ಗುಲ್ಬರ್ಗಾ

ಬಿದ್ದಾಪುರ ಮಠದಲ್ಲಿ ರಾಯರ ವರ್ಧಂತಿ ಉತ್ಸವ ಸಂಭ್ರಮ

Published On :

ಗುಲ್ಬರ್ಗ: ಇಲ್ಲಿನ ಬಿದ್ದಾಪುರ ಗುರು ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಗುರುರಾಯರ ಪಟ್ಟಾಭಿಷೇಕ ಮಹೋತ್ಸವ ಹಾಗೂ ವರ್ಧಂತಿ ಉತ್ಸವ ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಇದರಂಗವಾಗಿ ರಾಯರು ರಚಿಸಿರುವ ಪ್ರಾತ-ಗದ್ಯ ಕುರಿತಂತೆ ಪಂಡಿತರಾದ ಪ್ರಸನ್ನಾಚಾರ್ಯ ಜೋಷಿ, ಪ್ರಾಮೇಶದಾಸರ ಕುರಿತಂತೆ ಸುಮನ ಯಜುರ್ವೇದಿ ಉಪನ್ಯಾಸ ನೀಡಿದರು. ಗುರುರಾಯರ ವೃಂದಾವನ ವಿಶೇಷ ಪುಷ್ಪಾಲಂಕಾರದಿಂದ ಭಕ್ತರ ಕಣ್ಮನ ಸೆಳೆಯುತ್ತಿತ್ತು. ಸಂಜೆ ಬಾಗಲಕೋಟೆಯ ಅನಂತ ಕುಲಕರ್ಣಿ ಇವರಿಂದ ದಾಸರ ರಚನೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮ ನಡೆಯಿತು. ಅನ್ನ ಸಂತರ್ಪಣೆ ನಡೆಯಿತು. ಸುಮಂಗಲಿಯರಿಂದ ಭಜನೆ, ಹರಿಕಥಾಮೃತಸಾರ ಪಾರಾಯಣ, ರಾಯರ ಅಷ್ಚೋತ್ತರ ಸೇರಿದಂತೆ ಹಲವು ಧಾರ್ಮಿಕ ಸಮಾರಂಭಗಳೊಂದಿಗೆ ಪಟ್ಟಾಭಿಷೇಕ ಮಹೋತ್ಸವ ಕಳೆಗಟ್ಟಿತ್ತು. ಬಿದ್ದಾಪುರ ನಂಜನಗೂಡು ಗುರುರಾಯರ ಮಠದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಇತ್ತೀಚೆಗೆ ಗುಲ್ಬರ್ಗ ವಿವಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಅವರನ್ನು ಮಠದ ಪರವಾಗಿ ಆತ್ಮೀಯವಾಗಿ ಸತ್ಕರಿಸಲಾಯಿತು.

ಅಶ್ಲೀಲ ಸಿನಿಮಾ ಪೋಸ್ಟರ್ ಕಿತ್ತು ಪ್ರತಿಭಟನೆ
ಗುಲ್ಬರ್ಗ: ವಿಶ್ವ ಮಹಿಳಾ ದಿನವಾದ ಶನಿವಾರ ಗುಲ್ಬರ್ಗದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯರು ಜೇವರ್ಗಿ ಕ್ರಾಸ್ ಬಳಿ ಸೇರಿ ಅಶ್ಲೀಲ ಸಿನಿಮಾ ಪೋಸ್ಟರ್‌ಗಳನ್ನು ಕಿತ್ತು ಹಾಕುವ ಮೂಲಕ ಮಹಿಳೆಯರನ್ನು ಸಿನಿಮಾಗಳಲ್ಲಿ ಅಶ್ಲೀಲವಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಅಶ್ಲೀಲತೆಯಲ್ಲಿ ಮಹಿಳೆಯರನ್ನು, ಅವರ ಮಾದಕ ನೋಟದ ಚಿತ್ರಗಳನ್ನು ಬಳಸುವುದರಿಂದ ಸಮಾಜದ ಮೇಲೆ ಕೆಟ್ಟ ಪರಿಮಾಮಗಳಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಎಐಎಂಎಸ್‌ಎಸ್‌ನ ಡಾ. ಸೀಮಾ ದೇಶಪಾಂಡೆ, ಗುಂಡಮ್ಮ, ವಿಶಾಲಾಕ್ಷಿ, ಅಂಬಿಕಾ, ಮಧು, ಶಿವರಂಜಿನಿ, ಶಬನಾ, ಲಕ್ಷ್ಮೀ, ಸಂಗೀತಾ ಇದ್ದರು.

