ಪೊಲೀಸಿಂಗ್ಗೆ ಮಂಕು ಬಿಡಲ್ವಾ ತಮ್ಮ?
ವಿಶೇಷ ವರದಿ
ಗುಲ್ಬರ್ಗ: ಸರಗಳ್ಳತನ ಪಿಡುಗು, ದಾಂಡಿಗರಿಂದ ದಾಂದಲೆ, ಬೀದಿ ಕಾಮಣ್ಣರ ಕಾಟ... ಎಂದು ಠಾಣೆಗೆ ಹೋದವರೊಂದಿಗೆ ಖಾಕಿಪಡೆ ನಡೆಸುವ ಮಾತುಕತೆ ಝಲಕ್ ಇದು.
ಬೇರುಮಟ್ಟದಲ್ಲಿ ಕೆಲಸ ಮಾಡುವ ಪೊಲೀಸರ ಈ ಮಾತುಗಳನ್ನ ಸೂಕ್ಷ್ಮವಾಗಿ ಗಮನಿಸಿದವರಿಗೆ ಇಡೀ ಖಾಕಿಪಡೆ ವಿವರಣೆಗೆ ಸಿಗದಂತಹ, ಬಹಿರಂಗವಾಗಿ ಚರ್ಚಿಸಲು ಆಗದಂತಹ ಹತ್ತು ಹಲವು ಕಾರಣಗಳಿಂದಾಗಿ ಒಳಗೊಳಗೆ ಮಂಕಾಗುತ್ತಿದೆಯೇ ಎಂಬ ಅನುಮಾನ ಕಾಡುವಂತಾಗಿದೆ.
ಯಾರು ಹೊಣೆ: ಗುಲ್ಬರ್ಗ ಬೆಳೆಯುತ್ತಿದೆ, ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ವ್ಯವಸ್ಥೆಯೂ ಬಲವಾಗಬೇಕಿತ್ತು. ಆದರಿಲ್ಲಿ ಹಾಗೆ ಆಗುತ್ತಿಲ್ಲ. ಪ್ರತ್ಯೇಕ ಪೊಲೀಸ್ ಆಯುಕ್ತಾಲಯ ಇಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆ ಇದ್ದರೂ ಅದು ಇಂದಿಗೂ ಕೈಗೂಡುತ್ತಿಲ್ಲ. ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ. ಹೀಗಾಗಿ ಜನರ ಆಸ್ತಿಪಾಸ್ತಿ, ಮಾನ-ಪ್ರಾಣ ಸಂರಕ್ಷಣೆಯ ಮಹತ್ವದ ಕೆಲಸಕ್ಕೆ ತೊಡಗಿಸಿಕೊಳ್ಳಬೇಕಿದ್ದ ಪೊಲೀಸ್ ಇಲ್ಲಿ ಮೌನವಾಗಿದೆ.
ಗುಲ್ಬರ್ಗ ದಿನೇ ದಿನೇ ಬೆಳೆಯುತ್ತಿದೆ. ಇಲ್ಲಿ ಕಮೀಷನರೇಟ್ ಬೇಕ್ರಿ, ಎಲ್ರೂ ಸೇರಿ ಆಗ್ರಹಿಸಬೇಕು, ಇಲ್ದೆ ಹೋದ್ರೆ ಅಪರಾಧ ಪ್ರಕರಣಗಳಿಗೆ ಮೂಗುದಾರ ಹಾಕೋರೇ ಇಲ್ಲದ್ಹಂಗೆ ಆಗ್ತದೆ. ಈಗಿರೋ ಸಿಬ್ಬಂದಿಯೊಳಗೆ ಅಪರಾಧ ನಿಯಂತ್ರಣ ಕಷ್ಟಕಷ್ಟ...
