ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕೊಡ್ರಿ...
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.11
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಾಂಪ್ರದಾಯಿಕ ಕಾರ್ಯಕ್ರಮವಾಗಿಸದೆ ಅದಕ್ಕೊಂದು ಹೋರಾಟದ ಸ್ವರೂಪ ನೀಡುವ ಮೂಲಕ ಮಹಿಳೆಯರ ಹಕ್ಕಿನ ಬಗ್ಗೆ ಜಿಲ್ಲಾಡಳಿತದ ಮುಂದೆಯೇ ಪ್ರತಿಪಾದಿಸುವಂತಹ ವಿನೂತನ ಹೋರಾಟ ಕಾರ್ಯಕ್ರಮ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಮಾ.12ರ ಬುಧವಾರ ನಗರದಲ್ಲಿ ನಡೆಯಲಿದೆ.
ಇದೊಂದು ಹೋರಾಟದ ಗಾಥೆ. ಮಹಿಳಾ ವಿಮೋಚನೆಗಾಗಿ, ಸಮಗ್ರ ಸಮತೆಯ ನಾಡಿಗಾಗಿ ನಿರಂತರ ಹೋರಾಟದ ಪ್ರೇರಣೆಯ ದಿನವಾದ ವಿಶ್ವ ಮಹಿಳಾ ದಿನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೆ.ನೀಲಾ 'ಕನ್ನಡಪ್ರಭ' ಜೊತೆ ಮಾತನಾಡುತ್ತ ಹೇಳಿದ್ದಾರೆ.
ದೇಶದಲ್ಲಿ ಈ ಚಾರಿತ್ರಿಕ ದಿನಾಚರಣೆಯನ್ನು ಮಹಿಳಾ ಅಸ್ತಿತ್ವದ, ಸ್ವಾಭಿಮಾನದ, ವಿಮೋಚನೆಯ ಹಕ್ಕಿಗಾಗಿನ ಹೋರಾಟವಾಗಿ ಎದುರುಗೊಳ್ಳುವ ಅನಿವಾರ್ಯತೆಯಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರನ್ನು ಚುನಾವಣೆ ಕಾರ್ಯಗಳಿಗೆ ನಿಯೋಜಿಸಲಾಗುತ್ತಿರುವ ಸಂದರ್ಭದಲ್ಲೇ ಮಹಿಳಾಪರ ಹೋರಾಟ ಆಯೋಜಿತವಾಗಿದೆ. ಈ ಹೋರಾಟದಲ್ಲಿ ಚುನಾವಣೆ ಮತಗಟ್ಟೆ ಕೆಲಸಗಳಿಗೆ ಮಹಿಳೆಯರನ್ನು ನಿಯೋಜಿಸುವಾಗ ಜಿಲ್ಲಾಡಳಿತ ಅನುಸರಿಸಬೇಕಾದ ಹಲವು ಕ್ರಮಗಳನ್ನು ಹಕ್ಕೊತ್ತಾಯ ರೂಪದಲ್ಲಿ ಪಟ್ಟಿ ಮಾಡಿ ಅವುಗಳನ್ನು ಈಡೇರಿಸಿದರೆ ಮಾತ್ರ ಮಹಿಳೆಯರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸಿ, ಇಲ್ಲದಿದ್ದರೆ ಬೇಡ ಎಂದೂ ಎಚ್ಚರಿಸಲು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಯಲಿದೆ ಎಂದು ಕೆ.ನೀಲಾ ಹೇಳಿದ್ದಾರೆ.
ಕೆಲಸದ ಸ್ಥಳದಲ್ಲಿಲ್ಲ ರಕ್ಷಣೆ: ದುಡಿಮೆಗೆ ಮಹಿಳೆ ಬೇಕು. ಆದರೆ ಅವಳ ಹಕ್ಕುಗಳ ರಕ್ಷಣೆಯ ಹೊಣೆಗಾರಿಕೆಯನ್ನು ಸಮಾಜ, ಕುಟುಂಬ, ಪ್ರಭುತ್ವವಾಗಲಿ ಹೊರುವುದಿಲ್ಲ. ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡಲಾಗುತ್ತಿದೆ. ಉದ್ಯೋಗಸ್ಥ ಮಹಿಳೆ ಸಹ ಇದಕ್ಕೆ ಹೊರತಿಲ್ಲ. ಆಸ್ತಿಯ ಹಕ್ಕಿನಿಂದಲೂ ಆರ್ಥಿಕ ಸ್ವಾತಂತ್ರ್ಯದಿಂದಲೂ ಮಹಿಳೆಯನ್ನು ವಂಚಿಸಲಾಗುತ್ತಿದೆ.