ರಸ್ತೆ ಕಾಮಗಾರಿಗೆಗೆ ಚಾಲನೆ
ಗುಲ್ಬರ್ಗ: ಲೋಕೋಪಯೋಗಿ ಇಲಾಖೆಯಡಿ 4 ಕೋಟಿ ವೆಚ್ಚದಲ್ಲಿ ಶಹಾಪುರ- ಶಿವರಾಮಪುರ ರಾಜ್ಯ ಹೆದ್ದಾರಿಯ ಹಾಗರಗಾ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಚಾಲನೆ ನೀಡಿದರು. ಹಲವಾರು ಅಭಿವೃದ್ಧಿ ಕಾರ್ಯಗಳು ಸಮಾರೋಪಾದಿಯಲ್ಲಿ ನಡೆಯುತ್ತಿದ್ದು, ಶೀಘ್ರವೇ ಗುಲ್ಬರ್ಗ ನಗರ ಒಂದು ಮಾದರಿ ಕ್ಷೇತ್ರವಾಗಲಿದೆ ಎಂದು ಹೇಳಿದರು. ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಸಗರ ಚುಲ್‌ಬುಲ್ ಇದೊಂದು ಅತ್ಯಂತ ಸುಂದರ ರಸ್ತೆಯಾಗಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇಲಾಖೆ ಅಭಿಯಂತರಾದ ಆಮೀನ್ ಮುಕ್ತಾರ್, ಮುಷ್ತಾಕ ಅಹ್ಮದ, ಮಹಮ್ಮದ್ ಅಹ್ಮದ್, ಗುತ್ತಿಗೆದಾರ ಶ್ರೀಕಾಂತ ಮಹಾಜನ, ಜಿಲ್ಲಾ ವಕ್ಫ್ ಸಮಿತಿ ಅಧಕ್ಷ ಅಸದಲ್ಲಿ ಅನಸಾರಿ ಇದ್ದರು.

ಗಮನ ಸೆಳೆದ ಮಹಿಳೆಯರ ಆಟೋಟ ಸ್ಪರ್ಧೆ
ಗುಲ್ಬರ್ಗ: ಇಲ್ಲಿನ ಕನ್ನಡ ಭವನದ ಅಂಗಳದಲ್ಲಿ ಶನಿವಾರ ವಿಶ್ವ ಮಹಿಳಾ ದಿನದ ಅಂಗವಾಗಿ ನಡೆದ ಮಹಿಳೆಯರ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ಹಲವಾರು ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸಿ ನಕ್ಕು ನಲಿದಾಡಿದರು. ಕೆಲಸ ಕಾರ್ಯಗಳಿಗೆಲ್ಲ ವಿರಾಮ ನೀಡಿ ಕುಣಿತ, ಆಟ- ಹಾಸ್ಯದಲ್ಲಿ ತೇಲಾಡಿದರು. ಕನ್ನಡ ಭವನದಲ್ಲಂತೂ 1 ಗಂಟೆಗೂ ಹೆಚ್ಚು ಅವಧಿ ನೂರಾರು ಮಹಿಳೆಯರು, ಆಟದ ಆನಂದದ ಜೊತೆಗೆ ತಮ್ಮಲ್ಲಿರುವ ಜಾಣತನ, ಕೌಶಲ್ಯಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಭೇಷ್ ಎನ್ನಿಸಿಕೊಂಡರು. ಕನ್ನಡ ಭವನದಲ್ಲಿನ ಮಹಿಳೆಯರ ಆಟೋಟಗಳನ್ನು ನೋಡಲು ನೂರಾರು ಜನ ಅಲ್ಲಿ ಸೇರಿದ್ದು ವಿಶೇಷವಾಗಿತ್ತು.

