ಗುಲ್ಬರ್ಗಾ

ಬೆಳಗಾದ್ರೆ ಪರೀಕ್ಷೆ, ಓದೋದ್ಬಿಟ್ಟು ಡಿಮ್ಯಾಂಡ್ ಡ್ರಾಫ್ಟ್‌ಗಾಗಿ ಬ್ಯಾಂಕ್ ಮುಂದೆ ನಿಲ್ಲೋ ದುಸ್ಥಿತಿ

Published On :

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.10
ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2014- 15ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅದಕ್ಕಾಗಿ ಮೈಸೂರು ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್‌ನಿಂದಲೇ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಶುಲ್ಕ ಭರಿಸಿ ಅರ್ಜಿ ಗುಜರಾಯಿಸಬೇಕು. ಇದಕ್ಕೆ ಮಾ.17 ಕೊನೆಯ ದಿನವಾಗಿದೆ.
ಗುಲ್ಬರ್ಗದಲ್ಲಿ ಈ ಬ್ಯಾಂಕುಗಳ ಶಾಖೆಗಳು ವಿರಳ. ಹೀಗಾಗಿ ನಗರ ಹಾಗೂ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳು ಬೆಳಗಾದರೆ (ಮಾ.12ರಿಂದ) ವಾರ್ಷಿಕ ಪರೀಕ್ಷೆ ಬರೆಯಬೇಕು. ಅಧ್ಯಯನ ಬದಿಗೊತ್ತಿ ಇದೀಗ ಈ ಬ್ಯಾಂಕುಗಳ ಮುಂದೆ ಡಿಡಿ ಪಡೆಯಲು ಸಾಲುಗಟ್ಟಿ ನಿಲ್ಲುವಂತಾಗಿದೆ.
ಇಲ್ಲಿನ ಸೂಪರ್ ಮಾರ್ಕೆಟ್ ಹಾಗೂ ಹಳೆ ಜೇವರ್ಗಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗಳ ಮುಂದೆ ಸೋಮವಾರ ಕಿಮೀದಷ್ಟು ಉದ್ದದ ವಿದ್ಯಾರ್ಥಿಗಳ ಸಾಲು ಕಂಡು ಬಂತು. ಬೆ.8ರಿಂದ ಸಂಜೆಯವರೆಗೆ ಸರತಿಯಲ್ಲಿ ನಿಂತರೂ ಡಿಡಿ ಪಡೆಯಲು ಪರದಾಡುವಂತಾಗಿತ್ತು. ಇದೇ ರೀತಿ ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಶಾಖೆಗಳೂ ಇದಕ್ಕೆ ಹೊರತಾಗಿರಲಿಲ್ಲ.
ಪ್ರಾಧಿಕಾರದ ಕ್ರಮಕ್ಕೆ ಅಸಮಾಧಾನ: ಅದ್ಯಾಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಲವೇ ಬ್ಯಾಂಕುಗಳನ್ನು ಶುಲ್ಕಕ್ಕಾಗಿ ಗುರುತಿಸುತ್ತದೋ, ಈ ಭಾಗದಲ್ಲಿ ಹೆಚ್ಚಾಗಿರುವ ಹೆಜ್ಜೆಗೊಂದರಂತೆ ಶಾಖೆಗಳನ್ನು ಜಿಲ್ಲಾ ಪೂರ್ತಿ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಎಸ್ಬಿಐ ಅಥವಾ ಕೆನರಾ ಬ್ಯಾಂಕುಗಳನ್ನೇಕೆ ಅರ್ಹ ಬ್ಯಾಂಕುಗಳ ಯಾದಿಯಲ್ಲಿ ಸೇರ್ಪಡೆ ಮಾಡುತವುದಿಲ್ಲವೋ ಎಂದು ಸರತಿಯಲ್ಲಿ ನಿಂತ ವಿದ್ಯಾರ್ಥಿಗಳು ಪಾಧಿಕಾರದ ಕ್ರಮವನ್ನು ಪ್ರಶ್ನಿಸುತ್ತಿದ್ದಾರೆ.
