವಣಪ್ಪಾ, ದೇವೀಂದ್ರಪ್ಪ ಮಲ್ಲಪ್ಪ, ಶಶಿಕಲಾ ಬೆಳಗುಂಪಿ, ಯಲ್ಲಾಲಿಂಗ, ಜಿ.ಪರಮೇಶ್ವರ ಕಾಂತಾ, ಸಿದ್ದು ತಳವಾರ, ಕೆ.ಅಂಬಾರಾಯ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.