ಗುಲ್ಬರ್ಗಾ

ಇಎಸ್‌ಐಸಿ ಪ್ರವೇಶಕ್ಕೆ ಕೊಕ್ಕೆ

Published On :

ಗುಲ್ಬರ್ಗ: ಇಲ್ಲಿನ ಇಎಸ್‌ಐಸಿ ಮೆಡಿಕಲ್ ಕಾಲೇಜು 2014-15ನೇ ಸಾಲಿನ ಎಂಬಿಬಿಎಸ್ ಪ್ರವೇಶಕ್ಕೆ ಭಾರತೀಯ ವೈದ್ಯಕೀಯ ಪರಿಷತ್ತು(ಎಂಸಿಐ) ಕೊಕ್ಕೆ ಹಾಕಿದೆ.
ನಿಯಮದಂತೆ ಬೋಧಕ ಸಿಬ್ಬಂದಿ ನೇಮಕವಾಗಿಲ್ಲ ಎಂಬ ಕಾರಣ ಮುಂದೊಡ್ಡಿ ಎಂಸಿಐ 2014-15ನೇ ಸಾಲಿನ ಹೊಸ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಇದರಿಂದಾಗಿ ರಾಜ್ಯದ ಗಮನ ಸೆಳೆದಿದ್ದ, ಈ ಭಾಗದ ಮಹತ್ವಾಕಾಂಕ್ಷಿ ಇಎಸ್‌ಐಸಿ ಮೆಡಿಕಲ್ ಕಾಲೇಜಿಗೆ ಪ್ರಸಕ್ತ ಶಿಕ್ಷಣ ವರ್ಷಕ್ಕೆ ಹೊಸತಾಗಿ ವೈದ್ಯ ವಿದ್ಯಾರ್ಥಿಗಳ ಪ್ರವೇಶದ ಸುತ್ತ ಅನುಮಾನಗಳು ಮೂಡಿವೆ.
ಸ್ಥಳೀಯವಾಗಿರುವ ಜಿಲ್ಲಾಸ್ಪತ್ರೆಯನ್ನೇ ಕ್ಲಿನಿಕಲ್ ಸೌಕರ್ಯಕ್ಕೆಂದು ಬಳಸಿಕೊಂಡು 2013-14ರಲ್ಲೇ ಇಎಸ್‌ಐಸಿ ಇಲ್ಲಿ ಕಾರ್ಯಾರಂಭಿಸಿತ್ತು. ಮೊದಲ ವರ್ಷ 100 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಸಹ ಪಡೆದಿದ್ದಾರೆ. ಆದರೀಗ 2ನೇ ವರ್ಷದಲ್ಲಿ ಯಶಸ್ವಿಯಾಗಿ ಕಾಲಿಡಬೇಕಿದ್ದ ಇಎಸ್‌ಐಸಿ ಬೋಧಕರ ಕೊರತೆ ಕಾರಣದಿಂದಾಗಿ ಪ್ರವೇಶಾವಕಾಶದಿಂದ ವಂಚಿತವಾಗುವಂತಾಗಿದೆ.
ಈಗಾಗಲೇ ಕಾಲೇಜಿಗೆ ಅಗತ್ಯವಿರುವ ಎಲ್ಲ ಹುದ್ದೆಗಳ ನೇಮಕಾತಿ ಆಗಿದೆ. ಇನ್ನು ಕೆಲವು ವಿಶೇಷ ತಜ್ಞರ ಹುದ್ದೆಗಳ ನೇಮಕವಾಗಬೇಕಷ್ಟೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು 2013ರಲ್ಲಿ ಈ ಕಾಲೇಜಿಗೆ ಭೇಟಿ ನೀಡಿದ್ದ ಯುಪಿಎ ಸರ್ಕಾರದ ಕಾರ್ಮಿಕ ಖಾತೆ ರಾಜ್ಯ ಸಚಿವ ಕೆ. ಸುರೇಶ ಹೇಳಿದ್ದರು. ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕನಸಿನ ಕೂಸಾದ ಈ ಆಸ್ಪತ್ರೆ ಕರ್ನಾಟಕ ಸೇರಿದಂತೆ ಪಕ್ಕದ ಮಹಾರಾಷ್ಟ್ರ, ಆಂಧ್ರದ ಇಎಸ್‌ಐಸಿ ಸದಸ್ಯರಿಗೂ ಅನುಕೂಲವಾಗಿತ್ತು.
ಆದರೀಗ ಸಮಯಕ್ಕೆ ಸರಿಯಾಗಿ ಬೋಧಕರ ಹಾಗೂ ತಜ್ಞರ ಹುದ್ದೆಗಳ ನೇಮಕಾತಿಯಾಗದ ಕಾರಣವನ್ನೇ ಮುಂದೊಡ್ಡಿ ಎಂಸಿಐ ಸರ್ಕಾರದ ಈ ಸಂಸ್ಥೆಯ ಪ್ರವೇಶದ ಮೇಲೆ ನಿರ್ಬಂಧ ಹೇರುವ ಮೂಲಕ 100 ವೈದ್ಯಕೀಯ ಸೀಟುಗಳ ಸುತ್ತ ತೂಗುಗತ್ತಿ ನೇತಾಡುವಂತೆ ಮಾಡಿದೆ.
ಕನ್ನಡಿಗರಿಗೆ ಸಿಹಿಫಲವಾಗಿತ್ತು
