ಗುಲ್ಬರ್ಗಾ

ಕುಲಪತಿ ನೇಮಕಕ್ಕೆ ಲಕ್ಷ್ಮಣ ದಸ್ತಿ ಆಗ್ರಹ

Published On :

ಗುಲ್ಬರ್ಗ: ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾಕಷ್ಟು ಸುದ್ದಿಯಲ್ಲಿರುವ ಗುಲ್ಬರ್ಗ ವಿವಿಗೆ ದಕ್ಷ ಕುಲಪತಿಯನ್ನು ನೇಮಕ ಮಾಡಿ ಕಳುಹಿಸಬೇಕೆಂದು ಹೈ-ಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದ್ದಾರೆ. ವಿವಿ ಇತಿಹಾಸದಲ್ಲಿ ಕೆಲವರನ್ನು ಹೊರತುಪಡಿಸಿದರೆ ಬಹುತೇಕ ಕುಲಪತಿಗಳು ಕಟ್ಟಡ ನಿರ್ಮಾಣ ಮತ್ತಿತರ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುವ ಮೂಲಕ ಶಿಕ್ಷಣದ ಗುಣಮಟ್ಟ ಕುಸಿದಿದೆ. ಆದ್ದರಿಂದ ದಕ್ಷ ಆಡಳಿತ ನಡೆಸಬಲ್ಲ ಕುಲಪತಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಶುದ್ಧ ನೀರಿನ ಪೂರೈಕೆರೋಗಗಳ ಭೀತಿ
ಗುಲ್ಬರ್ಗ: ನಗರದಲ್ಲಿ ಒಂದೆಡೆ ನೀರಿಗಾಗಿ ಹಾಹಾಕಾರವಿದ್ದರೆ, ಇನ್ನೊಂದೆಡೆ ಅಶುದ್ಧ ನೀರಿನ ಪೂರೈಕೆಯಿಂದ ಹಲವಾರು ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆಂದು ಗುಲ್ಬರ್ಗ ನಾಗರಿಕ ಹೋರಾಟ ಸಮತಿ ಆಗ್ರಹಿಸಿದೆ. ನಗರಕ್ಕೆ ವಿತರಣೆಯಾಗುತ್ತಿರುವ ಅಶುದ್ಧ ನೀರು ಬದಲಿಗೆ ಆ ನೀರನ್ನು ಶುದ್ಧೀಕರಣ ಮಾಡಿ ಸಮರ್ಪಕವಾಗಿ ಪೂರೈಸಬೇಕು. ಜಿಲ್ಲಾಡಳಿತ ಈ ಸಮಸ್ಯೆಯನ್ನು ತುರ್ತಾಗಿ ಗಮನಿಸಿ ಕ್ರಮಕೈಗೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ವಿ.ಜಿ. ದೇಸಾಯಿ, ಸಂಚಾಲಕಿ ವಿ. ನಾಗಮ್ಮಾಳ ಇದ್ದರು.
ಸಿಬ್ಬಂದಿಗೆ ಸಂಬಳ ಹೆಚ್ಚಿಸಿ
ಗುಲ್ಬರ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 118 ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಬಳ ಹೆಚ್ಚಿಸಿ ಸರ್ಕಾರದ ನಿಯಮಾನುಸಾರ ಸರ್ಕಾರಿ ರಜೆಗಳನ್ನು ನೀಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜೈ ಕರವೇ ಅಧ್ಯಕ್ಷ ಸಚಿನ್ ಎಸ್. ಫರತಾಬಾದ್, ಕಾಶಿನಾಥ ಎಸ್.ಮಾಳಗೆ, ಅಣವೀರ ಪಾಟೀಲ್, ಸಂದೇಶ ಪವಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪತ್ರಿಕಾ ದಿನಾಚರಣೆ ಇಂದು
ಗುಲ್ಬರ್ಗ: ಗುಲ್ಬರ್ಗ ಮೀಡಿಯಾ ಕ್ಲಬ್ ವತಿಯಿಂದ ಆಳಂದ ತಾಲೂಕಿನ ವಿ.ಕೆ. ಸಲಗರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 24ರಂದು ಬೆಳಗ್ಗೆ 11ಕ್ಕೆ ಪತ್ರಿಕಾ ದಿನಾಚರಣೆ ಆಚರಿಸಲಾಗುವುದು. ಜಿಲ್ಲಾ ವರದಿಗಾರರ ಸಂಘದ ಅಧ್ಯಕ್ಷ ಎಸ್.ಕೆ. ಮಾವನೂರ ಕಾರ್ಯಕ್ರಮ ಉದ್ಘಾಟಿಸುವರು. ಸೂರ್ಯಕಾಂತ ಜಮಾದಾರ, ಜಿ.ಎಸ್. ಮಾಲಿಪಾಟೀಲ್, ಡಾ. ಅಜೀಜ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗುಲ್ಬರ್ಗ ಮೀಡಿಯಾ ಕ್ಲಬ್ ಅಧ್ಯಕ್ಷ ಬಸವರಾಜ ಚಿನಿವಾರ ಅಧ್ಯಕ್ಷತೆ ವಹಿಸುವರು.
ಮಲ್ಕಪ್ಪ ಪೂಜಾರಿ ನಿಧನ
ಜೇವರ್ಗಿ: ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಕಪ್ಪ ನಿಂಗಪ್ಪ ಪೂಜಾರಿ ಹಾಲಗಡ್ಲಾ (70) ಬುಧವಾರ ನಿಧನ ಹೊಂದಿದ್ದಾರೆ. ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 2ಕ್ಕೆ ಸ್ವಗ್ರಾಮ ಹಾಲಗಡ್ಲಾದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.