ಯೋಗ ಸ್ಪರ್ಧೆಯಲ್ಲಿ ರಶವಂತ್ ಪ್ರಥಮ
ಗುಲ್ಬರ್ಗ: ಇಲ್ಲಿನ ಸೇಡಂ ರಸ್ತೆಯಲ್ಲಿರುವ ಸ್ವಾಮಿನಾರಾಯಣ ಗುರುಕುಲ ಶಾಲೆಯ 3ನೇ ತರಗತಿಯಲ್ಲಿ ಓದುತ್ತಿರುವ ಎಸ್.ಎಸ್. ರಶವಂತ್ ಒಂದು ವರ್ಷದಿಂದ ಯೋಗಾಭ್ಯಾಸ ಪ್ರಾರಂಭಿಸಿದ್ದು, ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಂತೆ ಬೆಂಗಳೂರಿನಲ್ಲಿ ರಾಜ್ಯ, ರಾಷ್ಟ್ರ, ದಕ್ಷಿಣ ಭಾರತ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾನೆಂದು ಯೋಗಗುರು ಜಯರಾಂ ಹಾಗೂ ಶಾಲೆಯ ಪ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶರಣಬಸವೇಶ್ವರ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ
ಗುಲ್ಬರ್ಗ: ಶರಣಬಸವೇಶ್ವರ ಸಂಯುಕ್ತ ವಸತಿ ಪದವಿಪೂರ್ವ ವಿಜ್ಞಾನ ವಿದ್ಯಾಲಯದಲ್ಲಿ ದ್ವಿತೀಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರೊ. ಎಸ್.ಬಿ. ಪತಂಗೆ ವಿಷಯ ಜ್ಞಾನ ಕೊಡತಕ್ಕಂಥ ಗುರುಗಳ ಜೊತೆಗೆ ಅಂತರಂಗದಲ್ಲಿ ಇರತಕ್ಕಂತಹ ಗುರುವನ್ನು ಅರಿತುಕೊಳ್ಳಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಉತ್ತಮ ವಿದ್ಯಾರ್ಥಿಯಾಗಿ ಆಯ್ಕೆಯಾದ ವಿಶಾಲ ಧರಪುರ, ಐಶ್ವರ್ಯ ಮರಡಿಗೆ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ಪ್ರೊ. ಎಸ್.ಆರ್. ಮಠಪತಿ, ಡಾ. ರಾಜೇಂದ್ರಸಿಂಗ್ ಹಾಗೂ ಸಿಬ್ಬಂದಿ ಇದ್ದರು.

ಸಾಂಸ್ಕೃತಿಕ ಉತ್ಸವಕ್ಕೆ ಎಂಎಲ್ಸಿ ಅಲ್ಲಂಪ್ರಭು ಚಾಲನೆ
ಗುಲ್ಬರ್ಗ: ನಗರದ ಸಂತೋಷ ಕಾಲೋನಿಯ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ನೆಲೋಗಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಲ್ಲಿನ ಕಲಾ ಪ್ರತಿಭೆಯನ್ನು ವ್ಯಕ್ತಪಡಿಸಲು ಇಂತಹ ಸಾಂಸ್ಕೃತಿಕ ವೇದಿಕೆಗಳೇ ಆಧಾರ. ವಾಸ್ತವದಲ್ಲಿ ಜನರು ಟಿವಿ ಮಾಧ್ಯಮಗಳಿಗೆ ಮಾರುಹೋಗಿ ಪಾಶ್ಚಿಮಾತ್ಯ ಸಂಗೀತದ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದ ನಮ್ಮ ಮೂಲ ಪರಂಪರೆ ಸಂಗೀತ ನಶಿಸುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಅನೇಕ ಕಲಾವಿದರು ಕಲಾ ತಂಡಗಳು ಭಾಗವಹಿಸಿದ್ದವು. ಸಮಾರಂಭ ಅಧ್ಯಕ್ಷತೆ ಬಸವರಾಜ ಖ್ಯಾಲಾ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಶಂಕರಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಯುವ ಮುಖಂಡ ಶರಣಬಸಪ್ಪ ಭೂಸನೂರ, ರಾಮಚಂದ್ರಪ್ಪ ಸಾರವಾಡ, ರಾಜಶೇಖರ ಮನ್ನಳ್ಳಿ, ಶಿವಪುತ್ರಪ್ಪ ರಾಮಶೆಟ್ಟಿ, ವೀರಣ್ಣ ಕುಳೆಕುಮಟಗಿ ಇದ್ದರು.

