ಭಗತ್ಸಿಂಗ್, ನೇತಾಜಿ ಆದರ್ಶ ಅನುಯಾಯಿ ಬಂಡೆ
ಗುಲ್ಬರ್ಗ: ಶೌರ್ಯ ಮೆರೆದು ಹುತಾತ್ಮರಾಗಿರುವ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ತಮ್ಮ ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಶೌರ್ಯ, ಧೈರ್ಯದ ಕನಸುಗಳನ್ನು ತಮ್ಮಲ್ಲಿ ತುಂಬಿಕೊಂಡವರು. ಇಂತಹ ಕನಸುಗಳನ್ನು ಬಿತ್ತಿದವರು ಅವರ ಪ್ರಾಥಮಿಕ ಶಾಲೆಯ ಶಿಕ್ಷಕ ಚೆನ್ನಮಲ್ಲಯ್ಯ ಕಠಾರಿಮಠ. ಸೇವಾದಲ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿರುವ ಚೆನ್ನಮಲ್ಲಯ್ಯ ಕಠಾರಿಮಠ ಅವರು 1978ರಿಂದ 1982ರ ವರೆಗಿನ 4 ವರ್ಷಗಳ ಕಾಲ ಖಜೂರಿಯಲ್ಲಿ ಶಿಕ್ಷಕರಾಗಿದ್ದರು. ಈ ಸಂದರ್ಭದಲ್ಲಿ ಶಾಲಾ ಹಂತದಲ್ಲಿ ಸೇವಾದಳ ತರಗತಿ, ಶಿಬಿರ ನಡೆಸುತ್ತಿದ್ದರು. ಆಗಲೇ ನೇತಾಜಿ, ಭಗತ್ಸಿಂಗ್ ಮೊದಲಾದವರ ಧೈರ್ಯ, ಶೌರ್ಯದ ಇತಿಹಾಸ ಮಕ್ಕಳಿಗೆ ಹೇಳುತ್ತ ಅವರನ್ನೆಲ್ಲ ಹುರಿದುಂಬಿಸುತ್ತಿದ್ದರು.
ಹೋರಾಟಗಾರರ ಶೌರ್ಯ: ಹೀಗೆ ಅಲ್ಲಿದ್ದ ಮಕ್ಕಳಲ್ಲಿ ನಿಜವಾಗಿಯೂ ನೇತಾಜಿ, ಭಗತ್ಸಿಂಗ್ರ ಶೌರ್ಯ, ಧೈರ್ಯಗಳನ್ನೆಲ್ಲ ಮನದಲ್ಲಿ ತುಂಬಿಕೊಂಡು ಅದನ್ನೇ ತನ್ನ ಜೀವನದ ಪರಮ ಧ್ಯೇಯವಾಗಿಸಿಕೊಂಡು ಹೆಜ್ಜೆ ಹಾಕಿ ಛಲ ಬಿಡದಂತೆ ಸಾಧನೆ ಮೆರೆದವರು ಮಲ್ಲಿಕಾರ್ಜುನ ಬಂಡೆ ಎನ್ನುತ್ತಾರೆ ಅವರ ಪ್ರಾಥಮಿಕ ಶಾಲಾ ಶಿಕ್ಷಕ ಚೆನ್ನಮಲ್ಲಯ್ಯ ಕಠಾರಿಮಠ. ಬಂಡೆ ಗುಂಡಿನ ಕಾಳಗದಲ್ಲಿ ಗಾಯಗೊಂಡ ದಿನದಿಂದ ಸರಿಯಾಗಿ ಊಟ ಮಾಡಿಲ್ಲ ಈ ಮೇಷ್ಟ್ರು. ಬಂಡೆ ನನ್ನ ಮನೆಯಲ್ಲೇ ಆಡಿ ಬೆಳೆದ ಹುಡುಗ. ಹಗಲು- ರಾತ್ರಿ ನಮ್ಮ ಮನೆಯಲ್ಲೇ ಇರುತ್ತಿದ್ದ. ಸರ್, ಭಗತ್ ಸಿಂಗ್ ಆಗ್ಲೋ, ನೇತಾಜಿ ಆಗ್ಲೋ ಅಂತ ಪ್ರಶ್ನಿಸುತ್ತಿದ್ದ. ವೃತ್ತಿ ಜೀವನದಲ್ಲಿ ಹುತಾತ್ಮನಾಗುವ ಮೂಲಕ ಭಗತ್, ನೇತಾಜಿಯಂತೆಯೇ ಧೈರ್ಯ, ಶೌರ್ಯ ಮೆರೆದು ಮಿಂಚಿ ಮಿನುಗಿದ ಎನ್ನುತ್ತಾರೆ.