ಮಾ.12ರಿಂದಲೇ ಪಿಯುಸಿ ದ್ವಿತೀಯ ವಾರ್ಷಿಕ  ಪರೀಕ್ಷೆಗಳು ಶುರುವಾಗುತ್ತಿವೆ. ಪರೀಕ್ಷೆಗೆ ಇನ್ನೇನು 2 ದಿನ ಇರುವಾಗಲೇ ಕಎಇ ಸಿಇಟಿಗಾಗಿ ಅರ್ಜಿ ಆಹ್ವಾನಿಸಿ ಮೂರೇ ಮೂರು ಬ್ಯಾಂಕುಗಳ ಡಿಡಿ ಪಡೆಯುವಂತೆ ಸೂಚಿಸಿದ್ದೇ ಈ ಯಡವಟ್ಟಿಗೆ ಕಾರಣವಾಗಿದೆ.
ಹೋಗಲಿ, ಮೈಸೂರು ಬ್ಯಾಂಕ್ ಆಗಲಿ, ಬಿಒಐ ಆಗಲೀ ಈ ಭಾಗದಲ್ಲಿ ಹೆಚ್ಚಿನ ಶಾಖೆಗಳನ್ನೂ ಹೊಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪ್ರಾಧಿಕಾರದ ಸೂಚನೆಯನ್ನು ಪಾಲಿಸುವ ಅನಿವಾರ್ಯತೆಯಲ್ಲಿ ಅಧ್ಯಯನ ಬಿಟ್ಟು ಸರತಿಯಲ್ಲಿ ಬ್ಯಾಂಕ್ ಬಾಗಿಲು ಕಾಯುವಂತಾಗಿದೆ.
ಕೌಂಟರ್ ಹೆಚ್ಚಿಸಿದರೆ ಸಮಸ್ಯೆಗೆ ಪರಿಹಾರ: ಎಸ್ಬಿಎಂ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ತಮ್ಮ ಡೀಡಿ ಸೇವೆ ನೀಡುವ ಕೌಂಟರ್‌ಗಳ ಸಂಖ್ಯೆಯ್ನನಾದರೂ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ ತಕ್ಷಣ ವಿಳಂಬವಿಲ್ಲದಂತೆ ಈ ಸೇವೆ ದೊರಕಿಸಿಕೊಡುವ ವ್ಯವಸ್ಥೆ ಮಾಡಬೇಕಿತ್ತು.
ಆದರೆ ಈ ಬ್ಯಾಂಕುಗಳವರೂ ಆ ಕೆಲಸಕ್ಕೆ ಆಸಕ್ತಿ ತೋರಿಸಿಲ್ಲ. ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಬ್ಯಾಂಕುಗಳವರು ಇನ್ನೆಲ್ಲಿ ಕೌಂಟರ್ ಹೆಚ್ಚಿಸುವುದು, ಸರತಿಯಲ್ಲಿ ನಿಂತು ಡಿಡಿ ಪಡೆಯಲಿ ಎಂದು ಬ್ಯಾಂಕುಗಳವರು ತಮ್ಮ ಪಾಡಿಗೆ ತಾವಿದ್ದುಬಿಟ್ಟಿದ್ದಾರೆ.
ಇವೆಲ್ಲದರ ಮದ್ಯೆಯೇ ಪಿಯುಸಿ ವಿದ್ಯಾರ್ಥಿಗಳು ಡಿಡಿ ಪಡೆಯಲು ಇಡೀ ಹಗಲು ಸರತಿಯಲ್ಲಿ ನಿಲ್ಲುವ ಮೂಲಕ ಹೈರಾಣಾಗುವಂತಾಗಿದೆ. ಸಿಇಟಿ ಅರ್ಜಿಗಳನ್ನು ಭರಿಸಲು ಮಾ.17 ಕೊನೆಯ ದಿನ. ಇಷ್ಟರಲ್ಲೇ ಎಲ್ಲವೂ ಆಗಬೇಕೆಂದು ಕಇಎ ಸೂಚಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಸಿಇಟಿ ಅರ್ಜಿಗಾಗಿ ಡಿಡಿ ಪಡೆಯಬೇಕೋ, ಮನೆಯಲ್ಲಿ ಶಾಂತವಾಗಿ ಕುಳಿತು ಓದಬೇಕೋ ಎಂಬ ಇಕ್ಕಟ್ಟಿಗೆ ಸಿಲುಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.