ಖದೀಮರನ್ನ ಹಿಡ್ದು ತಂದು ಬಡದ್ರ ನಮಗ ಯಾರು ಸಪೋರ್ಟ್ ಮಾಡೋದಿಲ್ಲ, ನಾವು ನೌಕರಿ ಕಳಕೊಂಡು ಹೋಗಬೇಕು, ಮನ್ಯಾಗ ಹೆಂಡ್ರು, ಮಕ್ಕಳು ಪರೇಶಾನ್. ಪಬ್ಲಿಕ್ ಸಪೋರ್ಟ್ ಸಿಗೋದಿಲ್ರಿ, ಠಾಣಾದಾಗ ಸಿಬ್ಬಂದಿ ಕೊರತೆ ಬ್ಯಾರೆ ಏನ್ ಮಾಡೋಕಾಗ್ತದ ಹೇಳ್ರಿ...?
ನೀವು ಚೈನ್ ಕಸಿಯುವವರನ್ನ ಯಾಕ ಹಿಡಿತಿಲ್ಲ ಅಂತೀರಿ... ನಿಧಿ ಆಸೆಯ ಬಾಲಕಿ ಬಲಿ ಪ್ರಕರಣದಾಗ ನಾವು ಆರೋಪಿಯಲ್ಲಿ ಒಬ್ಬನನ್ನ ಠಾಣೆಯಲ್ಲಿ ಹೊಡೆದೆವು. ಅದಕ್ಕೆ ಲಾಕಪ್ ಡೆತ್ ಅಂದ್ರು, ಇಬ್ಬರು ಅಧಿಕಾರಿ ಸೇರಿ 7 ಮಂದಿ ಸಸ್ಪೆಂಡ್ ಆದ್ರು, ನಾವ್ಯಾಕ್ರಿ ರಿಸ್ಕ್ ತಗೋಬೇಕು
ಹಗಲು-ರಾತ್ರಿ ಓಡಾಡಿ ಸಾಕಾಗಿ ವಿರಮಿಸೋಣ ಅಂತ ಕುಳಿತ್ರ ಚೈನ್ ಕದ್ದು ಓಡಿ ಹೋದ್ರೂಂತ ಠಾಣೆಯಿಂದ ಫೋನ್ ಬರ್ತಾವ. ಬಡದ್ಯಾಡಿದ್ರೂ ಏನು ಆಗವಲ್ತು. ಹಿಡಿದು ವಿಚಾರಣೆ ಮಾಡೋಣ ಅಂದ್ರೆ ಯಾರದು ಸಪೋರ್ಟ್ ಸಿಗೋದಿಲ್ಲ. ಏನ್ ಮಾಡೋಣ...
ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುವರೇ?
ನಗರದಲ್ಲಿನ ಪೊಲೀಸಿಂಗ್ ಮಂಕಾಗಿರುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಗಮನಿಸುವರೇ ಎಂಬುದೇ ಜನರ ಪ್ರಶ್ನೆ. ಜು.12ರಂದು ಸಚಿವ ಇಸ್ಲಾಂ, ನಗರ ಪೊಲೀಸಿಂಗ್ ವಿಚಾರದಲ್ಲಿ ಚರ್ಚಿಸಲು ಸಭೆ ಕರೆಯುವುದಾಗಿ ಘೋಷಿಸಿದ್ದಾರೆ. ಸಚಿವರು ಹೇಳಿಕೆಯಂತೆ ಸಭೆ ನಡೆಸುವರೇ, ಆ ಸಭೆ ಎಷ್ಟರ ಮಟ್ಟಿಗೆ ಫಲಪ್ರದವಾಗುವುದೋ ಕಾದುನೋಡಬೇಕಾಗಿದೆ.
ಪೇದೆ ಹುದ್ದೆಗಳ ಕೊರತೆ
ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪೊಲೀಸ್ ಪೇದೆ ಹುದ್ದೆಗಳ ಕೊರತೆ ಕಾಡುತ್ತಿದೆ ಎಂದು ಗೃಹ ಸಚಿವ ಕೆ. ಜೆ ಜಾರ್ಜ್ ವಿಧಾನ ಪರಿಷತ್ ಸದಸ್ಯ ಅಲ್ಲಮ ಪ್ರಭು ಪಾಟೀಲರ ಪ್ರಶ್ನೆಗೆ ಲಿಕಿತ ಉತ್ತರ ನೀಡಿದ್ದಾರೆ.