ಇರಬೇಕಾಗಿತ್ತು: ವಿದ್ಯಾರ್ಥಿ ಜೀವನದಿಂದಲೇ ಶಿಸ್ತಿನಿಂದ ಇರುತ್ತಿದ್ದ ಬಂಡೆ, ಜೀವನದಲ್ಲಿ ತುಂಬ ಸಾಧನೆ ಮಾಡಿದ್ದ. ಇಂತಹ ಪ್ರಾಮಾಣಿಕ, ಧೈರ್ಯದ ಅಧಿಕಾರಿಯ ಸೇವೆ ಸಮಾಜಕ್ಕೆ ಇನ್ನಷ್ಟು ಕಾಲ ಇರಬೇಕಾಗಿತ್ತು. ಆದರೆ ದೇವರು ತುಂಬ ಅನ್ಯಾಯ ಮಾಡಿದ. ನನ್ನ ಮೆಚ್ಚಿನ ಶಿಷ್ಯನನ್ನು ಕಳೆದುಕೊಂಡು ದುಃಖಿತನಾಗಿರುವೆ ಎಂದು ಚೆನ್ನಮಲ್ಲಯ್ಯ ಕಠಾರಿಮಠ ದುಃಖಿಸಿದರು. ಬಂಡೆ ಪ್ರಾಥಮಿಕ ವಿದ್ಯಾರ್ಥಿಯಾಗಿದ್ದಾಗಲೇ ಸೇವಾ ದಳದಲ್ಲಿ ಶಿಸ್ತಿನಿಂದ ಇದ್ದು, ಅಲ್ಲಿಯೂ ಸಾಧನೆ ಮೆರೆದು 2 ಪ್ರಮಾಣ ಪತ್ರ ಪಡೆದಿದ್ದರು. ಎಂದರೆ ಅವರಲ್ಲಿನ ಶಿಸ್ತು, ಧೈರ್ಯದ ಗುಣ ದೇವರು ಕೊಟ್ಟ ದೇಣಿಗೆಯಲ್ಲದೆ ಇನ್ನೇನು? ಎನ್ನುವ ಕಠಾರಿಮಠ, ಇಂತಹ ಗಟ್ಟಿ ಗುಂಡಿಗೆಯ ಬಂಡೆ ಪಾತಕಿಗೆ ಶಿಕ್ಷಿಸಿದ್ದಾನೆ. ಆದರೆ ತಾನು ಬದುಕಿ ಉಳಿಯಬೇಕಿತ್ತು. ಶಿಕ್ಷಕ ಚೆನ್ನಮಲ್ಲಯ್ಯ ಇವರು ಈಗ ಹಳ್ಳಿ ಸಲಗರದಲ್ಲಿ ಶಿಕ್ಷಕರಾಗಿದ್ದಾರೆ. ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಬಂಡೆ ಬಲು ಎತ್ತರಕ್ಕೆ ಹೋಗಿದ್ದ. ಬದುಕಿನ ಪಯಣದಲ್ಲಿ ಹೀಗೆ ಮಾರ್ಗ ಮಧ್ಯದಲ್ಲೇ ಇಹಲೋಕ ತ್ಯಜಿಸಿದ್ದು ಸಮಾಜಕ್ಕೆ ತುಂಬಲಾರದ ನಷ್ಟ ಎನ್ನುವ ಚೆನ್ನಮಲ್ಲಯ್ಯ ಸರ್ ಬಂಡೆ ಕುಂಟುಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

