ಪೊಲೀಸ್ ಸರ್ವಿಸ್ ರಿವಾಲ್ವಾರ್ ಬಳಸಿದನೇ?
ಕ.ಪ್ರ. ವಾರ್ತೆ ಗುಲ್ಬರ್ಗ ಜ.9
ಮುಂಬೈ ಭೂಗತ ಲೋಕದ ಪಾತಕಿ, 'ಕಾಲಾಕುತ್ತಾ' ಗ್ಯಾಂಗ್‌ನ ನಾಯಕ ಮುನ್ನಾ, ಪೊಲೀಸರು ಮುಗಿಬಿದ್ದಾಗ ತನ್ನ ಬಳಿಯ ನಾಡ ಪಿಸ್ತೂಲ್ ಜೊತೆಗೇ ಪೊಲೀಸ್ ಸರ್ವಿಸ್ ರಿವಾಲ್ವರ್‌ನಿಂದಲೇ ಗುಂಡಿನ ಸುರಿಮಳೆಗರೆದನೆ?
ಈ ಪ್ರಶ್ನೆಗೆ ಹೌದು ಎಂಬುದು ಪೊಲೀಸ್ ಮೂಲಗಳ ಉತ್ತರ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅನೇಕ ಪೊಲೀಸ್ ಅಧಿಕಾರಿಗಳು 'ಕನ್ನಡಪ್ರಭ' ಜೊತೆ ಮಾತನಾಡಿ, ದಾಳಿ ಕಾಲಕ್ಕೆ ನೇರವಾಗಿ ಮುನ್ನಾ ಇದ್ದ ಕೋಣೆಗೆ ನುಗ್ಗಿದ್ದ ಪಿಎಸ್‌ಐ ಮುರಳಿ ಕೈಯಿಂದ ಜಾರಿಬಿದ್ದ ಸರ್ವಿಸ್ ರಿವಾಲ್ವರ್ ಬಳಸಿಯೇ ಮುನ್ನಾ ಯರ್ರಾಬಿರ್ರಿ ಗುಂಡು ಹಾರಿಸಿದ್ದ ಎಂಬುದನ್ನು ಅಧಿಕಾರಿಗಳೆಲ್ಲರೂ ನೋವಿನಿಂದಲೇ ಧೃಢಪಡಿಸುತ್ತಾರೆ.
ಅಷ್ಟೇ ಅಲ್ಲ, ಮುನ್ನಾ ಬಂಧನಕ್ಕೆ ದಾಳಿ ನಡೆಸಿದ್ದ ಪೊಲೀಸ್ ತಂಡದಲ್ಲಿದ್ದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಬಳಿ ರಿವಾಲ್ವರ್, ಪಿಸ್ತೂಲ್ ಇರಲಿಲ್ಲ. ಸಹೋದ್ಯೋಗಿ ಮುರಳಿ- ಮುನ್ನಾ ಮಧ್ಯೆ ಕದನ ನಡೆದಾಕ್ಷಣ ಮುರಳಿ ನೆರವಿಗೆ ಒಳನುಗ್ಗಿದ್ದರು ಎಂಬಂಶವೂ ಬಯಲಾಗಿದೆ.
ಕೂಗಳತೆಯಲ್ಲೇ ರೌಡಿ: ಪೊಲೀಸ್ ಮುಖಾಮುಖಿ ಸಾಗಿದ್ದರೂ ಈ ಸಂಗತಿ ರೋಜಾ ಠಾಣೆಯ ಯಾರಿಗೂ ಅರಿವಿಲ್ಲ, ಅಲ್ಲಿದ್ದ ರೈಟರ್ ಉದ್ಧಂಡಪ್ಪ(ಎಎಸ್‌ಐ) ಬಂದೂಕು ಜೊತೆಗೇ ಅಲ್ಲಿಗೆ ಹೋಗಿ ಅದನ್ನು ಹೇಮಂತ್ ಅವರಿಗೆ ಕೊಡುವಷ್ಟರಲ್ಲೇ ಪಟಾಕಿಯಂತೆ ರೌಡಿ ಮುನ್ನಾ ಸಿಡಿಸಿದ ಗುಂಡುಗಳು ಅವರ ಹೊಟ್ಟೆ ಸೀಳಿ ಒಳಹೊಕ್ಕಿವೆ
ದುಡುಕಿನ ದಾಳಿಯಿಂದ ಯಡವಟ್ಟು: ಬುಧವಾರ ಮಧ್ಯಾಹ್ನ 12 ರಿಂದ 1.30 ಗಂಟೆಯೊಳಗೆ, ಬರೋಬ್ಬರಿ ಒಂದೂವರೆ ಗಂಟೆ ಅವಧಿ ನಡೆದಂತಹ ಘೋರ ಗುಂಡಿನ ಕಾಳಗದ ಮುಖ್ಯಾಂಶಗಳಿವು.
ಮುನ್ನಾ ಪಾತಕಿ ಎಂಬುದು ಅರಿವಿಗಿದ್ದರೂ ಯಾಕೆ ಆತನನ್ನು ಸುತ್ತುವರಿದು ಬಂಧಿಸುವ ಮುನ್ನ ದಾಳಿ ಮಾಡಿದ್ದ ತಂಡ ಪಕ್ಕದಲ್ಲೇ ಇರುವ ರೋಜಾ ಠಾಣೆಗೆ ಮಾಹಿತಿ ನೀಡಲಿಲ್ಲ. ಠಾಣೆಗಷ್ಟೇ ಅಲ್ಲ, ನಗರದಲ್ಲೇ ಈ ದಾಳಿ ನಡೆದರೂ, ಮುನ್ನಾ ಮನೆಯೊಳಗೆ ಹೊಕ್ಕಿರುವ ವಿಚಾರ ಅರಿವಿಗಿದ್ದರೂ ಸಹ ಹೆಚ್ಚಿನ ಬಲದೊಂದಿಗೆ ಆತನ ಮೇಲೆ ಪಕ್ಕಾ ದಾಳಿ ಮಾಡುವ ಎಲ್ಲಾ ಅವಕಾಶಗಳಿದ್ದರೂ ಅದ್ಯಾಕೆ ಆತುರ ಮಾಡಲಾಯ್ತೋ? ಎನ್ನುವುದು ಮಹತ್ವ ಪಡೆದುಕೊಂಡಿದೆ.
