ಗುಲ್ಬರ್ಗಾ

ಭಕ್ತಿ ಭಾವಗಳ ಸಿಂಚನ, ವೈಭವ ಸಡಗರದ ಸಂಗಮ

Published On :

ಯಾದಗಿರಿ: ತಾಲೂಕಿನ ಅಬ್ಬೆತುಮಕೂರ ವಿಶ್ವಾರಾಧ್ಯರ ರಥೋತ್ಸವವು  ಪೀಠಾಧಿಪತಿ ಗಂಗಾಧರ ಶ್ರೀಗಳ ನೇತೃತ್ವ, ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ 'ವಿಶ್ವಾರಾಧ್ಯ ಮಹಾರಾಜಕೀ ಜೈ, ಗಂಗಾಧರ ಶಿವಾಚಾರ್ಯ ಮಹಾರಾಜಕೀ ಜೈ' ಎಂಬ ಜಯಘೋಷಗಳ ಮಧ್ಯೆ ವೈಭವದಿಂದ ನಡೆಯಿತು.
 ಸಿಡಿಮದ್ದುಗಳ ಭರಾಟೆಯಲ್ಲಿ ನಡೆದ ರಥೋತ್ಸವಕ್ಕೆ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಚಾಲನೆ ನೀಡಿದರು. ಬೇಡಿದ್ದನ್ನು ನೀಡುವ ಭಗವಂತ ವಿಶ್ವಾರಾಧ್ಯನಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿಯಿಂದ ಬಾಗಿ, ಕೈಜೋಡಿಸಿ ನಮಿಸಿದರು. ಆರಾಧ್ಯದೈವನ ದರ್ಶನ ಆಶೀರ್ವಾದದಿಂದ ಭಕ್ತ ಸಮೂಹ ಸಂಭ್ರಮದಲ್ಲಿ ಓಲಾಡಿತು. ಭಕ್ತರು ತನುಮನಗಳಿಂದ ಹೂವು ಹಣ್ಣು ಕಾಯಿಗಳನ್ನು, ಕಾರಿಕಾ, ಉತ್ತುತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿಯನ್ನು ಸಮರ್ಪಿಸಿದರು.
  ನಾಡವರ ಮೂಢತನವನ್ನು ದೂರ ಮಾಡುವ ಆರೂಢರು ವಿಶ್ವಾರಾಧ್ಯರು. ಅಂತೆಯೇ, ಜಾತ್ರೆಗೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಿಂದ ಭಕ್ತರ ದಂಡು ಹರಿದು ಬಂದು ಸರತಿಯಲ್ಲಿ ನಿಂತು ವಿಶ್ವಾರಾಧ್ಯರಿಗೆ ಕಾಯಿ, ಕರ್ಪೂರ ಅರ್ಪಿಸಿದರು.  ನಂತರ ಗಂಗಾಧರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಸಂಜೆ ಅದ್ಧೂರಿಯಾಗಿ ಜರುಗಿದ ರಥೋತ್ಸವಕ್ಕೆ ಸಾಕ್ಷಿಯಾದರು.
  ಉತ್ತರ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಅಧ್ಯಾತ್ಮಿಕ ಕೇಂದ್ರ, ಜಾಗೃತ ಸ್ಥಾನವೆಂದು ಖ್ಯಾತವಾದ ಸಿದ್ಧ ಸಂಸ್ಥಾನದ ವಿಶ್ವಾರಾಧ್ಯರ ಜಾತ್ರೆಯೆಂದರೆ ಕರ್ವಾಟಕ ಮಾತ್ರವಲ್ಲ ನೆರೆ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದು ಕೃತಾರ್ಥರಾಗುತ್ತಾರೆ.   
  ರಥೋತ್ಸವದಲ್ಲಿ ಉಜ್ಜಯನಿಯ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರು, ನಿವೃತ್ತ ನ್ಯಾಯಮೂರ್ತಿಡಾ. ವಿ. ಎಸ್. ಮಳಿಮಠ, ಶಾಸಕರಾದ ಡಾ.ಎ. ಬಿ. ಮಾಲಕರಡ್ಡಿ, ಗುರುಪಾಟೀಲ್ ಶಿರವಾಳ, ಮಾಜಿ ಸಚಿವ ಸಿದ್ದರಾಮ ಮೇತ್ರಿ, ಡಾ. ವೀರಬಸವಂತರೆಡ್ಡಿ ಮುದ್ನಾಳ, ಚನ್ನಾರೆಡ್ಡಿ ಪಾಟೀಲ್ ತನ್ನೂರು, ನಾಗನಗೌಡ ಕಂದಕೂರು, ಲಿಂಗಣ್ಣಗೌಡ ಮಲ್ಹಾರ, ಶ್ರೀನಿವಾಸರೆಡ್ಡಿ ಚೆನ್ನೂರು,  ಹಣಮಂತರಾಯ ಹೆಂದೆ ಸೇರಿದಂತೆ ನಾಡಿನ ವಿವಿಧ ಮಠದ ಮಠಾಧೀಶರು ಹಾಗೂ ಸಹಸ್ರಾರು ಜನರು ಹಾಜರಿದ್ದರು.  
  ಇದಕ್ಕೂ ಮೊದಲು ಬೆಳಗ್ಗೆ ವಿಶ್ವಾರಾಧ್ಯರ ಕರ್ತೃಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ನಡೆಸಲಾಯಿತು. ನಂತರ 11 ದಿನಗಳಿಂದ ಸಾಗಿ ಬಂದ ವಿಶ್ವಾರಾಧ್ಯರ ಪುರಾಣ ಪಲ್ಲಕ್ಕಿ ಉತ್ಸವ ಮೆರವಣಿಗೆ ಪುರವಂತರ ಸೇವೆಯೊಂದಿಗೆ ನಡೆಯಿತು. ಪುರಾಣ ಪ್ರವಚನಕಾರರಾದ ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ವಿಶ್ವಾರಾಧ್ಯರ ಪುರಾಣಕ್ಕೆ ಮಂಗಳ ಹಾಡಿದರು.
  ಸರತಿ ಸಾಲಿನಲ್ಲಿ ಹಾಕಲಾದ ಲಾಡು ಮುಂತಾದ ಸಿಹಿ ತಿನಿಸುಗಳ ಅಂಗಡಿಗಳಿಗೆ ಭಕ್ತರು ಮುಗಿಬಿದ್ದು ಖರೀದಿಸಿದರು. ಮಕ್ಕಳು ಆಟಿಕೆಗಳನ್ನು ಖರೀದಿಸುತ್ತ ಸಂಭ್ರಮಿಸುತ್ತಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.