ಎನ್‌ಬಿಎ ಕಾರ್ಯಾಗಾರ
ಗುಲ್ಬರ್ಗ: ನ್ಯಾಷನಲ್ ಬೋರ್ಡ್ ಆಫ್ ಆಕ್ರಿಡಿಟೇಷನ್(ಎನ್‌ಬಿಎ), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯುಕ್ತಾಶ್ರಮದಲ್ಲಿ ಜರುಗಿದ ನಾಲ್ಕು ದಿನಗಳ ಕಾರ್ಯಾಗಾರವನ್ನು ಪ್ರಾದೇಶಿಕ ಕೇಂದ್ರದ ವಿಶೇಷಾಧಿಕಾರಿ ಡಾ. ಪ್ರವಿಣ್ ಹೋನಗುಂಟಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಎಸ್‌ಐಟಿ ತುಮಕೂರಿನ ಡಾ. ಯು.ಎಸ್. ಮಲ್ಲಿಕಾರ್ಜುನ ಎನ್‌ಬಿಎ ಆಕ್ರಿಡಿಟೇಷನ್‌ನಿಂದ ವಿದ್ಯಾರ್ಥಿಗಳಿಗಲ್ಲದೆ ಪೋಷಕರು, ಶಿಕ್ಷಣ ಸಂಸ್ಥೆ, ಹಾಗೂ ಸಮಾಜಕ್ಕೂ ಉಪಯೋಗವಾಗುತ್ತದೆ ಎಂದು ಹೇಳಿದರು. ಪ್ರೊ. ಯಶವಂತ ಅಷ್ಟಗಿ, ಡಾ. ಶುಭಾಂಗಿ ಪಾಟೀಲ್, ಡಾ. ಎಂ.ಎ ವಾಹಿದ್, ಡಾ. ಸಂಧ್ಯಾ ಇದ್ದರು.

ಶಿಕ್ಷಣ ಸಬಲೀಕರಣ ಮಹಿಳೆ ಮೊದಲ ಹಂತ: ಡಾ. ಛಾಯಾ
ಗುಲ್ಬರ್ಗ: ಶಿಕ್ಷಣ ಸಬಲೀಕರಣ ಮಹಿಳೆ ಮೊದಲ ಹಂತವಾಗಿ ಪರಿಣಮಿಸಿದಾಗ ಮಾತ್ರ ಸಮಾನತೆ ಹಾಗೂ ಉದ್ಯೋಗದಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಾಗುವುದು ಎಂದು ಅರ್ಥಶಾಸ್ತ್ರಜ್ಞ ಡಾ. ಛಾಯಾ ದೇಗಾಂವಕರ್ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನ ಏರ್ಪಡಿಸಿದ್ದ ಕಾವ್ಯಸಿರಿ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು. ಕಮಲಾಬಾಯಿ ಹೆಬ್ಬಳಕರ್ ಟೆಂಗಳಿ, ಶಕುಂತಲಾ ಎಂ. ಕುಮಟ, ಸುಧಾ ನಾಯಕ, ರಾಜೇಶ್ವರಿ ದೇಶಮುಖ ಅವರಿಗೆ ಸನ್ಮಾನಿಸಲಾಯಿತು. ಪ್ರೀತಿ ಪಣತಿಯಲ್ಲಿ ಆತ್ಮೀಯ ಬತ್ತಿ ಹೊಸೆದು ಮಮತೆಯ ತೈಲ ಸುರಿದು ಎಂದು ಕವಯತ್ರಿ ಶಾಂತಾ ಪಸ್ತಾಪುರ, ನೋಡುವ ಕಣ್ಣಿಗೆ ಬದುಕು ಸುಂದರ ಎಂಬ ಶೀರ್ಷಿಕೆಯ ಹಾಗೂ ಕನಸಿನ ಮಗಳಾಗಿ ಸೋದರಿಯಾಗಿ ಸಂಗಾತಿಗೆ ಉಸಿರಾಗಿ ಸಂಸಾರದ ಕಣ್ಣಾಗಿ ಸಾಗುವಳು ಹೆಣ್ಣು ಎಂದು ಕವಯತ್ರಿ ಗೀತಾ, ಹೆಣ್ಣು ಶೀರ್ಷಿಕೆಯ ಕವನ ವಾಚಿಸಿದರು. ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯೆ ನಿಲಮ್ಮ ಲೇಂಗಟಿ, ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾರ್ಯದರ್ಶಿ ಶಿವರಾಜ ಅಂಡಗಿ ಇದ್ದರು. ಕೆ. ಗಿರಿಮಲ್ಲ ನಿರೂಪಿಸಿದರು.