ಮುನ್ನಾ ಠಾಣಾಕ್ಕೆ ಕರೆದ್ರೆ ಬರ್ತಿದ್ರಿ: ಮುನ್ನಾ ನಮ್ಮ ಕರೆಗೆ ಸದಾ ಸ್ಪಂದಿಸುತ್ತಿದ್ದ. ಮುತ್ತೂಟ್ ಫೈನಾನ್ಸ್‌ನ ದರೋಡೆಯಲ್ಲಿ ಈತನದ್ದೇ ಕೈವಾಡವಿದೆ. ಆತನನ್ನು ವಿಚಾರಣೆಗೊಳಪಡಿಸಬೇಕು ಅಂತ ವಿಷಯ ಗೊತ್ತಿತ್ತು. ಇದನ್ನು ದಾಳಿ ಮಾಡುವ ಮುನ್ನ ತಂಡದ ಪೊಲೀಸರೇ ಹೇಳಿದ್ರೆ ನಾವೇ ಆತನನ್ನ ಮನೆಯಿಂದ ಠಾಣೆಗೆ ಕರೆಸಬಹುದಾಗಿತ್ತು. 11 ಕೊಲೆ, ಅದಕ್ಕೂ ಹೆಚ್ಚಿನ ಸುಲಿಗೆಯಂತಹ ಹಲವು ಅಪರಾಧ ಪ್ರಕರಣಗಳ ಜಾಲದಲ್ಲಿ ಸಿಲುಕಿ ಪೊಲೀಸರೆಂದರೆ ಅಂಜುತ್ತಿದ್ದ ಮುನ್ನಾ ಎಂದಿಗೂ ಮಾತು ಮೀರಿದವನಲ್ಲ. ಆದರೆ ಅದ್ಯಾಕೆ ಗುಂಡಿನ ಕಾಳಗವಾಯ್ತೋ, ಯಾಕೆ ದಾಳಿ ಮಾಡಿದ ತಂಡ ಏಕಾಏಕಿ ಇಂತಹ ಕ್ರಮಕ್ಕೆ ಮುಂದಾಯ್ತೋ ಎನ್ನುತ್ತಾರೆ ರೋಜಾ ಪೊಲೀಸರು.
ತುಸು ಎಚ್ಚರ ವಹಿಸಿದ್ದರೆ...: 'ಕನ್ನಡಪ್ರಭ' ಜೊತೆ ಮಾತನಾಡಿದ ಠಾಣೆಯ ಹಲವರು ಮುನ್ನಾ ಹೆಂಡತಿಯೇ ಆತನನ್ನ ಠಾಣೆಗೆ ಕರೆತರುತ್ತಿದ್ದಳಂತೆ. ದಾಳಿಗೂ ಮುನ್ನ ಇಂತಹ ಮಾಹಿತಿ ಇದ್ದರೆ ನಾವೇ ಕರೆಸಿ ವಿಚಾರಣೆ ಮಾಡಬಹುದಿತ್ತು ಎಂಬ ರೋಜಾ ಸಿಬ್ಬಂದಿ ಮಾತು. ತುಸು ಎಚ್ಚರಿಕೆ ವಹಿಸಿದ್ದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದಿತ್ತು ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸುವ ಅಭಿಪ್ರಾಯ.
ರಶೀದ್ ಮಲಬಾರಿ ಮುನ್ನಾಗೆ 2 ಪಿಸ್ತೂಲ್ ನೀಡಿದ್ದರೂ 2013ರಲ್ಲಿ ಮುನ್ನಾ ಪ್ರೇಮ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿ ಸದ್ದು ಮಾಡಿದ್ದರಿಂದ ಪೊಲೀಸರು ಆತನ ಬಳಿಯ ಶಸ್ತ್ರಾಸ್ತ್ರಗಳ ಮಾಹಿತಿ ಪಡೆದು ಬೆನ್ನು ಬಿದ್ದಿದ್ದರು. ಇದನ್ನರಿತ ಮುನ್ನಾ ಪತ್ನಿ ರೋಜಾ ಪೊಲೀಸರಿಗೆ ಅವುಗಳನ್ನು ನೀಡಿದ್ದಳು ಎನ್ನಲಾಗಿದೆ. ಆದರೆ ದಾಳಿ ಕಾಲದಲ್ಲಿ ಆತನ ಬಳಿ ನಾಡ ಪಿಸ್ತೂಲ್ ಇತ್ತು, ಚಕಮಕಿ ನಡೆದ ಕೋಣೆಯಿಂದ ನಾಡ ಪಿಸ್ತೂಲ್ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜೊತೆಗೇ ಪೊಲೀಸ್ ಸರ್ವಿಸ್ ರಿವಾಲ್ವರ್ (14 ಸುತ್ತು ಖಾಲಿಯಾಗಿದೆ) ಸಹ ವಶಪಡಿಸಿಕೊಳ್ಳಲಾಗಿದೆ.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

