ಗುಲ್ಬರ್ಗಾ

ನಮೋಶಿ ಕುಟುಂಬದ ಆಸ್ತಿ ಕಲಹ ಬೀದಿಗೆ

Published On :

ಕ.ಪ್ರ. ವಾರ್ತೆ    ಗುಲ್ಬರ್ಗ    ಮಾ.2
ಇಲ್ಲಿನ ಪ್ರತಿಷ್ಠಿತ ನಮೋಶಿ ಕುಟುಂಬದ ಆಸ್ತಿ ಕಲಹ ಬೀದಿಗೆ ಬಂದಿದೆ. ಮಾಜಿ ಎಂಎಲ್ಸಿ, ಹೈಕಶಿ ಸಂಸ್ಥೆ ಅಧ್ಯಕ್ಷ ಶಶಿಲ್ ನಮೋಶಿ ಅವರು ಅವಿಭಕ್ತ ಕುಟುಂಬದ ಹೆಸರಲ್ಲಿದ್ದ ಆಸ್ತಿ- ಪಾಸ್ತಿಯಲ್ಲಿಯೂ ನ್ಯಾಯಸಮ್ಮತವಾಗಿ ಪಾಲು ಕೊಡುತ್ತಿಲ್ಲ ಎಂದು ಅವರ ಸಹೋದರ ಡಾ. ಅನೀಲ ನಮೋಶಿ ದೂರಿದ್ದಾರೆ.
ನಗರ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಹೊಲಗದ್ದೆ, ನಿವೇಶನ, ಜವಳಿ ಅಂಗಡಿ ಸೇರಿದಂತೆ ಹಲವು ರೂಪಗಳಲ್ಲಿ 30- 35 ಕೋಟಿಯಷ್ಟು ಆಸ್ತಿ ಕುಟುಂಬದ ಒಡೆತನದಲ್ಲಿದೆ. ಇದರಲ್ಲಿ ತಮಗೂ ಪಾಲು ಸಲ್ಲಬೇಕಿತ್ತು. ಈ ವಿಚಾರವಾಗಿ ಯಾವುದೇ ಚರ್ಚೆಗೂ ಶಶಿಲ್ ನಮೋಶಿ ಸಿದ್ಧರಿಲ್ಲ, ಪಾಲು ಕೊಡುವ ವಿಚಾರದಲ್ಲಿ ಸಹೋದರನೇ ಮೋಸ ಮಾಡುತ್ತಿದ್ದಾನೆಂದು ಡಾ. ಅನೀಲ್ ನಗರದಲ್ಲಿ ಭಾನುವಾರ ಪತ್ನಿ ಅನ್ನಪೂರ್ಣ, ಪುತ್ರ ನಿಖಿಲ್ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪಾಲು ಕೊಡುತ್ತಿಲ್ಲ: 2001ರಿಂದ ಹಿಂದೆ ಅವಿಭಕ್ತ ಕುಟುಂಬದ ಹೆಸರಲ್ಲಿ ತಮಗೆ ಬಹುಕೋಟಿ ರುಪಾಯಿ ಆಸ್ತಿ ಬರಬೇಕು. ಇದು ತಮ್ಮ ನ್ಯಾಯಸಮ್ಮತ ಪಾಲಾಗಿದ್ದರೂ ಶಶಿಲ್ ನಮೋಶಿ ಇದನ್ನೂ ತಮಗೆ ದೊರಕದ ಹಾಗೆ ಮಾಡುತ್ತಿದ್ದಾರೆ ಎಂದು ಡಾ. ಅನೀಲ ಆರೋಪಿಸಿದರು.
ಸೂಪರ್ ಮಾರ್ಕೆಟ್‌ನ ವೋಲ್ಗಾ ಡ್ರೆಸೆಸ್ ಅಂಗಡಿ, ಅಸೀಫ್ ಗಂಜ್‌ನ ಮನೆ, ಎಸ್ಬಿ ಕಾಲೇಜು ರಸ್ತೆಯಲ್ಲಿರುವ ನಿವೇಶನ, ಮನೆ, ಖೂಬಾ ಪ್ಲಾಟ್‌ನಲ್ಲಿರುವ ನಿವೇಶನ, ಕುಸನೂರ ಹಳ್ಳಿಯಲ್ಲಿರುವ 10 ಎಕರೆ ಭೂಮಿ, ಶಹಬಜಾರ್‌ನಲ್ಲಿರುವ ಗೋದಾಮು ಹಾಗೂ ನಿವೇಶನ, ಡಾಕ್ಟರ್ಸ್ ಕಾಲೋನಿಯಲ್ಲಿರುವ ನಿವೇಶನ, ಕೋಟನೂರ ಹತ್ತಿರದ 2 ಎಕರೆ ಭೂಮಿ, ಎಂಎಸ್ಕೆ ಮಿಲ್ ರಸ್ತೆಯಲ್ಲಿರುವ ಮಳಿಗೆಗಳು, ಕಪನೂರ ಬಳಿಯ ಭೂಮಿ ಹೀಗೆ ಹಲವು ಆಸ್ತಿಗಳು 30ರಿಂದ 35 ಕೋಟಿ ಬೆಲೆ ಬಾಳುವಂಖದ್ದು. ಇವುಗಳಲ್ಲೆಲ್ಲಾ ಪಾಲು ದೊರಕಬೇಕಿತ್ತು. ಈ ವಿಚಾರದಲ್ಲಿ ಸಹೋದರ ತಮ್ಮೊಂದಿಗೆ ಮೋಸದಾಟ ಆಡುತ್ತಿದ್ದಾನೆಂದು ದೂರಿದರು.