ನಿಷ್ಕ್ರಿಯಗೊಂಡಿರುವ ಗುಲ್ಬರ್ಗ ವಿವಿ: ಅಂದಾನಿ
ಮಳಖೇಡ(ಶಿವಶರಣ ಹರಳಯ್ಯ ವೇದಿಕೆ) ಸೇಡಂ: ಗುಲ್ಬರ್ಗ ವಿಶ್ವವಿದ್ಯಾಲಯವು ಯಾವುದೇ ಜನಮುಖಿ ಕೆಲಸ ಮಾಡದೇ ಕೇವಲ ಸಂಬಳಕ್ಕಾಗಿ ವಿಶ್ವ ವಿದ್ಯಾಲಯವೆನ್ನುವಂತಿದ್ದು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಕಳವಿನ ಪುಸ್ತಕಗಳಿಂದ ಪಿಎಚ್.ಡಿಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಖ್ಯಾತ ಅಂತಾರಾಷ್ಟ್ರೀಯ ಕಲಾವಿದ ವಿ.ಜಿ.ಅಂದಾನಿ ನೇರ ಆಪಾದನೆ ಮಾಡಿದ್ದಾರೆ. ಅವರು ಸೇಡಂ ತಾಲೂಕಿನ ಐತಿಹಾಸಿಕ ನೃಪತುಂಗನ ನೆಲ ಮಳಖೇಡದಲ್ಲಿ ನಡೆದ ಸೇಡಂ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆ, ಸಂಸ್ಕೃತಿ, ಪರಂಪರೆಯ ಪೋಷಣೆ ಮಾಡುವ ಗುಣ ಈ ನೆಲಕ್ಕಿದೆ. ಇಲ್ಲಿನ ಗತವೈಭವವನ್ನು ಹಲವಾರು ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖ ಮಾಡಲಾಗಿದೆ. ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿ ರಾಷ್ಟ್ರಕೂಟ ಕೃಷ್ಣನ ಕಾಲದ ವಿಗ್ರಹಗಳು ಇರುವುದು ಮಳಖೇಡದ ಹೆಗ್ಗಳಿಕೆಯೇ ಸರಿ ಎಂದು ಅವರು ಹೇಳಿದ್ದಾರೆ. ಪ್ರಾಚ್ಯ ವಸ್ತು ಸಂಗ್ರಹಾಲಯ ನಾಡಿನ ವಿ.ವಿ.ಇದ್ದಂತೆ ಎಂದು ವ್ಯಾಖ್ಯಾನಿಸಿದರು. ಶೈಕ್ಷಣಿಕವಾಗಿ ಮುಂದುವರಿದ ರಾಷ್ಟ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ಶೀತಲೀಕರಣ ಘಟಕ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಗುಲ್ಬರ್ಗ: ಇಲ್ಲಿನ ರಿಂಗ್ ರಸ್ತೆಯಲ್ಲಿರುವ ಹುಸೇನ್ ಗಾರ್ಡನ್ ಶೀತಲೀಕರಣ ಘಟಕದ ಅನೀಲ ಸೋರಿಕೆ ಹಾಗೂ ಅಲ್ಲಿನ ಅಕ್ರಮಗಳ ಕುರಿತಂತೆ ತನಿಖೆ ನಡೆಸಲಾಗಿದ್ದು, ವರದಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ತನಿಖಾ ವರದಿ ಈಗಾಗಲೇ ಪ್ರಭಾರಿ ಜಿಲ್ಲಾಧಿಕಾರಿಗಳ ಬಳಿ ಇದೆ. ಈ ವರದಿಯನ್ನಾಧರಿಸಿಯೇ ಫೆ. 