ರೊಚಿಗೆದ್ದ ಜನರಿಂದ ಬೀದಿಗಿಳಿದು ಪ್ರತಿಭಟನೆ
ಆಳಂದ: ಪಿಎಸ್ಐ ಬಂಡೆ ಸಾವಿನಿಂದಾಗಿ ಆಳಂದ ತಾಲೂಕು ಹಾಗೂ ಬಂಡೆ ಹುಟ್ಟೂರು ಖಜೂರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಬಂಡೆ ಅವರ ಶವ ಹಸ್ತಾಂತರದಲ್ಲಿ ವಿಳಂಬವಾಗುತ್ತಿರುವ ಘಟನೆ ಗ್ರಾಮಸ್ಥರನ್ನು ಕೆರಳಿಸಿದೆ.
ಇತ್ತ ಆಳಂದ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಮೂಡಿದೆ. ಇಲ್ಲಿ ಪೋಸ್ಟರ್ ಹರಿದ ವಿಚಾರ ಮುಂದಿಟ್ಟುಕೊಂಡು ಎರಡು ಗುಂಪುಗಳ ಮಧ್ಯೆ ಜಗಳವಾಗಿದ್ದು ಅದು ವಿಕೋಪಕ್ಕೆ ಹೋಗುವ ಲಕ್ಷಣ ಕಂಡಾಗ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ. ದುಷ್ಕರ್ಮಿಗಳು ಇದೇ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆ ಸಂಬಂಧ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಳಂದದಲ್ಲಿ ಪ್ರತಿಭಟನೆ: ಬಂಡೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಳಂದ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಮೂಡಿದೆ. ಸಂಕ್ರಮಣ ಹಬ್ಬದ ಸಡಗರ ಅಲ್ಲಿಲ್ಲ, ಜನರೆಲ್ಲರೂ ಗುಂಪಾಗಿ ಬಂದು ಬಂಡೆ ಅವರ ಭಾವಚಿತ್ರಕ್ಕೆ ಮಾಲೆ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ತಾಲೂಕಿನಾದ್ಯಂತ ಬಿಗುವಿನ ವಾತಾವರಣ ಕಂಡಿದೆಯಲ್ಲದೆ, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹೆಣಗಾಡಬೇಕಾಯಿತು. ಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಬಸ್ ನಿಲ್ದಾಣ, ಮುಖ್ಯರಸ್ತೆ, ಶ್ರೀರಾಮ ಮಾರುಕಟ್ಟೆ ಹಾಗೂ ಸಿದ್ಧಾರ್ಥ ಚೌಕ್ ಇನ್ನಿತರ ಕಡೆ ಪ್ರತ್ಯೇಕವಾಗಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ದರ್ಗಾ ಶಿರೂರ ಗ್ರಾಮದಲ್ಲಿ ಕರವೇ ಅಧ್ಯಕ್ಷ ರಾಜಕುಮಾರ ಮೂಲಗೆ ನೇತೃತ್ವದಲ್ಲಿ ಬಂಡೆ ಅವರು ಸಾವಿನ ಪ್ರಕರಣವನ್ನು ಖಂಡಿಸಿ ರಸ್ತೆ ತಡೆ ನಡೆಸಿದರು. ಅಲ್ಲದೆ, ಶ್ರದ್ಧಾಂಜಲಿ ಅರ್ಪಿಸಿ ಆತ್ಮಕ್ಕೆ ಶಾಂತಿ ಕೋರಿದರು.
ತಹಸೀಲ್ದಾರ್ ಕಚೇರಿ: ಭಾರತ ಆಟೋ ಚಾಲಕರ ಸಂಘದ ಆಶ್ರಯದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗದ ಚೌಕ್ನಲ್ಲಿ ಶ್ರದ್ಧಾಂಜಲಿ ಸಭೆ ಅರ್ಪಿಸಿದರು. ಸಂಘದ ದಯಾನಂದ, ಅರವಿಂದ ಭೂಸಣಗಿ, ಸಂತೋಷ ಕಾಳೆ, ಅಬ್ದುಲ್ ಶೇಖ್, ಹಣಮಂತ ಖಂಡೆ, ಶ್ಯಾಣು ಮೊತೆ, ಗುಲಾಬ್ ಶೇಖ್ ಅನ್ಸಾರಿ ಇದ್ದರು.
ಪೊಲೀಸ್ ಚೌಕಿ: ಹೃದಯ ಭಾಗದ ಹಳೆಯ ಪೊಲೀಸ್ ಚೌಕಿಯ ಗಣೇಶ ಮಂದಿರ ಮುಂಭಾಗದಲ್ಲಿ ಶ್ರದ್ಧಾಂಜಲಿ ನಡೆಯಿತು. ಸಿಪಿಐ ಕರಿಯಪ್ಪ ಹಟ್ಟಿ ಅವರು ಬಂಡೆ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಬಸವ ಕೇಂದ್ರ ಅಧ್ಯಕ್ಷ ಶ್ರೀಮಂತ ಕಾರಬಾರಿ, ಪುರಸಭೆ ಸದಸ್ಯ ಲಿಂಗರಾಜ ಎಂ. ಪಾಟೀಲ, ಶ್ಯಾಣು ನಾಗೂರೆ, ಮಹಾಂತೇಶ ಹಡಪದ, ಮಹಾದೇವ ಪಾಟೀಲ್, ಶಾಂತಪ್ಪ ನಿಪ್ಪಾಣಿ, ಶಿವಾಜಿ ಮಿಸ್ಕಿನ್, ತಿಪ್ಪೇರುದ್ರ ಸ್ವಾಮಿ, ಅನಿಲ ಬುಲಬುಲೆ, ರಾಹುಲ್ ಬಂಡಗಾರಮ, ಗಿರೀಶ ಮಡ್ಡೆ ನೂರಾರು ಮಂದಿ ಭಾಗವಹಿಸಿದ್ದರು.
ನೌಕರರ ಸಂಘ ಶೋಕ: ಪಟ್ಟಣದ ಶರಣ ಏಕಾಂತ ರಾಮಯ್ಯನ ಮಂದಿರದಲ್ಲಿ ವೀರಶೈವ ನೌಕರರ ಸಂಘ ಮತ್ತು ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಅಧ್ಯಕ್ಷ ಸಿದ್ರಾಮಪ್ಪ ನಂದಗಾಂವ, ಗುರುಲಿಂಗಯ್ಯ ಅಳ್ಳೋಳ್ಳಿಮಠ, ಶ್ರೀಪಾಲ ಭೋಗಾರ, ಧರ್ಮರಾಯ ಕೊರಳ್ಳಿ, ಸತೀಶ್ ಷಣ್ಮುಖ, ಶಿವಶರಣಪ್ಪ ಸೋಮಾ, ಪವಾಡಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