ಚರ್ಚೆಗೆ ಬರುತ್ತಿಲ್ಲ: ಈ ಪ್ರಕರಣ ಈಗಾಗಲೇ ಕೋರ್ಟ್ ಮೆಟ್ಟಿಲು ಹತ್ತಿದೆ. ಆರ್ಬಿಟ್ರೇಟರ್‌ಗಳ ನೇಮಕವೂ ಆಗಿತ್ತು, ಇಷ್ಟೆಲ್ಲ ಆದರೂ ಆಸ್ತಿ- ಪಾಸ್ತಿ ವಿಚಾರದಲ್ಲಿ ತಮ್ಮೊಂದಿಗೆ ಶಶಿಲ್ ಮಾತುಕತೆಗೆ ಸಿದ್ಧನಾಗದೆ ಮುಖ ಮರೆಮಾಚುತ್ತಿದ್ದಾನೆ. ತಾಯಿ ಸಮ್ಮುಖದಲ್ಲೇ ಚರ್ಚಿಸೋಣ ಎಂದರೂ ಸಿದ್ಧರಾಗಿಲ್ಲ. ಹೀಗಾಗಿ ನಮಗೆ ನ್ಯಾಯಸಮ್ಮತವಾಗಿ ದಕ್ಕಬೇಕಿದ್ದ ಆಸ್ತಿಯಲ್ಲಿನ ಪಾಲು ದಕ್ಕದಂತಾಗಿದೆ. ಇನ್ನೂ 15 ದಿನದಲ್ಲಿ ಈ ವಿಚಾರ ಇತ್ಯರ್ಥವಾಗದೆ ಹೋದಲ್ಲಿ ತಾವು ಕುಟಂಬ ಸಮೇತ ನಮೋಶಿ ಮನೆ ಮುಂದೆ ಧರಣಿ ಕೂಡುವುದಾಗಿ ಡಾ. ಅನೀಲ್ ನಮೋಶಿ ಹಾಗೂ ಪತ್ನಿ ಅನ್ನಪೂರ್ಣ ಹೇಳಿದ್ದಾರೆ.
ಅವಿಭಕ್ತ ಕುಟುಂಬದಲ್ಲಿದ್ದ ಆಸ್ತಿ ಪಾಲು ಕೊಡಲಿ: ಸಹೋದರ ರಾಜಕೀಯದಲ್ಲಿ ಧುಮುಕಿದ. ಹೈಕಶಿ ಸಂಸ್ಥೆ ಅಧ್ಯಕ್ಷನಾಗಿದ್ದಾನೆ. ಆದರೆ ಈ ಹಂತದಲ್ಲಿ ಅವರು ಗಳಿಸಿರುವ ಯಾವ ಆಸ್ತಿ- ಪಾಸ್ತಿಯೂ ತಮಗೆ ಬೇಕಿಲ್ಲ. ಅದೇನಿದ್ದರೂ ಅವಿಭಕ್ತ ಕುಟುಂಬದ ಆಸ್ತಿಪಾಸ್ತಿಯಲ್ಲಿ ಮಾತ್ರ ತಾವು ಪಾಲು ಕೇಳುತ್ತಿರುವುದಾಗಿ ಡಾ. ಅನೀಲ ಸ್ಪಷ್ಟಪಡಿಸಿದರು.
ಡಾ. ಅನೀಲ್ ಇದೀಗ ಹೈಕಶಿ ಸಂಸ್ಥೆಯ ರಾಂಪೂರೆ ವೈದ್ಯ ವಿದ್ಯಾಲಯದಲ್ಲಿ ಮೆಡಿಸಿನ್ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದು ಇನ್ನಾರು ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ನಿವೃತ್ತಿ ನಂತರ ಹಾಗೂ ಮಗನಿಗೆ ವಹಿವಾಟು ಸ್ಥಾಪಿಸಲು ತಮಗೂ ಹಣದ ಅಗತ್ಯವಿದೆ. ಯಾವುದೇ ಗೊಂದಲ ಮಾಡದಂತೆ ಸುಮ್ಮನಿದ್ದೆ, ಸಹನೆ ಮೀರಿದೆ. ಬಹಿರಂಗವಾಗಿಯೇ ಆರೋಪ ಮಾಡುತ್ತಿರುವುದಾಗಿ ಡಾ. ಅನೀಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.