ಕಾಲುವೆ ದುರಸ್ತಿಗೆ ನಿರಾಸಕ್ತಿ
ಕ.ಪ್ರ. ವಾರ್ತೆ ಹುಣಸಗಿ ಜೂ. 24
ಹುಣಸಗಿ ಕೆಬಿಜೆಎನ್ನೆಲ್ ವಿಭಾಗೀಯ ಕಚೇರಿ ವ್ಯಾಪ್ತಿಯ ವಿತರಣಾ ಕಾಲುವೆಗಳನ್ನು ಈ ಬಾರಿ ವಾರ್ಷಿಕ ದುರಸ್ತಿಗೆ ತೆಗೆದುಕೊಳ್ಳದೆ ಇರುವುದು ರೈತರಲ್ಲಿ ತೀವ್ರ ನಿರಾಸೆ ತಂದಿದೆ.
ಕಾಲುವೆ ವ್ಯಾಪ್ತಿಯ ಗ್ರಾಮಗಳಾದ ಹುಣಸಗಿ, ಚನ್ನೂರು, ಕಲ್ಲದೇವನಹಳ್ಳಿ, ಬೈಲಾಪುರ, ಹೆಬ್ಬಾಳ, ದೇವತ್ಕಲ್, ಗ್ರಾಮಗಳ 6,250 ಎಕರೆಯ ರೈತರು ಈ ಬಾರಿ ಮುಂಗಾರು- ಹಿಂಗಾರಿಗೆ ಸರಿಯಾಗಿ ನೀರು ಬರದೆ ತೀವ್ರ ತೊಂದರೆ ಅನುಭವಿಸುವ ಆತಂಕವನ್ನು ಹುಣಸಗಿ ನೀಲಕಂಠೇಶ್ವರ ನೀರು ಬಳಕೆದಾರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ರೇವಣಸಿದ್ದಣ್ಣ ರೇವಡಿ ವ್ಯಕ್ತಪಡಿಸಿದ್ದಾರೆ.
ನಾರಾಯಣಪುರ ವಲಯದ ಮುಖ್ಯ ಅಭಿಯಂತರ ಅವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಪ್ರತಿ ವರ್ಷ ಟೆಂಡರ್ ನಡೆದು, ಬಹಿರಂಗ ಹರಾಜು ಮೂಲಕ ಅಥವಾ ರಿಂಗ್ ಮೂಲಕವೋ ಕಾಮಗಾರಿ ಪಡೆದು ಬೀಗುವ ಗುತ್ತಿಗೆದಾರ ಕಂ- ರಾಜಕಾರಣಿಗಳು ಸುಮ್ಮನಿರುವುದು ಅನೇಕ ರೈತರ ಕೋಪಕ್ಕೆ ಕಾರಣವಾಗಿದೆ ಎಂದರು.
ನೀರು ಪೂರೈಕೆಗೆ ತೊಂದರೆ: 2014ರ ಬೇಸಿಗೆ ಹಂಗಾಮಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ ಮೋಹನ್ ಅವರ ತಪ್ಪು ಹೆಜ್ಜೆಯಿಂದ ಚಿಗರಳ್ಳಿ, ಖಾನಪುರ, ಹುಣಸಗಿ ನಿಗಮದ ವಿಭಾಗಗಳಿಗೆ ಕ್ಲೋಸರ್ ಅವಧಿಯ ಕಾಲುವೆ ದುರಸ್ತಿಯ ಅನುದಾನ ನೀಡಿಲ್ಲ. ಇದರಿಂದ 7,500 ಎಕರೆ ಪ್ರದೇಶಕ್ಕೆ ಸರಳ ನೀರಿನ ಪೂರೈಕೆಗೆ ತೊಂದರೆ ಉಂಟಾಗಿದೆ.
ನವೀಕರಣಕ್ಕಗಿಯೇ ಆಗಮಿಸಿದ ಅಧಿಕಾರಿಗಳು ನಮ್ಮ ಅಚ್ಚಕಟ್ಟು ಪ್ರದೇಶದ ನಾರಾಯಣಪುರ ವಲಯದ ಮುಖ್ಯ ಎಂಜನಿಯರ್ ಕ್ಷೇತ್ರಪಾಲ ಹೆಚ್ಚುವರಿಯಾಗಿ, ಅಧೀಕ್ಷಕ ಅಭಿಯಂತರ ಎಸ್.ಕೃಷ್ಣಮೂರ್ತಿ ಅವರು ಕೂಡ ಕಾಲುವೆ ನವೀಕರಣ ನಿಮಿತ್ತ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದು ಇವರಿಗೆ ರೈತರ ಹಿತಾಸಕ್ತಿಯಿಲ್ಲ ಎಂದು ರೈತರು ಮಾತಾಡಿಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಅಚ್ಚುಕಟ್ಟು ಅಭಿವೃದ್ಧಿ ಕನಸಿನ ಮಾತು: ಇಂಥವರು ಕಾಲುವೆ ನವೀಕರಣದ ನಂತರ ಮತ್ತೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಇವರಿಂದ ಸಮರ್ಪಕ ನೀರು ವಿತರಣೆ ಕಷ್ಟಸಾಧ್ಯ. ಕೃಷ್ಣಾ ಅಚ್ಚುಕಟ್ಟು ಅಭಿವೃದ್ಧಿ ಕನಸಿನ ಮಾತು ಎಂದು ಕಿಡಿ ಕಾರಿದ ಅವರು, ಅಧಿಕಾರಿಗಳಲ್ಲಿ ನಿಜವಾದ ಕಾಳಜಿ ಇದ್ದದ್ದೇ ಆದಲ್ಲಿ ಕ್ಲೋಜರ್ ಅವಧಿಯ ಅನುದಾನ ತೆಗೆದುಕೊಂಡು ಬರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದರು ಎಂದು ಹೇಳಿದರು.
ಈ ವಿಚಾರದಲ್ಲಿ ಕಳೆದ ತಿಂಗಳು ಕಾಲುವೆ ನವೀಕರಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಎಂ.ಬಿ. ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ನಿಯೋಗದಲ್ಲಿ ನೀರು ಬಳಕೆದಾರ ಸಹಕಾರ ಸಂಘಗಳ ಅಧ್ಯಕ್ಷರಾದ ನಿಂಗನಗೌಡ ಗುಳಬಾಳ, ಅನಂತ ದೇಶಪಾಂಡೆ, ಅಣ್ಣಾಜಿಗೌಡ ಮುದನೂರು, ಶಿವರೆಡ್ಡಿ, ಉಪಾಧ್ಯಕ್ಷ ಗುರಪ್ಪ ದೇಸಾಯಿ, ಶಿವಪುತ್ರಗೌಡ ಚನ್ನೂರು, ವೆಂಕಟೇಶ ದೇವತ್ಕಲ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

