ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಕನ್ನಡಪ್ರಭ ವಾರ್ತೆ ಕೆಂಭಾವಿ ಮಾ.7
ಎಲ್ಲ ರೀತಿಯ ಸೌಕರ್ಯ ಹೊಂದಿರುವ ಕೆಂಭಾವಿಯನ್ನು ತಾಲೂಕು ಕೇಂದ್ರವೆಂದು ಸರ್ಕಾರ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆಯ ಚುನಾವಣೆಯನ್ನು ಬಹಿಷ್ಕರಿಸಲು ತಾಲೂಕು ಹೋರಾಟ ಸಮಿತಿ ನಿರ್ಧರಿಸಿದೆ.
ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲೂಕು ಹೋರಾಟ ಸಮಿತಿಯ ವಿಶೇಷ ಸಭೆಯಲ್ಲಿ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಮಾತನಾಡಿ, ಪ್ರಸ್ತುತ ಕೆಂಭಾವಿ ಪಟ್ಟಣವು ಸುರಪುರ ತಾಲೂಕಿನಲ್ಲಿದ್ದು ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಆದರೆ ಈ ಪಟ್ಟಣವನ್ನು ಸರ್ಕಾರ ತಾಲೂಕನ್ನಾಗಿ ಮಾಡದೆ ಈ ಭಾಗದ ಜನತೆಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.
ಅತಂತ್ರ ಸ್ಥಿತಿಯಲ್ಲಿ 67 ಹಳ್ಳಿ: ಸ್ವಾತಂತ್ರ್ಯ ಬಂದಾಗಿನಿಂದ ಇದು ಪ್ರತ್ಯೇಕ ವಲಯವಾಗಿದ್ದರೂ ತಾಲೂಕನ್ನಾಗಿ ಮಾಡದೆ ಬೇರೆ ವಲಯಗಳನ್ನು ತಾಲೂಕು ಮಾಡಲು ಹೊರಟಿರುವುದು ಸರಿಯಲ್ಲ. 1957ರಿಂದಲೇ ಜೇವರ್ಗಿ ವಿಧಾನಸಭೆಗೆ ಒಳಪಟ್ಟಿದ್ದ ಈ ಪಟ್ಟಣ ಮುಂದೆ 1957ರಲ್ಲಿ ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತು. ಅಲ್ಲಿಂದ ಇಲ್ಲಿಯವರೆಗೆ ಕೆಂಭಾವಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 67 ಹಳ್ಳಿಗಳ ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದು, ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದೆ.
1974ರ ವಾಸುದೇವರಾವ ವರದಿಯನ್ನು ಆಧಾರವಾಗಿಟ್ಟುಕೊಂಡು ಇಂದು ತಾಲ್ಲೂಕು ರಚನೆ ಮಾಡಲು ಹೊರಟಿರುವ ಸರ್ಕಾರ, ವಾಸ್ತವ ಸ್ಥಿತಿಯನ್ನು ಮರೆತಿದೆ. ತಾಲೂಕು ಪುನರ್ ರಚನಾ ಸಮಿತಿ ಸರ್ವಾನುಮತದಿಂದ ಕೆಂಭಾವಿಯನ್ನು ತಾಲೂಕು ಕೇಂದ್ರ ಮಾಡಿ ಎಂದರೂ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು.
ಪಕ್ಷಾತೀತವಾಗಿ ಬಹಿಷ್ಕಾರ: ಕೆಲವೇ ಹಳ್ಳಿಗಳನ್ನು ಒಳಗೊಂಡ ಬೇರೆ ಪಟ್ಟಣಗಳನ್ನು ತಾಲೂಕು ಎಂದು ಘೋಷಣೆ ಮಾಡಿರುವ ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ ರಾಜಕೀಯ ಪ್ರೇರಿತ. 63 ಹಳ್ಳಿಗಳು, 60 ಸಾವಿರ ಮತದಾರರು, 1.20 ಲಕ್ಷ ಜನಸಂಖ್ಯೆ ಹೊಂದಿರುವ ವಲಯ, ಕೃಷ್ಣಾ ಮೇಲ್ದಂಡೆ ಯೋಜನೆಯ ಕೇಂದ್ರ ಸ್ಥಳ, ವಿಸ್ತಾರವಾದ ಭೂ ಪ್ರದೇಶ, ತಾಲೂಕಿಗೆ ಬೇಕಾಗುವ ಹೊಸ ಕಟ್ಟಡಗಳು, ಹೀಗೆ ಹತ್ತು ಹಲವು ಸೌಕರ್ಯಗಳಿದ್ದರೂ ತಾಲೂಕು ಕೇಂದ್ರವೆಂದು ಘೊಷಣೆ ಮಾಡದಿರುವ ಸರ್ಕಾರದ ಕ್ರಮ ಖಂಡಿಸಿ ಏ.17ರಂದು ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಪಕ್ಷಾತೀತವಾಗಿ ಬಹಿಷ್ಕರಿಸಲಾಗುವುದು ಎಂದು ದೇಸಾಯಿ ಹೇಳಿದರು.
ಹೋರಾಟ ಸಮಿತಿಯ ಉಪಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ, ಜಿಪಂ ಸದಸ್ಯ ಸಿದ್ದನಗೌಡ ಪೊಲೀಸ್ ಪಾಟೀಲ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಾಜಿ ಸೈನಿಕ ಮಲ್ಲಣ್ಣ ಮೇಟಿ, ಗ್ರಾಪಂ ಅಧ್ಯಕ್ಷರಾದ ಪದ್ಮಾವತಿ ದೇವರಮನಿ, ಮಂಜುಳಾ ಗುಡಿಮನಿ ಹಾಗೂ ಕೆಂಭಾವಿ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

