ಕಳಪೆ ಕಾಮಗಾರಿ: ಅಧಿಕಾರಿಗೆ ದೂರು
ಜೇವರ್ಗಿ: ತಾಲೂಕಿನ ಹರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಂಚಿನಾಳ (ಎಸ್ಎ) ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನೆಯಡಿಯಲ್ಲಿ ನಿರ್ಮಿಸಿದ ಸಿಸಿ ರಸ್ತೆ ಕಳಪೆ ಮಟ್ಟದ್ದಾಗಿದ್ದು, ಈ ಕಾಮಗಾರಿಯ ಬಿಲ್ ತಡೆಹಿಡಿಯುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ವತಿಯಿಂದ ಶುಕ್ರವಾರ ಚಿಗರಹಳ್ಳಿಯಲ್ಲಿರುವ ಜೇವರ್ಗಿ ಶಾಖಾ ಕಾಲುವೆಯ ವಿಭಾಗ ಸಂಖ್ಯೆ 3ರ ಇಇ ಅವರಿಗೆ ದೂರು ಸಲ್ಲಿಸಲಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಜೇವರ್ಗಿ ಶಾಖಾ ಕಾಲುವೆ ವಿಭಾಗ ಕಚೇರಿ 3ರ ಅಡಿಯಲ್ಲಿ ತಾಲೂಕಿನ ಹಂಚಿನಾಳ (ಎಸ್.ಎ) ಗ್ರಾಮದಲ್ಲಿ ಎಸ್.ಸಿ.ಎಸ್.ಟಿ ಯೋಜನೆಯಡಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಳಪೆ ಮಟ್ಟದಿಂದ ಕೂಡಿದೆ. ಇಲಾಖೆಯ ಅಧಿಕಾರಿಗಳು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿಲ್ಲ. ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಮನವಿ ಮೂಲಕ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಸುಧೀಂದ್ರ ನೀರಲಕೋಡ, ದವಜಪ್ಪಗೌಡ, ಇತರರು ಇದ್ದರು.
ಲೈನ್ಮೆನ್ರಿಗೆ ಸೂಕ್ತ ಭದ್ರತೆ: ಮನವಿ
ಗುಲ್ಬರ್ಗ: ನಗರದಲ್ಲಿರುವ ತುರ್ತು ವಿದ್ಯುತ್ ಕಾಮಗಾರಿ ವಾಹನಗಳ ಹಾಗೂ ಲೈನ್ಮೆನ್ಗಳ ಸಂಖ್ಯೆ ಮತ್ತು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವಿದ್ಯುತ್ ಸರಬರಾಜು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದೆ.ನಗರದಲ್ಲಿರುವ ತುರ್ತು ವಿದ್ಯುತ್ ರಿಪೇರಿ ವಾಹನಗಳು ಬೆರಳೆಣಿಕೆಯಷ್ಟಿದ್ದು, ಮಳೆಗಾಲ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಅದರಂತೆ ತುರ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈನ್ಮೆನ್ಗಳ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಸಮಸ್ಯೆ ಪರಿಹಾರಕ್ಕೆ ಕಷ್ಟವಾಗುತ್ತಿದೆ ಎಂದು ಆರೋಪಿಸಿದೆ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಪರತಾಬಾದ್ ಎಚ್ಚರಿಸಿದ್ದಾರೆ. ಅಣವೀರ ಎಸ್.ಪಾಟೀಲ, ಕಾಶಿನಾಥ ಎಸ್. ಮಾಳಗಿ, ಸಂಜು ಗುತ್ತೇದಾರ, ಸಂದೇಶ ಪವಾರ, ಕಪಿಲ ಸಿಂಧೆ, ಶಂಕರ ಡಿ. ಹುಲಸೂರ, ಶ್ರೀನಿವಾಸ ಎಸ್. ಸೋನೆಗಾರ, ಸತೀಶ ಪರತಾಬಾದ, ಬಂಟಿ ಕಮನೂರ, ಬಾಬುರಾವ್ ಚಿಂಚನಸೂರ, ಸುರೆಶ ಹನಗುಂಡಿ ಮುಂತಾದವರು ಇದ್ದರು.
