ಉದ್ಯಾನವನಗಳ ಜೀರ್ಣೋದ್ಧಾರಕ್ಕೆ ಆಗ್ರಹ
ಶಹಾಪುರ: ಪಟ್ಟಣದಲ್ಲಿರುವ ಸಾರ್ವಜನಿಕ ಉದ್ಯಾನವನಗಳನ್ನು ಸಂಬಂಧಪಟ್ಟ ಅಧಿಕಾರಿಗಳೇ ಹುಡುಕಿ ತೋರಿಸುವಂಥ ಸ್ಥಿತಿ ಇದೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಟೀಕೆ ಮಾಡಿದೆ.
ತಿಪ್ಪೆಗುಂಡಿಗಳಾಗಿ, ಜಾಲಿ ಗಿಡಗಳ ನೆಲವಾಗಿ, ಅಕ್ರಮ ಒತ್ತುವರಿಗೆ ತುತ್ತಾಗಿರುವ ಪಟ್ಟಣದ ಉದ್ಯಾನವನಗಳನ್ನು ಶೀಘ್ರವೇ ಜೀರ್ಣೋದ್ಧಾರಗೊಳಿಸಬೇಕೆಂದು ಆಗ್ರಹಿಸಿ, ತಾಲೂಕು ಕರವೇ (ಎಚ್. ಶಿವರಾಮೇಗೌಡ ಬಣದ) ಅಧ್ಯಕ್ಷ ವೆಂಕಟೇಶ ಬೋನೇರ ನೇತೃತ್ವದಲ್ಲಿ ಪದಾಧಿಕಾರಿಗಳು ಮಾತನಾಡಿ, ಪುರಸಭೆಯ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.
ನಂತರ, ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ಶೀಘ್ರವೇ ಪಟ್ಟಣದ ಉದ್ಯಾನವನಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿದರು.
ಆರೋಪ: ಲಕ್ಷಗಟ್ಟಲೆ ಹಣವನ್ನು ಉದ್ಯಾನವನಗಳ ನಿರ್ವಹಣೆಗಾಗಿ ಖರ್ಚು ಮಾಡಲಾಗುತ್ತಿರುವುದಾಗಿ ಲೆಕ್ಕ ತೋರಿಸಲಾಗುತ್ತಿದ್ದರೂ, ಪಟ್ಟಣದ ಉದ್ಯಾನವನಗಳ ಪರಿಸ್ಥಿತಿ ಹೇಳತೀರದ್ದಾಗಿದೆ ಎಂದು ಕರವೇ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಕಾರ್ಯವೈಖರಿಗೆ ಹಿಡಿದ ಕನ್ನಡಿ: ಸಾರ್ವಜನಿಕರ ಟೀಕೆಗಳಿಂದ ತಪ್ಪಿಸಿಕೊಳ್ಳಲು, ಉದ್ಯಾನ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಆದರೂ, ಉದ್ಯಾನವನಗಳ ಅಭಿವೃದ್ಧಿಗಾಗಿ ಯಾವುದೇ ಕಾಮಗಾರಿ ನಡೆದ ಬಗ್ಗೆ ಕುರುಹುಗಳಿಲ್ಲ. ಬೆರಳೆಣಿಕೆಯಷ್ಟು ಉದ್ಯಾನಗಳ ಗುರುತು ಸಿಗುತ್ತಿದ್ದು, ಈ ಉದ್ಯಾನಗಳಲ್ಲಿ ಜಾಲಿ ಗಿಡಗಳಿಂದ, ತಿಪ್ಪೆಗುಂಡಿಗಳಿಂದ ತುಂಬಿ, ಕಸವಿಲೇವಾರಿಯ ಜಾಗಗಳಾಗಿವೆ.
ಅಲ್ಲದೇ, ಕೆಲವೆಡೆ ಉದ್ಯಾನಕ್ಕಾಗಿ ಮೀಸಲಾಗಿರುವ ಜಾಗಗಳು ಒತ್ತುವರಿಗೆ ಒಳಗಾಗಿವೆ. ಇದೆಲ್ಲಾ ರಾಚುವಂತಿದ್ದರೂ, ಪುರಸಭೆ ಅಧಿಕಾರಿಗಳು ಮಾತ್ರ ತೆಪ್ಪಗಿದ್ದಾರೆ.
ಇದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಕರವೇ ಕಾರ್ಯಕರ್ತರು ದೂರಿದರು.
ಪ್ರತಿಭಟನೆಯ ಎಚ್ಚರಿಕೆ: ಪಟ್ಟಣದಲ್ಲಿನ ಉದ್ಯಾನವನಗಳನ್ನು ಶೀಘ್ರವೇ ಅಭಿವೃದ್ಧಿಗೊಳಿಸದಿದ್ದರೆ, ಉಗ್ರ ಪ್ರತಿಭಟನೆ ಮಾಡುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ, ಕರವೇ ಜಿಲ್ಲಾ ಕಾರ್ಯದರ್ಶಿ ಶರಣು ಬೀರನೂರು, ರೇವಣಸಿದ್ದಯ್ಯಡೆಂಗಿಮಠ, ಶ್ರೀದೇವಿ ಜಂಬಲದಿನ್ನಿ, ಭೀಮರಾಯ ಕಾಂಗ್ರೆಸ್, ಸೋಮನಾಥಹುಗ್ಗಿ, ನಿಂಗರಾಜಗುಡುಗುಂಟಿ, ಮಲ್ಲಪ್ಪ ತಡಿಬಿಡಿ, ನಾಗರಾಜ ಹೆಡಗಿಮದ್ರಿ, ನಾಗರಾಜಸೂಗೂರು, ರಾಜುದೇಸಾಯಿ, ಸಂಗಣ್ಣಗೌಡ, ನಿಂಗಣ್ಣ ಅಣಬಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

