ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಇಂದಿನಿಂದ ರಜತ ಮಹೋತ್ಸವ
ಗುಲ್ಬರ್ಗ:  ಭಾರತೀಯ ವಿದ್ಯಾಕೇಂದ್ರ ವಿಶ್ವಸ್ಥ ಮಂಡಳಿಯ ಸಂಚಾಲಿತ ಮಾತೋಶ್ರೀ ಸಂಗಮ ಶಿವಶರಣಪ್ಪ ಪಾಟೀಲ್ ಕಡಗಂಚಿ, ಬಾಲಕರ ಪ್ರೌಢ ಶಾಲೆ ಮತ್ತು ಮರಗಾಬಾಯಿ ಬಾಬುಲಾಲ ಜೈನ ಶಹಾಪುರ ಬಾಲಕರ ಹಿರಿಯ ಪ್ರಾಥಮಿಕಿ ಶಾಲೆಯ ರಜತ ಮಹೋತ್ಸವ ಜ.10ರಿಂದ 12ರವರೆಗೆಗ ನಡೆಯಲಿದೆ.  ಜ.10ರಂದು ನಡೆಯುವ ಪ್ರದರ್ಶಿನಿ, ಮಾರಾಟ ಮಳಿಗೆ ಉದ್ಘಾಟನೆ ಹಾಗೂ ಸ್ಮರಣೆ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರೊ. ಎಂ.ಎಚ್ ನಾಗರಾಜ, ಜಿ. ಪರಮೇಶ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜ.11ರಂದು ನಡೆಯುವ ಶಾರೀರಿಕ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೊತ್ತಲಬಸವೇಶ್ವರ ದೇವಾಲಯದ ಸದಾಶಿವ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸುವರು. ಜ.12ರಂದು ನಡೆಯುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಹಿರಿಯ ಶಿಕ್ಷಕರ ಹಾಗೂ ಪಾಲಕರ ಸಮಾವೇಶ ಕಾರ್ಯಕ್ರಮಕ್ಕೆ ಬೆಂಗಳೂರಿನ ಕರ್ನಲ್ ಗೋಪಾಲ ಟಿ. ಕೌಶಿಕ, ಜಿ. ಆರ್. ಜಗದೀಶ  ಹಾಗೂ ರಾಜ್ಯ ಸಭಾ ಸದಸ್ಯ ಬಸವರಾಜ ಸೇಡಂ ಭಾಗವಹಿಸುವರು.
ಇಂದಿನಿಂದ ಶರಣ ಸಂಗಮ ಕಾರ್ಯಕ್ರಮ
ಗುಲ್ಬರ್ಗ: ವಿಶ್ವ ಲಿಂಗಾಯತ ಮಹಾಸಭೆ ಆಶ್ರಯದಲ್ಲಿ ಜ.10ರಿಂದ ಮೂರು ದಿನಗಳವರೆಗೆ ಕೋಠಾರಿ ಭವನದಲ್ಲಿ 4ನೇ ಶರಣ ಸಂಗಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಸಂಜಯ ಮಾಕಲ್ ಮತ್ತು ವಿಶ್ವನಾಥ ಕೋರಣೇಶ್ವರ ಸ್ವಾಮಿ ಹೇಳಿದ್ದಾರೆ. ವಿವಿಧ ಏಳು ಸಂಸ್ಥೆಗಳು ಮತ್ತು ಗದುಗಿನ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.10ರಂದು ಸಂಜೆ 5 ಗಂಟೆಗೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಗಳ ಸಾನ್ನಿಧ್ಯದಲ್ಲಿ ಅನುಭವ ಮಂಟಪದ ಸಂಚಾಲಕ ವಿ. ಸಿದ್ದರಾಮಣ್ಣ ಉದ್ಘಾಟಿಸುವರು. ಬಸವಾದಿ ಶರಣತ್ವದ ಗುಲ್ಬರ್ಗ, ಡಾ. ಸಿದ್ದಣ್ಣ ಲಂಗೋಟಿ, ಅಮ್ಮತಪ್ಪ ಪಾಟೀಲ್, ಸುಭಾಷ ಶೀಲವಂತ ಭಾಗವಹಿಸಿದ್ದರು. 11ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಗೋಷ್ಠಿ ಅಧ್ಯಕ್ಷತೆ ಡಾ. ಸಿದ್ದಣ್ಣ ಲಂಗೋಟಿ ವಹಿಸುವರು. ಭಾರತದ ಮೂಲನಿವಾಸಿ ಶಿವಧರ್ಮ, ಲಿಂಗಾಯತ ಧಮ,ವೇದ ಆಗಮ ವೀರಶೈವ ಮತ ಕುರಿತು ಉಪನ್ಯಾಸ ನಡೆಯಲಿದೆ. ಸಂಜಯ ಮಾಕಲ್ ಇರುವರು.