28ರಂದು ಮಹತ್ವದ ಸಭೆ ನಡೆಸಲಾಗಿದ್ದು ಶೀಲತೀಕರಣ ಘಟಕದ ಪ್ರಕರಣಕ್ಕೆ ಸಂಬಂಧಪಟ್ಟಂತಹ ಇಲಾಖೆಗಳ ಅಧಿಕಾರಿಗಳಿಗೆ ಅವರವರ ಇಲಾಖೆಯಲ್ಲಿರುವ ಕಾನೂನು- ಕಟ್ಟಳೆಗಳ ಪ್ರಕಾರ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾದಿಕಾರಿ ಡಾ.ಎನ್.ವಿ. ಪ್ರಸಾದ್ ಹೇಳಿದ್ದಾರೆ. ಈ ಪ್ರಕರಣವನ್ನು ಬಯಲಿಗೆ ತಂದು ಲಿಖಿತ ದೂರು (ದಾಖಲೆ ಸಮೇತ)ಸಲ್ಲಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿರುವ ಹೋರಾಟಗಾರ ಎಸ್.ಕೆ. ಕಾಂತಾ ಅವರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದು ತಾವು ಶೀತಲೀಕರಣ ಘಟಕಕ್ಕೆ ಸಂಬಂಧಿಸಿದಂತೆ ಕೈಗಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಶೈತ್ಯಾಗಾರದಲ್ಲಿ ಏನೆಲ್ಲಾ ಅಕ್ರಮಗಳು ನಡೆದಿವೆ. ಯಾವ ಕಾನೂನುಗಳು, ಯಾವ ಇಲಾಖೆಗೆ ಸಂಬಂಧಿಸಿದವುಗಳು ಉಲ್ಲಂಘನೆಯಾಗಿವೆ ಎಂಬುದನ್ನು ಪರಿಶೀಲಿಸಲಾಗಿದೆ.

ಇಂದು ಪ್ರಥಮ ವಾರ್ಷಿಕೋತ್ಸವ
ಗುಲ್ಬರ್ಗ: ಸಗರನಾಡು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೂಪರ್ ಮಾರ್ಕೆಟ್‌ನ ಶ್ರೀನಿವಾಸರಾವ್ ರಾಮಚಂದ್ರಪ್ಪ ರಘೋಜಿ ಸಭಾಂಗಣದಲ್ಲಿ ಮಾ. 9 ರಂದು ಬೆಳಗ್ಗೆ 10.30 ಗಂಟೆಗೆ ಪ್ರಥಮ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಚೇತನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮಾರಂಭ ಉದ್ಘಾಟಿಸುವರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ  ಅಧ್ಯಕ್ಷತೆ ವಹಿಸುವರು. ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಯಾದಗಿರಿ ಶಾಸಕ ಡಾ. ಎ.ಬಿ. ಮಲಕರೆಡ್ಡಿ, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಗುವಿವಿ ಕುಲಸಚಿವ ಡಾ. ಚಂದ್ರಕಾಂತ ಯಾತನೂರು ಅಧ್ಯಕ್ಷತೆ ವಹಿಸುವರು. ಶಹಾಪೂರ ಶಾಸಕ ಗುರು ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಡಾ. ಅಜಯಸಿಂಗ್, ಡಾ. ವಾಸುದೇವ ಸೇಡಂ ಉಪಸ್ಥಿತರಿರುವರು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು.

