ಗುಲ್ಬರ್ಗಾ

4 ದಶಕ ಕಳೆದ್ರೂ ಭೀಮಾ ಏತ ನೀರಾವರಿ ಅಪೂರ್ಣ

Published On :

ಅಫಜಲ್ಪುರ: ಸುದೀರ್ಘ 45 ವರ್ಷಗಳೇ ಕಳೆದರೂ ಭೀಮಾ ಏತನೀರಾವರಿ ಯೋಜನೆ ಪೂರ್ಣಗೊಳಿಸದೇ ಇರುವುದಕ್ಕೆ ಮಾಜಿ ಶಾಸಕ ಎಂ.ವೈ. ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1989ರಲ್ಲಿ ರಾಜ್ಯದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಕೇಂದ್ರ ಸರ್ಕಾರಕ್ಕೆ ಭೀಮಾ ಏತನೀರಾವರಿ ಯೋಜನೆಗೆ ಅನುಮೋದನೆಗೆ ಕಳುಹಿಸಿ ಅನುಮತಿಯನ್ನು ಪಡೆದು 17.58 ಲಕ್ಷ ಕೋಟಿ ಗಳಲ್ಲಿ ಯೋಜನೆ ಪೂರ್ಣಗೊಳಿಸಲು ನೀಲನಕ್ಷೆ ತಯಾರಿಸಿದ್ದರು. ಆಮೆಗತಿಯಲ್ಲಿ ಸಾಗಿದ ಯೋಜನೆಗೆ 1992ರಲ್ಲಿ ಅಂದಿನ ಮುಖ್ಯಮಂತ್ರಿ ದಿ. ಬಂಗಾರಪ್ಪನವರು ಶಂಕುಸ್ಥಾಪನೆ ನೆರವೇರಿಸಿ ಯೋಜನಾ ವೆಚ್ಚವನ್ನು 94 ಕೋಟಿಗೆ ಹೆಚ್ಚಿಸಿದ್ದರು.
ಮುಂದೆ ನೀರಾವರಿ ನಿಗಮ ಸ್ಥಾಪನೆಯಾಗಿ 153 ಕೋಟಿ ಯೋಜನಾ ವೆಚ್ಚವನ್ನು ಹೆಚ್ಚಿಸಲಾಯಿತು. ಈವರೆಗೆ 600 ಕೋಟಿ ವೆಚ್ಚ ಮಾಡಿದರೂ ಏತ ನೀರಾವರಿ ಯೋಜನೆ ಪೂರ್ಣಗೊಳ್ಳದಿರುವುದು ಶೋಚನೀಯ ಎಂದರು.
ತಾಲೂಕಿನ 44 ಗ್ರಾಮಗಳ 24,292 ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡ ಕಟ್ಟಡಗಳ ಮೌಲ್ಯದಲ್ಲಿ ಶೇ.25 ಹಣವನ್ನು ಸವಕಳಿ ರೂಪದಲ್ಲಿ ಸರ್ಕಾರ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆ ವೆಚ್ಚ ಹೆಚ್ಚಳದ ಸಾಧನೆ: ಈ ಯೋಜನೆ ಅಡಿಯಲ್ಲಿ ಮುಳುಗಡೆಯಾಗಿರುವ ಹಳ್ಳಿಗಳ ಪುನರ್ವಸತಿ ಕಾರ್ಯ ಸಹ ಪೂರ್ಣಗೊಂಡಿಲ್ಲ. 45 ವರ್ಷ ಗತಿಸಿದರೂ ನಮ್ಮ ರೈತರ ಸಂಪೂರ್ಣ ಭೂಮಿಗೆ ನೀರೊದಗಿಸಲು ಸಾಧ್ಯವಾಗಿಲ್ಲ. ವಿಳಂಬದಿಂದಾಗಿ ಯೋಜನಾ ವೆಚ್ಚ ಹೆಚ್ಚುತ್ತ ಹೋಗಿರುವುದೇ ಈ ಯೋಜನೆಯ ಸಾಧನೆಯಾಗಿದೆ. ಇನ್ನಾದರೂ ಸರ್ಕಾರ ವಿಳಂಬ ಮಾಡದೆ ಯೋಜನೆಯ ದಿಟ್ಟ ನಿಲುವು ತಳೆದು ತಾಲೂಕಿನ ರೈತರಿಗೆ ಅನಕೂಲ ಮಾಡಿಕೊಡಬೇಕು.
ಪರಿಹಾರ ಕಡಿತ- ಅನ್ಯಾಯ: ಸರ್ಕಾರವೇ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಜುಲೈ ಮೊದಲ ವಾರದಲ್ಲಿ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪಾಟೀಲ್ ಎಚ್ಚರಿಸಿದರು. ಸುದ್ದಿಗೊಷ್ಠಿಯಲ್ಲಿ ಜಿಪಂ ಸದಸ್ಯ ಪ್ರಕಾಶ ಜಮಾದಾರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.