ಇಂದು ಬಂದ್ ಕರೆ
ಜೇವರ್ಗಿ: ಗುಲ್ಬರ್ಗ ನಗರದಲ್ಲಿ ಅಹಿತಕರ ಘಟನೆ ಬುಧವಾರ ಸಂಭವಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಜ.10ರಂದು ಜೇವರ್ಗಿ ಬಂದ್‌ಗೆ ಕರೆ ನೀಡಿವೆ.
ಬೇಳೆಕಾಳು ಬೆಳೆಗಾರರ ಬೇಡಿಕೆ; ಬಂದ್
ಚಿಂಚೋಳಿ: ತಾಲೂಕಿನ ತೊಗರಿ, ಉದ್ದು, ಹೆಸರು, ಕಡಲೆ ಬೇಳೆಕಾಳು ಬೆಳೆಗಾರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಬಂದ್ ಕರೆ ನೀಡಿದಕ್ಕೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಬೆಂಬಲ ನೀಡಿದವು. ಹೈ.ಕ. ಚೆಂಬರ್ಸ್ ಆಫ್ ಗುಲ್ಬರ್ಗ, ಕರ್ನಾಟಕ ಪ್ರಾಂತ ರೈತಸಂಘದ ಚಿಂಚೋಳಿ, ಕರ್ನಾಟಕ ಪ್ರಾಂತಕೃಷಿ ಕೂಲಿಕಾರರ ಸಂಘ, ತೊಗರಿ ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನಸಭಾ, ತಾಲೂಕ ಕೃಷಿಕ ಸಮಾಜ, ನೀರು ಬಳಕೆದಾರರ ಸಹಕಾರ ಸಂಘ, ಕಲ್ಲು ಗಣಿಕಾರ್ಮಿಕರ ಸಂಘ ಮಿರಿಯಾಣ ಮುಂತಾದ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಮುಖ್ಯರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.
ಬೆಂಬೆಲೆಗೆ ಆಗ್ರಹಿಸಿ ರೈತ ಸಂಘ ಧರಣಿ
ಜೇವರ್ಗಿ: ತೊಗರಿಗೆ 6,450 ಬೆಂಬಲ ಬೆಲೆ ಘೋಷಿಸಬೇಕು. ತೊಗರಿ ಅಭಿವೃದ್ಧಿ ಮಂಡಳಿಗೆ 100 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಪಟ್ಟಣದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಸೀಲ್ದಾರ್ ಮಲ್ಲಿಕಾರ್ಜುನರಡ್ಡಿ ಪಾಟೀಲ್ ಅವರ ಮುಖಾಂತರ 11 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಿಎಂಗೆ ಸಲ್ಲಿಸಲಾಯಿತು. ಪ್ರಾಂತ ರೈತಸಂಘದ ತಾಲೂಕು ಸಮಿತಿ ಅಧ್ಯಕ್ಷ ಸುಭಾಷ ಹೊಸಮನಿ, ಕಾರ್ಯದರ್ಶಿ ಸಿದ್ಧರಾಮ ಹರವಾಳ, ವೆಂಕೋಬರಾವ್ ವಾಗಣಗೇರಿ, ಬಸಯ್ಯ ಹಿರೇಮಠ, ಬಸವರಾಜ ನಡಿವಿನಕೇರಿ, ಮಲ್ಕಪ್ಪ ಮ್ಯಾಗೇರಿ, ಶಿವರಾಜ ದೇಸಾಯಿ, ಚಂದ್ರಕಾಂತ ಅದವಾನಿ ಪಾಲ್ಗೊಂಡಿದ್ದರು.
ಚಿಂಚೋಳಿ- ಬೈಕ್ ಡಿಕ್ಕಿ: ವ್ಯಕ್ತಿ ಸಾವು
ಚಿಂಚೋಳಿ: ಪಟ್ಟಣದ ಚಂದಾಪೂರ ನಗರದ ಬೀಜೋತ್ಪಾದನಾ ಕೇಂದ್ರದ ಹತ್ತಿರ ಗುರುವಾರ ಮಧ್ಯಾಹ್ನ ಎರಡು ಬೈಕಗಳ ಮಧ್ಯೆ ನೇರ ಡಿಕ್ಕಿ ಸಂಭವಿಸಿದೆ. ದುರಂತದ ಘಟನೆಯಲ್ಲಿ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸಿದ್ದಯ್ಯ ಕಾಶಯ್ಯ (22) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ. ಶಿವ ನಾರಾಯಣ ಮತ್ತು ಶಿವರಾಜ್ ಸಾಯಬಣ್ಣ ಗಾಯಗೊಂಡಿದ್ದಾರೆ. ಎದುರಿನ ಬೈಕ್ ಸವಾರ ಶಿವರಾಜ ಸಾಯಬಣ್ಣ ಘಂಟೆ (27)ಪಾನಮತ್ತನಾಗಿ ಬೈಕ್ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.