ಮೂಲಭೂತ ಸೌಲಭ್ಯಕ್ಕೆ ಜೈಕರವೇ ಒತ್ತಾಯ
ಚಿತ್ತಾಪುರ: ಐತಿಹಾಸಿಕ ಸ್ಥಳವಾದ ಸುಕ್ಷೇತ್ರ ನಾಗಾವಿ ನಾಡಿನಲ್ಲಿ ಸಂಚರಿಸುವ ಬಸ್‌ಗಳ ಮೇಲೆ ಬೇರೆ ತಾಲೂಕುಗಳಲ್ಲಿಯಂತೆ 'ನಾಗಾವಿ ನಾಡು' ಎಂಬ ನಾಮಫಲಕ ಅಳವಡಿಸಬೇಕು. ಇಲ್ಲಿನ ನೂತನ ಬಸ್ ನಿಲ್ದಾಣ ಪ್ರಾರಂಭವಾಗಿ 2 ವರ್ಷಗಳು ಕಳೆಯುತ್ತಿದ್ದರೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಜೈ ಕರವೇ ತಾಲೂಕು ಅಧ್ಯಕ್ಷ ಜಗದೇವ ಕುಂಬಾರ ನೇತೃತ್ವದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ  ಮನವಿ ಪತ್ರ ಸಲ್ಲಿಸಲಾಯಿತು. ಬೇಸಿಗೆ ಕಾಲ ಪ್ರಾರಂಭವಾಗುತ್ತಿರುವುದರಿಂದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹೆಚ್ಚುವರಿ ಕುಡಿಯವ ನೀರಿನ ಸೌಲಭ್ಯ ಒದಗಿಸಬೇಕು. ಗುಲ್ಬರ್ಗಕ್ಕೆ ತೆರಳುವ ಬಸ್‌ಗಳು ಶೌಚಾಲಯದ ಮುಂದೆ ನಿಲ್ಲುತ್ತಿರುವುದರಿಂದ ಮಹಿಳೆಯರಿಗೆ ಬಹಳ ತೊಂದರೆಯಾಗುತ್ತಿದೆ. ನಿಲ್ದಾಣದಲ್ಲಿ ಪೋಲಿಸ್ ಗಸ್ತು ಹೆಚ್ಚಿಸಬೇಕು. ಪಟ್ಟಣದಲ್ಲಿ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಯರಗಲ್, ಕದ್ದರಗಿ, ಜಿವಣಗಿ, ಶಂಕರವಾಡಿ, ಮುತ್ತಗಾ, ಕಾಟಮದೇವರಹಳ್ಳಿ, ಬೆಳಗುಂಪಾ, ಇವಣಿ, ಇಟಗಾ, ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗೋಧೂತಾಯಿ ಅವ್ವಾಜಿ ಪುಣ್ಯತಿಥಿ
ಗುಲ್ಬರ್ಗ:ಈ ಭಾಗದ ನಡೆದಾಡುವ ದೇವರಾಗಿ ಖ್ಯಾತಿ ಪಡೆದಿದ್ದ ದೊಡ್ಡಪ್ಪ ಅಪ್ಪ ಅವರ ಪತ್ನಿ ಮಾತೋಶ್ರೀ ಗೋಧೂತಾಯಿ ಅವ್ವಾಜಿ ಅವರ 43ನೇ ಪುಣ್ಯತಿಥಿಯನ್ನು ನಗರದ ಗೋಧೂತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಕೆ.ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಗೋದೂತಾಯಿ ಅವ್ವಾಜಿ ಅವರು ಶರಣ ಸತಿಯಾಗಿ ಬದುಕಿದವರು. ಒಬ್ಬ ಮಹಾಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದಕ್ಕೆ ಮಾತೋಶ್ರೀ ಅವರೇ ದೊಡ್ಡ ಉದಾಹರಣೆಯಾಗಿದ್ದರು ಎಂದರು. ಮುಖ್ಯ ಅತಿಥಿಯಾಗಿದ್ದ ವಿಶ್ವನಾಥ ಮಂಗಲಗಿ ಮಾತನಾಡುತ್ತಾ, ಗೋಧೂತಾಯಿ ಅವರ ಸಾಧನೆ ಹಿರಿದಾದುದು. ಈ ಭಾಗದ ಪ್ರಮುಖ ಶರಣೆಯರಲ್ಲಿ ಅವರು ಪ್ರಮುಖರು. ಅವರು ಎಲ್ಲರನ್ನು ತಮ್ಮ ಮಕ್ಕಳಂತೆ ಆದರದಿಂದ ಕಾಣುತ್ತಿದ್ದರು ಎಂದರು. ಈ ಸಂದರ್ಭದಲ್ಲಿ ಭಾಷಣ ಸ್ಪರ್ಧೆ, ಚಿತ್ರಕಲೆ, ಸ್ಲೋಗನ್ ಬರವಣಿಗೆ ಹೀಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಶ್ವನಾಥ ಮಂಗಲಗಿ, ಪ್ರೊ. ಶ್ರೀದೇವಿ ಹರವಾಳ, ಪ್ರೊ. ಶಾಂತಲಾ ನಿಷ್ಠಿ ಉಪಸ್ಥಿತರಿದ್ದರು.