ಉಚಿತ ನೇತ್ರ ಚಿಕಿತ್ಸಾ ಶಿಬಿರ ಯಶಸ್ವಿ
ಗುಲ್ಬರ್ಗ: ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿ ದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 360 ಜನರ ಕಣ್ಣುಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಾಯಿತು. ಆಳಂದ ಮತ್ತು ಸುತ್ತಮುತ್ತಲಿನ ಗ್ರಾಮದ 24 ಪುರುಷರು ಮತ್ತು 36 ಮಹಿಳೆಯರು, ಒಟ್ಟು 60 ಹಿರಿಯ ನಾಗರಿಕರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ನೆರವೇರಿಸಿ ಕೃತ್ರಿಮ ಮಸೂರ ಅಳವಡಿಸಲಾಯಿತು.ಜರ್ಮನಿಯ ಹಮಾರ ಬಂಧನ ಸ್ವಯಂ ಸೇವಾ ಸಂಸ್ಥೆ ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನೆ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ 33ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಆರ್. ಹರವಾಳ ಪ್ರತಿಯೊಬ್ಬ ರೋಗಿಯನ್ನು ಭೇಟಿ ಮಾಡಿ ಅವರ ಯೋಗಕ್ಷೇವು ವಿಚಾರಿಸಿದರು. ರೋಗಿಗಳಿಗೆ ಉಚಿತವಾಗಿ ಕನ್ನಡಕ ಮತ್ತು ಕಣ್ಣಿನ ಔಷಧ ವಿತರಿಸಿದರು.ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಪೂಜಾರಿ ನೇತೃತ್ವದಲ್ಲಿ ನೇತ್ರ ತಜ್ಞರಾದ ಡಾ. ವಿಶ್ವನಾಥ ರೆಡ್ಡಿ, ಡಾ. ರಾಜಶ್ರೀ ರೆಡ್ಡಿ, ಡಾ. ಸಂತೋಷ ಪಾಟೀಲ, ಡಾ. ಮಂಜುಳಾ ಮಂಗಾಣಿ ಡಾ. ಕವಿತಾ ಸಲಗರ ಡಾ. ಸುಮಿತ್ ದೇಶಪಾಂಡೆ ಮತ್ತು ಡಾ. ಪ್ರಜ್ವಲಿ ರೆಡ್ಡಿ ಹಾಜರಿದ್ದರು.
ಶೌಚಾಲಯ ಪುನಾ ನಿರ್ಮಿಸಿ
ಗುಲ್ಬರ್ಗ: ನಗರದ ಜಗತ್ ಬಡಾವಣೆಯ ಹತ್ತಿದ ಹಿಂದಿ ಪ್ರಚಾರ ಸಭಾಂಗಣ ಸ್ಥಳದ ಪಕ್ಕದಲ್ಲಿರುವ ಮತ್ತು ನಗರದ ಸಿಟಿ ಬಸ್ ನಿಲ್ದಾಣಗಳ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಪುನಃ ಪ್ರಾರಂಭಿಸುವಂತೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದೆ. ನಗರದ ವಾರ್ಡ ನಂ. 43 ಜಗತ್ ಬಡಾವಣೆಯ ಹೆಚ್ಚು ಜನಸಂಖ್ಯೆಯುಳ್ಳ ಬಡಾವಣೆಯಾಗಿದ್ದು, ಬಡಾವಣೆ ಪಾಲಿಕೆ ವತಿಯಿಂದ ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯವು ಬಡಾವಣೆ ನಾಗರಿಕರಿಗೆ ಮತ್ತು ಅಕ್ಕ ಪಕ್ಕದ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಅನುಕೂಲವಾಗಿತ್ತು. ಆದರೆ ಅದು ಈಗ ಎರಡು ವರ್ಷಗಳಿಂದ ಚಲಾವಣೆ ಇಲ್ಲದೆ ಹಾಳಾಗಿದ್ದು, ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಈ ಶೌಚಾಲಯವನ್ನು ಪುನರ್ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ. ಅದೇ ರೀತಿ ನೃಪತುಂಗಾ ಬಸ್ ನಿಲ್ದಾಣಗಳಿರುವಂತಹ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಸೇನೆ ಒತ್ತಾಯಿಸಿದೆ. ಜಿಲ್ಲಾ ಉಪಾಧ್ಯಕ್ಷ ಸಿದ್ದು ಕಂದಗಲ, ತಾಲೂಕ ಅಧ್ಯಕ್ಷ ಸಂತೋಷ ತಳವಾರ, ವಾರ್ಡ ಅಧ್ಯಕ್ಷ ರಾಜು ಕಣ್ಣೂರ, ಸದಸ್ಯ ವಿರೇಶ ಕುಮಸಿ, ನಗರ ಕಾರ್ಯದರ್ಶಿ ಪ್ರಶಾಂತ ಚವ್ಹಾಣ ಮುಂತಾದವರು ಇದ್ದರು.
ಶೋಭಾಯಾತ್ರೆ
ಗುಲ್ಬರ್ಗ: ಯೋಗೀಶ್ವರ ಯಾಜ್ಞವಲ್ಕ್ಯ ಜಯಂತಿ ನಿಮಿತ್ತ ಶನಿವಾರ ಹುಣಸಿಹೊಳೆ ಕಣ್ವ ಮಠದ ವಿದ್ಯಾಭಾಸ್ಕರ ತೀರ್ಥರ ಶೋಭಾಯಾತ್ರೆಯನ್ನು ನಡೆಸಲಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ನೂತನ ವಿದ್ಯಾಲಯ ಸಂಸ್ಥೆವರೆಗೆ ಯಾತ್ರೆ ನಡೆಯಿತು. ಜಿಲ್ಲಾ ಬ್ರಾಹ್ಮಣ ಸಮಾಜ, ವಿಶ್ವ ಮಧ್ವಮಹಾಪರಿಷತ್, ಬಿದ್ದಾಪುರ ಕಾಲೋನಿ, ಜೇವರ್ಗಿ ಕಾಲೋನಿ, ಸತ್ಯಾತ್ಮ ಸೇನೆ ಹಾಗೂ ವಿವಿ ಭಜನಾಮಂಡಳಿಗಳು ಭಾಗವಹಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

