ಗುಲ್ಬರ್ಗಾ

ಪೊಲೀಸ್ ಪರೀಕ್ಷೆ ಸಿಇಟಿ: ಉಚಿತ ಕಾರ್ಯಾಗಾರ

Published On :

ಗುರುಮಠಕಲ್: ನಗರದ ವಿಜೇತ ಕರಿಯರ್ ಅಕಾಡೆಮಿ ವತಿಯಿಂದ ಶನಿವಾರ ಆಯೋಜಿಸಿದ್ದ ಪೊಲೀಸ್ ಸಿಇಟಿ ಕಾರ್ಯಾಗಾರ ಯಶಸ್ವಿಯಾಯಿತು.
ಬಿಜಾಪುರದ ಉಪನ್ಯಾಸಕ ಭೀಮನಗೌಡ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ಎಂಬ ಮನೋಭಾವ ಕಿತ್ತಿಹಾಕಿ ನಾವು ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ಸದಾ ಶ್ರೇಷ್ಠರು ಎಂಬ ಭಾವನೆಯಲ್ಲಿದ್ದರೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಂ.1 ಆಗಲು ಸಾಧ್ಯ ಎಂದು ತಿಳಿಸಿದರು.
ಸಾಮಾನ್ಯ ಜ್ಞಾನ ಪಡೆಯಲು ಸ್ಪರ್ಧಾತ್ಮಕ ಆಕಾಂಕ್ಷಿಗಳು ದಿನಪತ್ರಿಕೆಗಳ ಅಭ್ಯಾಸ, ಮಾರುಕಟ್ಟೆ ಬರುವ ಸ್ಪರ್ಧಾತ್ಮಕ ಪುಸ್ತಕಗಳು, ಮನೋರಮಾ ಇಯರ್ ಬುಕ್, ಪ್ರತಿಯೋಗಿತ ದರ್ಪಣ, 5ರಿಂದ10ನೇ ತರಗತಿಯ ಡಿಎಸ್‌ಇಆರ್‌ಟಿ ಪಠ್ಯಪುಸ್ತಕಗಳು, ಯಂಡಮುರಿ ವೀರೇಂದ್ರನಾಥ, ಡಾ. ಪಟ್ಟಾಭಿಷೇಕರಾಮ್ ಮುಂತಾದವರ ವ್ಯಕ್ತಿತ್ವ ವಿಕಾಸ ಪುಸ್ತಕಗಳು ಮತ್ತು ಯಶಸ್ವಿಕಾರರ ಜೀವನ ಚರಿತ್ರೆಯನ್ನು ಅಭ್ಯಾಸಿಸುತ್ತ ಬೆಳೆಯಬೇಕು ಎಂದು ಸಲಹೆ ನೀಡಿದರು.
ಪಿಡಿಒ ಶರಣಪ್ಪ ಮೈಲಾರಿ ಮಾತನಾಡಿ, ಸಮಾಜ ಸುರಕ್ಷಿತವಾಗಿರಲು ಹಾಗೂ ಸಮಾಜದ ಹಿತವನ್ನು ಕಾಪಾಡುವ ಜವಾಬ್ದಾರಿ ಪೊಲೀಸರ ಮೇಲಿರುತ್ತದೆ. ಆದರಿಂದ ವಿದ್ಯಾರ್ಥಿಗಳು ಸರ್ಕಾರಿ ಯಾವ ಉದ್ಯೋಗವು ಕೀಳುಮಟ್ಟದ್ದು ಎಂದು ಭಾವಿಸದೆ ಮುನ್ನುಗುವ ಕೆಲವು ಸಲಹೆಗಳನ್ನು ವಿವರಿಸಿದರು.
ಲಿಂಗಾನಂದ ಗೋಗಿ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ಎಂ.ಬಿ. ನಾಯಕಿನ್ ಅಧ್ಯಕ್ಷತೆ ವಹಿಸಿದ್ದರು. ಶರಣು ಪಸಾರ ನಿರೂಪಿಸಿದರು.
ರಾವೂರ ವಲಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಶಹಾಬಾದ್: ಚಿತ್ತಾಪುರ ತಾಲೂಕಿನ ರಾವೂರ ವಲಯ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಪತ್ರಕರ್ತ ಮಂಡಲಗಿರಿ ಪ್ರಸನ್ನ ಅವರಿಗೆ ಭಾನುವಾರ ಅವರ ನಿವಾಸದಲ್ಲಿ ವಲಯ ಕಸಾಪ ವತಿಯಿಂದ ಸನ್ಮಾನಿಸಿ, ಅಧಿಕೃತ ಆಹ್ವಾನ ಪತ್ರಿಕೆ ನೀಡಲಾಯಿತು.
ಜಿಲ್ಲೆಯಲ್ಲಿಯೇ ಪ್ರಥಮ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜೂ.21ರಂದು ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ನಡೆಯಲಿದೆ. ರಾವೂರ ವಲಯ ಕಸಾಪ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ ನೇತೃತ್ವದಲ್ಲಿ ಮಂಡಲಗಿರಿ ಪ್ರಸನ್ನ ದಂಪತಿಗೆ ಸನ್ಮಾನಿಸಲಾಯಿತು.
ಕಸಾಪ ಶಹಾಬಾದ್ ಘಟದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ ಮಾತನಾಡಿ, ಪ್ರಸನ್ನ ಬಹುಮುಖ ಪ್ರತಿಭೆ. ಅವರ ಆಯ್ಕೆ ಸೂಕ್ತವಾಗಿದೆ ಎಂದರು. ಕಸಾಪ ಚಿತ್ತಾಪುರ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ ಮಾತನಾಡಿ, ರಾವೂರ ವಲಯ ಸಮ್ಮೇಳನ ತಾಲೂಕು ಹಾಗೂ ಜಿಲ್ಲಾ ಸಮ್ಮೇಳನದಷ್ಟೇ ಮಾನ್ಯತೆ ಪಡೆದಿದ್ದು, ಇದೊಂದು ಐತಿಹಾಸಿಕ ಸಂದರ್ಭ ಎಂದರು.
ರಾವೂರ ವಲಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಅಧ್ಯಕ್ಷ ಚೆನ್ನಣ್ಣ ಬಾಳಿ, ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಸಂಘ-ಸಂಸ್ಥೆಗಳ ಪ್ರತಿನಿಧಿ ಶರಣು ಜ್ಯೋತಿ ರಾವೂರ, ಕೋಶಾಧ್ಯಕ್ಷ ಸೂಗಯ್ಯ ಸ್ವಾಮಿ, ಡಾ. ಶಂಕರ ಸೋಮಯಾಜಿ, ಈರಣ್ಣ ಕಾರ್ಗಿಲ್ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ಇತರೆ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.