ಟೆಂಗಳಿ- ತೇಗಲತಿಪ್ಪಿ ಹದಗೆಟ್ಟ ರಸ್ತೆ; ಪ್ರಯಾಣಿಕರ ಪರದಾಟ
ಚಿತ್ತಾಪುರ: ತಾಲೂಕಿನ ಟೆಂಗಳಿಯಿಂದ ತೇಗಲತಿಪ್ಪಿವರೆಗಿನ 15 ಕಿಮಿ ರಸ್ತೆಯು ಕಳೆದ ಅರೇಳು ವಶಗಳಿಂದ ರಿಪೇರಿ ಕಾಣದೇ ಸಂಪೂರ್ಣ ತಗ್ಗುಗಳಿಂದ ಕೂಡಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಹಿಡಿಶಾಪ ಹಾಕಿ ಹೋಗುವಂತಾಗಿದೆ. ಟೆಂಗಳಿ ಗ್ರಾಮವು ಚಿತ್ತಾಪುರ ತಾಲೂಕಿನಲ್ಲಿ ಬರುತ್ತಿದ್ದು, ವಿಧಾನ ಸಭೆ ಕ್ಷೇತ್ರ ಚಿಂಚೋಳಿ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. ಕ್ಷೇತ್ರ ಪುನರ್ ವಿಂಗಡನೆಗೆ ಮೋದಲು ಈ ರಸ್ತೆಯು ಚಿತ್ತಾಪುರ ವಿಧಾನ ಸಭೆ ವ್ಯಾಪ್ತಿಯಲ್ಲಿದ್ದುದ್ದರಿಂದ ಆಗಿನ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ರವರು ಮರಗೋಳ ದಿಂದ ತೇಗಲತಿಪ್ಪಿವರೆಗಿನ ರಸ್ತೆಯನ್ನು ಡಾಂಬರೀಕರಣಗೋಳಿಸಿದ್ದರು. ಅಂದು ರಿಪೇರಿ ಕಂಡ ರಸ್ತೆಯು ಇಂದಿನವರೆಗೂ ರಿಪೇರಿ ಕಾಣದಂತಾಗಿದೆ. ಈಗ ಈ ರಸ್ತೆಯು ಚಿಂಚೋಳಿ ವಿಧಾನ ಸಭೆ ವ್ಯಾಪ್ತಿಗೆ ಬರುತ್ತಿರುವದರಿಂದ ಈ ರಸ್ತೆಯು ರಿಪೇರಿ ಕಾಣದೇ ತಗ್ಗುಗಳಿಂದ ಕೂಡುವಂತಾಗಿದೆ ಎಂದು ಜನರು ದೂರುತ್ತಾರೆ. ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿ ರಸ್ತೆಯ ಸ್ಥಿತಿ ಅರಿತು ರಸ್ತೆ ದುರಸ್ತಿಗೆ ಕ್ರಮ ಕೈಗೋಳ್ಳಬೇಕೆನ್ನುವುದು ಜನರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.