ಕಾಮದಹನದಿಂದ ಸುಭಿಕ್ಷು ಸಮಾಜ ನಿರ್ಮಿಸಿ
ಯಾದಗಿರಿ: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ತಡೆಗಟ್ಟಬೇಕು, ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮರವಣಿಗೆ ನಡೆಸಿದವು.
ಎಐಎಂಎಸ್ಎಸ್, ಎಐಡಿಎಸ್ಒ ಹಾಗೂ ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಕಚೇರಿಯ ಮುಂದೆ ಭಾರೀ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಅತ್ಯಾಚಾರಿಗಳನ್ನು ಉಗ್ರವಾಗಿ ಶಿಕ್ಷಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ತಡೆಗಟ್ಟಿ, ಉನ್ನತ ನೀತಿ, ಸಂಸ್ಕೃತಿ ನಮ್ಮ ಗುರಿ, ಮಾನವ ಚರಿತ್ರೆಯಲ್ಲಿ ಉದಾತ್ತ ಮೌಲ್ಯಗಳನ್ನು ಪ್ರತಿಬಿಂಬಿಸಿದ ಮಹಾನ್ ವ್ಯಕ್ತಿಗಳ ಜೀವನದ ಕುರಿತು ಪಠ್ಯದಲ್ಲಿ ಸೇರಿಸಿ, ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸದ ಸರ್ಕಾರಕ್ಕೆ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಕಳವಳ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್ಯುಸಿಐ ಪಕ್ಷದ ಸಂಘಟನಾ ಸಮಿತಿ ಸದಸ್ಯೆ ಡಿ.ಉಮಾದೇವಿ, ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ, ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಬಾಲಕಿಯ ಮೇಲೆ ಶಿಕ್ಷಕನ ಅತ್ಯಾಚಾರದಂಥ ಹೇಯ ಕೃತ್ಯಗಳು ಇಡೀ ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ಶಾಲೆಯಲ್ಲಿಯೇ ರಕ್ಷಣೆ ಇಲ್ಲ ಎಂಬುದು ಎಲ್ಲ ಪೋಷಕರನ್ನು ತೀವ್ರ ಕಳವಳಕ್ಕೀಡು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಐಡಿಎಸ್ಒನ ಅಧ್ಯಕ್ಷೆ ಗೌರಮ್ಮ ಸಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಎಐಎಂಎಸ್ಎಸ್ನ ಬಸಮ್ಮ, ಪ್ರಿಯಾಂಕ, ಜ್ಯೋತಿ, ಕಾವೇರಿ, ಅನಿತಾ, ಕವಿತಾ, ರೇಣುಕಾ, ಶ್ರುತಿ, ಸೋನಿಯಾ, ಮಂಜುಳ, ಮರಿಲಿಂಗಪ್ಪ, ಎಐಡಿವೈಒನ ಬನಶಂಕರ, ಮುರುಘೇಂದ್ರ, ವಿವಿಧ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹಕ್ಕೊತ್ತಾಯಗಳು
1. ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾತಕಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕು.
2. ಪಿಜಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪಾತಕಿಗಳಿಗೆ ಶಿಕ್ಷೆಯಾಗಬೇಕು.
3. ಅತ್ಯಾಚಾರಕ್ಕೊಳಗಾದ ಮಹಿಳೆಯರ ದೂರನ್ನು ಸ್ವೀಕರಿಸದೆ ಕರ್ತವ್ಯಲೋಪ ಎಸಗುವ ಎಲ್ಲ ಪೋಲೀಸ್ ಅಧಿಕಾರಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು.
4. ಅಶ್ಲೀಲ ವೆಬ್ಸೈಟ್ಗಳನ್ನು ನಿಷೇಧಿಸಬೇಕು. ಅಶ್ಲೀಲ ಸಿನಿಮಾ, ಸಾಹಿತ್ಯ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
5. ವಿಜ್ಞಾನಿಗಳು, ನವೋದಯದ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರ ಜೀವನಾದರ್ಶಗಳನ್ನು ಪಠ್ಯದಲ್ಲಿ ಅಳವಡಿಸಬೇಕು.
6. ನ್ಯಾ. ವರ್ಮಾ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