ಬೆಂಗಳೂರಿನ ರಾಜಾಜಿನಗರದ ಇಎಸ್‌ಐಸಿ ಆಸ್ಪತ್ರೆಗಿಂತಲೂ ಗುಲ್ಬರ್ಗದ ವೈದ್ಯಕೀಯ ಸಂಕೀರ್ಣ ದೊಡ್ಡದಾಗಿದೆ. ಇಲ್ಲಿ ಈಗಾಗಲೇ 100 ವೈದ್ಯಕೀಯ ಸೀಟುಗಳಿಗೆ ಎಂಸಿಐ ಅನುಮೋದನೆ ನೀಡಿದ್ದರಿಂದ ಕನ್ನಡಿಗರೇ ಇದರ ಸಿಹಿಫಲ ಪಡೆದಿದ್ದರು. 100 ಸೀಟುಗಳ ಈ ವೈದ್ಯಕೀಯ ಕಾಲೇಜಿನಲ್ಲಿ 40 ಸೀಟುಗಳು ರಾಜ್ಯ ಸರ್ಕಾರದ ಕೋಟಾಗೆ, 15 ಸೀಟುಗಳು ಕೇಂದ್ರ ಸರ್ಕಾರದ ಕೋಟಾ ಹಾಗೂ ಉಳಿದ 45 ಸೀಟುಗಳು ರಾಜ್ಯ ವಿಮಾ ಕಾರ್ಮಿಕರ ಮಕ್ಕಳಿಗೆ ಮೀಸಲಿರಿಸಲಾಗಿದೆ. ಕೇಂದ್ರದ ಹಾಗೂ ರಾಜ್ಯ ವಿಮಾ ಕಾರ್ಮಿಕ ಮಕ್ಕಳಿಗಾಗಿರುವ ಸೀಟುಗಳು ಭರ್ತಿಯಾಗದೆ ಉಳಿದಲ್ಲಿ ಅವುಗಳನ್ನು ರಾಜ್ಯದ ಕೋಟಾಗೆ ಹಂಚಿಕೆ ಮಾಡಲಾಗುವುದು. ವೈದಕೀಯ ಕೋರ್ಸ್‌ಗೆ ಪ್ರತಿ ವರ್ಷ 24 ಸಾವಿರ ಶುಲ್ಕವನ್ನು ನಿಗದಿ ಮಾಡಲಾಗಿದೆ.  ಮೊದಲ ವರ್ಷದ ಸೀಟು ಹಂಚಿಕೆಯಲ್ಲಿ ಕೇವಲ 10 ಸೀಟುಗಳು ಮಾತ್ರ ಹೊರಗಿನವರಿಗೆ ದಕ್ಕಿವೆ. ಉಳಿದಂತೆ 90 ಸ್ಥಾನ ಕರ್ನಾಟಕ ಸಿಇಟಿ ಬರೆದ ವಿದ್ಯಾರ್ಥಿಗಳ ಪಾಲಾಗಿದ್ದವು. ಈ ಬಾರಿಯೂ ಕನ್ನಡಿಗರು ಈ ಆಸ್ಪತ್ರೆಯಲ್ಲಿನ ಪ್ರವೇಶಕ್ಕೆ ತುಂಬ ಉತ್ಸುಕರಾಗಿದ್ದರು, ಈ ಹಂತದಲ್ಲೇ ಪ್ರವೇಶದ ಗೊಂದಲ ಶುರುವಾಗಿರುವುದರಿಂದ ಇಎಸ್‌ಐಸಿ ಪ್ರವೇಶದ ಸುತ್ತ ಉದ್ಭವವಾಗಿರುವ ಈ ಗೊಂದಲದ ವಿಚಾರ ಇದೀಗ ಸುದ್ದಿಗೆ ಗ್ರಾಸವಾದಂತಾಗಿದೆ.
ಬೋಧಕರ ಕೊರತೆ
ಆಸ್ಪತ್ರೆ ಮೂಲಗಳ ಪ್ರಕಾರ, 30 ಬೋಧಕರ ಹುದ್ದೆಗಳಿಗೆ ಸಂದರ್ಶನ ನಡೆಸಲಾಗಿತ್ತು. ಆದರೆ ಈ ಪೈಕಿ ಕೇವಲ 10 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 20 ಹುದ್ದೆ ಖಾಲಿ ಉಳಿದಿವೆ. ಹೀಗಾಗಿ ಎಂಸಿಐ ಪರಿಶೀಲನೆ ಕಾಲದಲ್ಲಿ ಬೋಧಕರ ಹುದ್ದೆಗಳು ನಿಯಮದಂತೆ ಭರ್ತಿಯಾಗದ ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷದ ಎಬಿಬಿಎಸ್ ಪ್ರವೇಶದ ಮೇಲೆ ನಿರ್ಬಂಧ ಹೇರಲ್ಪಟ್ಟಿದೆ. ರಾಜ್ಯದ ಸಿಇಟಿ ಮಾರ್ಗಸೂಚಿಯಲ್ಲಿ ಗುಲ್ಬರ್ಗದ ಇಎಸ್‌ಐಸಿ ಆಸ್ಪತ್ರೆ ಹೆಸರಿತ್ತು. ಆಯ್ಕೆ ಭರ್ತಿ ಮಾಡುವಾಗ ಈ ಆಸ್ಪತ್ರೆ ಹೆಸರಲ್ಲಿ ಯಾವುದೇ ಮಾಹಿತಿ ಬಾರದಂತಾಗಿರುವುದರಿಂದ ಇಲ್ಲೇ ಪ್ರವೇಶ ಪಡೆಯಬೇಕು ಎಂಬ ಅನೇಕ ವಿದ್ಯಾರ್ಥಿಗಳು ದಿಢೀರನೇ ಉಂಟಾಗಿರುವ ಈ ಬೆಳವಣಿಗೆಯಿಂದಾಗಿ ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.