ವಿವಿ ಹಗರಣ; ರಾಜ್ಯಪಾಲರ ಮೌನವೇಕೆ?: ಆಕ್ಷೇಪ
ಗುಲ್ಬರ್ಗ: ರಾಜ್ಯಪಾಲ ಹಂಸರಾಜ ಭಾರಧ್ವಾಜ ಅವರು ತಮ್ಮ ಅಧೀನದ ವಿಶ್ವವಿದ್ಯಾಲಯಗಳಲ್ಲಿ ನಡೆದ ಹಗರಣಗಳ ಬಗ್ಗೆ ಚಕಾರವೆತ್ತದಿರುವುದು ಆಶ್ಚರ್ಯಕರ ಸಂಗತಿ ಎಂದು ವೀರಶೈವ- ಲಿಂಗಾಯಿತ ವೇದಿಕೆ ಆಕ್ಷೇಪ ಎತ್ತಿದೆ.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಿಂದ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಸಂಶೋಧನಾ ವಿದ್ಯಾರ್ಥಿನಿಯಿಂದ ಪಡೆಯಲಾದ 1 ಲಕ್ಷ ರು. ವಿಚಾರವಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದಿರುವುದು ಹಾಗೂ ಕ್ರಮಕ್ಕೆ ಮುಂದಾಗದಿರುವುದು ತಮಗೆಲ್ಲ ನೋವುಂಟು ಮಾಡಿದೆ ಎಂದು ಬಳಗದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಗರೂರ, ಸಂಗಮೇಶ ನಾಗನಹಳ್ಳಿ, ಅಶೋಕ ಹೊನ್ನಳ್ಳಿ, ಸಿದ್ದು ಪಾಟೀಲ ತೆಗನೂರ, ಮಂಜು ರೆಡ್ಡಿ, ಶಿವರಾಜ ರದ್ದೇವಾಡಗಿ, ರಾಜುಗೌಡ ಅವರಳ್ಳಿ, ಚಂದ್ರಕಾಂತ ಕಾಳಗಿ, ರಾಜು ಜೇವರ್ಗಿ, ಚನ್ನವೀರ ಕಡಗಂಚಿ, ಶಾಂತಕುಮಾರ ಪಾಟೀಲ, ರಾಜು ಕೋಟೆ, ಮಹೇಶ ಅಜಗೊಂಡ, ವಿಶ್ವನಾಥ ಹುಲಿ, ಸಂಗಮೇಶ ತಡಕಲ್, ಶರಣು ವಾರದ, ಮಂಜುನಾಥ ಬಾಚನಳ್ಳಿ, ವಿಜಯ ರಾಘು ರೆಡ್ಡಿ ಸೇರಿದಂತೆ ಹಲವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲರ ನಡೆಗೆ ಆಕ್ಷೇಪ: ಗುಲ್ಬರ್ಗ ವಿವಿಯಲ್ಲಿ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗಿದ್ದರೂ ಉತ್ತೀರ್ಣ ಮಾಡಿರುವ ಬಗ್ಗೆ ಗೊತ್ತಿದ್ದರೂ ರಾಜ್ಯಪಾಲರು ಉತ್ತೀರ್ಣತೆ ವಾಪಸ್ಸು ಪಡೆಯಿರಿ ಎಂದು ಸೂಚಿಸಿದ್ದಾರೆಯೇ ಹೊರತು ಕ್ರಮಕ್ಕೆ ಮುಂದಾಗಿಲ್ಲ. ಟೀಕೆಗೊಂದು ನಡೆ, ಕಾಯಕಕ್ಕೆ ಮತ್ತೊಂದು ನಡೆ ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅವರನ್ನು ವಾಪಸ್ಸು ಕರೆಯಿಸಿಕೊಳ್ಳುವಂತೆ ಕಳೆದ ಡಿ.17ರಂದು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಕ್ಯಾರೇ ಎಂದಿಲ್ಲ. ವಿವಿ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದು ರಾಜ್ಯಪಾಲರನ್ನೇ ಸಂಶಯದಿಂದ ನೋಡುವಂತಾಗಿದೆ.
ಕುಲಪತಿಗಳ ವಾಪಸ್ಗೆ ಒತ್ತಾಯ: ಆದ್ದರಿಂದ ಬೇರೆ ಯಾವುದೇ ವಿಚಾರಗಳಿಗೆ ಅವಕಾಶ ಕೊಡದೇ ಈಗಲಾದರೂ ರಾಜ್ಯಪಾಲರು ಕುಲಪತಿಗಳನ್ನು ವಾಪಸ್ಸು ಕರೆಯಿಸಿಕೊಳ್ಳುವ ಮೂಲಕ ಪ್ರಜ್ಞಾವಂತಿಕೆ ಮೆರೆಯಲಿ ಎಂದು ವಿವರಣೆ ನೀಡಿದ್ದಾರೆ. ಈ ಹೇಳಿಕೆಗೂ ರಾಜ್ಯಪಾಲರು ತಮ್ಮ ನೈತಿಕತೆ ಪ್ರದರ್ಶಿಸಿ ತಕ್ಷಣ ಕ್ರಮಕ್ಕೆ ಮುಂದಾಗದಿದ್ದರೆ ವೇದಿಕೆ ಮತ್ತೊಂದು ನಿಟ್ಟಿನ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