ಗುಲ್ಬರ್ಗ ಜಿಲ್ಲೆಯಲ್ಲಿ 400 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 78 ಪೇದೆಗಳ ಕೊರತೆ ಇದೆ. ಮುಂದಿನ 6 ತಿಂಗಳಲ್ಲಿ ಉದ್ಭವವಾಗುವ ಖಾಲಿ ಸ್ಥಾನಗಳನ್ನು ಗಣನೆಗೆ ತೆಗೆದುಕೊಂಡು ಗುಲ್ಬರ್ಗ- 157, ಯಾದಗಿರಿಯಲ್ಲಿ 100 ಪೊಲೀಸ್ ಪೇದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಪೇದೆಗಳ ಕೊರತೆ ಇರುವುದರಿಂದ ಕಾನೂನು ಸುವ್ಯವಸ್ಥೆ, ರಾತ್ರಿ ಗಸ್ತು, ಸಂಚಾರ ನಿಯಂತ್ರಣ ಹಾಗೂ ಶಾಸನ ಬದ್ಧವಲ್ಲದ ಕೆಲಸಗಳ ನೆರವಿಗಾಗಿ ಪೊಲೀಸ್ ಪೇದೆಗಳ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ರಕ್ತ ಸ್ಥಳಗಳಲ್ಲಿ 7, 000 ಗೃಹ ರಕ್ಷಕ ದಳ ಸಿಬ್ಬಂಧಿಗಳನ್ನು ಉಭಯ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ನಿಯುಕ್ತಿಗೊಳಿಸಿ ಕೆಲಸ ನಿರ್ವಹಿಸಲು ಮಂಜೂರಾತಿ ನೀಡಲಾಗಿದೆ.
ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಿಗೆ ಕ್ರಮವಾಗಿ ಒಟ್ಟು 264 ಹಾಗೂ 84 ಗೃಹ ರಕ್ಷಕ ಸಿಬ್ಬಂಧಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಗೃಹ ಸಚಿವ ಜಾರ್ಜ್ ಅವರು ಎಂಎಸ್ವಿ ಅಲ್ಲಮ ಪ್ರಭು ಪಾಟೀಲರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಸಂಚಾರಿ ಠಾಣೆ: ಗುಲ್ಬರ್ಗ ಜಿಲ್ಲೆ ವ್ಯಾಪ್ತಿಯಲ್ಲಿ 37 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳು, 2 ಸಂಚಾರಿ ಪೊಲೀಸ್ ಠಾಣೆಗಳು, ಯಾದಗಿರಿ ಜಿಲ್ಲೆಯಲ್ಲಿ 13 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರವೇ ಯಾದಗಿರಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ಆರಂಭಿಸುವ ಚಿಂತನೆ ಇದೆ ಎಂದು ಸಚಿವ ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಪೊಲೀಸರು ಎಚ್ಚೆತ್ತು ಕೆಲಸ ಮಾಡೋದು ಬಿಟ್ಟು ಕರಪತ್ರ, ಫ್ಲೆಕ್ಸ್ ಹಚ್ಚಗೊಂಡು ಹೊಂಟಾರ್ರಿ, ಇದು ಕೆಲಸಕ್ಕ ಬರೋದಿಲ್ಲ. ಟ್ಯಾಂಗೋಗಳಲ್ಲಿ ಕುಳಿತು ಪೊಲೀಸರು ರಿಂಗ್ ರಸ್ತೆಯಲ್ಲಿ ಓಡಾಡುವ ಲಾರಿಗೋಳ ಹಿಂದ ಬಿದ್ದಾರ್ರಿ, ಇತ್ತ ಸರಗಳ್ಳರು ಜನರನ್ನು ಪೀಡಿಸ್ಲಿಕತ್ತಾರ್ರಿ, ಹೋಗ್ಲಿ ಮರಳು ಲೂಟಿ ನಿಂತದ ಅಂತೀರೇನು ಅದೂ ನಿಂತಿಲ್ರಿ.
ಎಂ.ಎಸ್. ಪಾಟೀಲ್ ನರಿಬೋಳ, ಅಧ್ಯಕ್ಷರು, ಪಂಚಜಿಲ್ಲೆಗಳ ಜನಪರ ಹೋರಾಟ ಸಮಿತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

