ಗುಲ್ಬರ್ಗ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜ. 9
ತೊಗರಿ ಸೇರಿದಂತೆ ಬೇಳೆಕಾಳು ಆಮದು ಮೇಲೆ ಶೇ.30ರಷ್ಟು ಸುಂಕ ವಿಧಿಸಬೇಕು, ಸಕ್ಕರೆ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಬೇಕು. ಕ್ವಿಂಟಾಲ್ ತೊಗರಿಗೆ 6,450 ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ, ಕಿಸಾನ್ ಸಭಾ, ತೊಗರಿ ಬೆಳೆಗಾರರ ಸಂಘಗಳು ನೀಡಿದ್ದ ಗುರುವಾರದ ಗುಲ್ಬರ್ಗ ಬಂದ್ ಕರೆಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು.
ಬಂದ್ ಪರಿಣಾಮ ಬೆಳಗಿನ 12ರವರೆಗೆ ಮಾತ್ರ ಗೋಚರಿಸಿತ್ತು. ಬಂದ್ ಕರೆ ಹಿನ್ನೆಲೆಯಲ್ಲಿ ಬೆಳಗಿನ ಬಸ್ಸುಗಳ ಸಂಚಾರ ನಿಲ್ಲಿಸಲಾಗಿತ್ತು. ನಗರ ಸಾರಿಗೆ ನೃಪತುಂಗ ಸಂಚಾರವೂ ಹಿಂದಕ್ಕೆ ಪಡೆಯಲಾಗಿತ್ತು. ಕೆಲವು ಶಾಲೆ- ಕಾಲೇಜುಗಳು ಬಂದ್ ಹಿನ್ನೆಲೆಯಲ್ಲಿ ರಜೆ ಘೋಷಿಸಿದ್ದರೆ, ಇನ್ನೂ ಕೆಲವು ಶಾಲೆ- ಕಾಲೇಜುಗಳು ಎಂದಿನಂತೆ ತರಗತಿಗಳನ್ನು ನಡೆಸಿದವು.
ಸಹಜ ಜನಜೀವನ: ಸೂಪರ್ ಮಾರ್ಕೆಟ್, ಸರ್ದಾರ್ ಪಟೇಲ್ ವೃತ್ತ, ಮುಖ್ಯ ರಸ್ತೆಗಳಲ್ಲಿ ಮಾತ್ರ ಅಂಗಜಡಿ- ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಉಳಿದೆಲ್ಲೆಡೆ ಯಥಾವತ್ತಾಗಿ ಜನಜೀವನ ಸಾಗಿತ್ತು. ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ, ತೊಗರಿ ಬೆಳೆಗಾರರ ಸಂಘದ ಬಸವರಾಜ ಇಂಗಿನ್, ಮಾಜಿ ಸಚಿವ, ಹೋರಾಟಗಾರ ಎಸ್.ಕೆ. ಕಾಂತಾ, ಮೌಲಾ ಮುಲ್ಲಾ, ಗೌರಮ್ಮ ಪಾಟೀಲ್, ಗಂಗಮ್ಮ ಬಿರಾದಾರ್, ಎಂಬಿ ಸಜ್ಜನ್, ಭೀಮಾಶಂಕರ ಸೇರಿದಂತೆ ವಿವಿಧ ಸಂಘಟನೆಗಲ ಮುಖಂಡರುಗಳು ನಗರದಲ್ಲಿ ಬೈಕ್ ರ್ಯಾಲಿ, ಕಾಲ್ನಡಿಗೆ ಜಾಥಾ ನಡೆಸಿ ರೈತರ ಸಮಸ್ಯೆಗಳು, ಆಮದು ಸುಂಕದ ತಪ್ಪು ನೀತಿಗಳ ಬಗ್ಗೆ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ವಿವಿಧ ಬೇಡಿಕೆ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೆಪಿಆರ್ಎಸ್ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ವಿದೇಶದಿಂದ ಆಮದಾಗುವ ತೊಗರಿ ಮೇಲೆ ಶೇ. 30 ಸುಂಕ ವಿಧಿಸಬೇಕು, ಕ್ವಿಂಟಾಲ್ ತೊಗರಿಗೆ 6,450 ರುಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು. ಸಕ್ಕರೆ ಆಮದು ತಡೆದಿರುವ ರಾಜ್ಯದ 57 ಕಾರ್ಖಾನೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಪೊಲೀಸ್ ವೈಫಲ್ಯ ಕಾರಣ: ನಗರ ರೋಜಾ ಬಡಾವಣೆಯಲ್ಲಿ ನಡೆದ ಗುಂಡಿನ ಕಾಳಗ, ಪೊಲೀಸ್ ಅಧಿಕಾರಿಗಳಿಗೆ ಆಗಿರುವ ಮಾರಣಾಂತಿಕ ಗಾಯಗಳಿಗೆ ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳ ವೈಫಲ್ಯ ಕಾರಣ ಎಂದು ಮಾನ್ಪಡೆ, ಮಾತನಾಡಿದ ಕಾಂತಾ ಸೇರಿದಂತೆ ಅನೇಕರು ದೂರಿದರಲ್ಲದೆ ಘಟನೆಯನ್ನು ಉಗ್ರವಾಗಿ ಖಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

