ಗುಲ್ಬರ್ಗಾ

570 ವಿದ್ಯಾರ್ಥಿಗಳು ಮೂವರೇ ಮಾಸ್ತರ್

Published On :

ಯಾದಗಿರಿ: ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದರೂ ಸಹ ಶಿಕ್ಷಕರನ್ನು ನೇಮಿಸದೆ ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದಕ್ಕೆ ಶಹಾಪುರ ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಸರ್ಕಾರ ಪ್ರಾಥಮಿಕ ಶಾಲೆಯೇ ನಿದರ್ಶನ.
ಈ ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ 632 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಆದರೇ ಪ್ರತಿನಿತ್ಯ ಶಾಲೆಗೆ 570ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಸರ್ಕಾರದ ನಿಯಮಾನುಸಾರ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಈ ಶಾಲೆಯಲ್ಲಿ ಒಟ್ಟು 14 ಜನ ಶಿಕ್ಷಕರು ಬೇಕು. ಆದರೆ ಇಲ್ಲಿ ಕೇವಲ ಮೂರು ಜನ ಶಿಕ್ಷಕರು ಹಾಗೂ ಒಬ್ಬ ಮುಖ್ಯಗುರು. ಮೂರು ಜನ ಶಿಕ್ಷಕರು ಇಡೀ 8 ತರಗತಿಗಳಿಗೆ ಬೋಧನೆ ಮಾಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ.
ವರ್ಗಗಳ ವಿಲೀನ: ಶಿಕ್ಷಕರ ಕೊರತೆ ಇರುವುದರಿಂದ ಮುಖ್ಯಗುರುಗಳು 1ರಿಂದ 3ನೇ ತರಗತಿಯವರೆಗೆ ನಲಿ-ಕಲಿ, 4ನೇ ತರಗತಿಯಿಂದ 6ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕುಳ್ಳಿರಿಸಿ ಶಿಕ್ಷಕರು ಬೋಧನೆ ಮಾಡುತ್ತಾರೆ. ಹೀಗೆ ವರ್ಗಗಳನ್ನು ವಿಲೀನ ಮಾಡಿಕೊಂಡು ಶಿಕ್ಷಕರು ಬೋಧನೆ ಮಾಡುತ್ತಿರುವಾಗ ಇನ್ನೊಂದು ತರಗತಿಯ ವಿದ್ಯಾರ್ಥಿಗಳು ಸುಮ್ಮನೆ ಕುಳಿತು ಕಾಲಹರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 7ನೇ ಮತ್ತು 8ನೇ ತರಗತಿಗಳನ್ನು ಬೇರೆಯಾಗಿ ನಡೆಸುತ್ತಿದ್ದಾರೆ. ಇಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ವಿಷಯ ಜ್ಞಾನ ತಿಳಿಯದಾಗಿದೆ.
ಈ ಹಿಂದೆ ದಾಖಲಾತಿಗನುಗುಣವಾಗಿ ಶಿಕ್ಷಕರು ಶಾಲೆಯಲ್ಲಿ ಇದ್ದರು. ನಂತರ ಕೆಲವರು ವರ್ಗಾವಣೆ ಮಾಡಿಕೊಂಡು ಹೋದರು. ಕಳೆದ ಕೆಲವು ವರ್ಷಗಳಿಂದ ಶಿಕ್ಷಕರ ಕೊರತೆ ಇದ್ದು, ಇದಕ್ಕೆ ಮುಖ್ಯವಾದ ಕಾರಣವೆಂದರೆ ಇಲ್ಲಿಂದ ಶಿಕ್ಷಕರು ವರ್ಗಾವಣೆಗೊಂಡರೆ ಅವರ ಸ್ಥಳದಲ್ಲಿ ಮತ್ತೊಬ್ಬ ಶಿಕ್ಷಕರನ್ನು ಅಧಿಕಾರಿಗಳು ವರ್ಗಾವಣೆ ಮಾಡದಿರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ.
ಪಾಲಕರ ಆಕ್ರೋಶ: ಸರ್ಕಾರ ಒಂದು ಕಡೆ ಪ್ರಾಥಮಿಕ ಶಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಅದಕ್ಕಾಗಿ ಪ್ರತಿಯೊಂದು ಕಡೆ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಸರ್ಕಾರ ಶಾಲೆಗಳನ್ನು ಆರಂಭಿಸಿ ಶಿಕ್ಷಕರ ನೇಮಕ ಮಾಡುವುದನ್ನೇ ಮರೆಯುತ್ತದೆ. ಇದರಿಂದ ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಈ ಶಾಲೆಗೆ ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ತಾಲೂಕಿನಲ್ಲಿ 500 ಶಿಕ್ಷಕರ ಕೊರತೆ ಇದೆ. ಸರ್ಕಾರ ನಮಗೆ 250 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಆದೇಶ ಮಾಡಿದೆ. ಆ ನಿಯಮದ ಅಡಿಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ನೋಡಿಕೊಂಡು ಅದರಲ್ಲಿ ಕೊರತೆ ಇರುವ ಶಾಲೆಗಳಿಗೆ ಶೇ.50ರಷ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.
 ರಾಯಪ್ಪರಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಶಹಾಪುರ


ಶಾಲೆಯಲ್ಲಿ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳು ಸುಮ್ಮನೆ ಕುಳಿತು ಕಾಲಹರಣ ಮಾಡಿ ಬರುತ್ತಿದ್ದಾರೆ. ಅವರಿಗೆ ಸರಿಯಾಗಿ ಪಾಠ ಮಾಡುವವರು ದಿಕ್ಕಿಲ್ಲದಂತಾಗಿದೆ.
 ಸಣ್ಣಮಲ್ಲಪ್ಪ, ಗ್ರಾಮಸ್ಥರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.