ಶೇ.95ರಷ್ಟು ಪ್ರದೇಶದಲ್ಲಿ ಶೌಚಾಲಯಗಳಿಲ್ಲ. ಇದರಿಂದಾಗಿಯೂ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ. ಚುನಾವಣೆ ಮತ್ತಿತರ ಕೆಲಸಗಳಿಗೆ ಮಹಿಳಾ ಉದ್ಯೋಗಿಗಳು ಅಂಗನವಾಡಿಯ ಅಕ್ಕಂದಿರು ಬೇಕು. ಆದರೆ ಕೆಲಸದ ಸ್ಥಳ ಸುರಕ್ಷಿತ ಹಾಗೂ ಮೂಲ ಸೌಲಭ್ಯದಿಂದ ಕೂಡಿರುವುದಿಲ್ಲ. ಇದರಿಂದಾಗಿ ಮಹಿಳೆಯರು ನಾನಾ ನಮೂನೆಯ ಹಿಂಸೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂಬುದು ನೀಲಾ ಅವರ ಪ್ರಶ್ನೆ.
ಇಂದು ಪ್ರತಿಭಟನೆ: ಬುಧವಾರ ಇಡೀ ದಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಧರಣಿ ನಡೆಸುವುದಲ್ಲದೆ ಮಧ್ಯಾಹ್ನ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುತ್ತದೆ ಎಂದಿದ್ದಾರೆ.
ಸಮುದಾಯ, ಭಾರತ ಜ್ಞಾನ ವಿಜ್ಞಾನ ಸಮಿತಿ, ಸರ್ಕಾರಿ ನೌಕರರ ಒಕ್ಕೂಟ, ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಖಾಸಗಿ/ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘ, ಖಾಸಗಿ/ಅನುದಾನಿಕ ಪ್ರೌಢ ಶಾಲಾ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘ, ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯರ ಸಂಘ, ಸರ್ಕಾರಿ ಪಪೂ ಕಾಲೇಜು ಶಿಕ್ಷಕರ ಸಂಘ, ಖಾಸಗಿ/ಅನುದಾನಿತ ಪಪೂ ಶಿಕ್ಷಕರ ಸಂಘ, ಈಶಾನ್ಯ ವಲಯ ಶಿಕ್ಷಕರ ವೇದಿಕೆ, ಗುವಿವಿ ಖಾಸಗಿ ಕಾಲೇಜು ಅಧ್ಯಾಪಕರ ಸಂಘ, ಬಿಜಾಪುರ ವಿವಿ ಖಾಸಗಿ ಕಾಲೇಜು ಅಧ್ಯಾಪಕರ ಸಂಘ, ಅಖಿಲ ಭಾರತ ಜೀವ ವಿಮಾ ನೌಕರರ ಸಂಘ, ಸಾಮಾಜಿಕ ಪರಿವರ್ತನಾ ಜನಾಂದೋಲನ, ಗೃಹ ಕಾರ್ಮಿಕರ ಯುನಿಯನ್ ಮಹಿಳಾ ದಿನದ ಹೋರಾಟಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ಹಕ್ಕೊತ್ತಾಯಗಳು...
1. ಚುನಾವಣೆ ಕಾರ್ಯಕ್ಕೆ ಸರ್ಕಾರಿ ಸಿಬ್ಬಂದಿ ನೇಮಿಸಲೇಬೇಕು. ಆದರೆ ಮಹಿಳೆಯರನ್ನು ಕಳಿಸುವಾಗ ಮತಗಟ್ಟೆ ವ್ಯಾಪ್ತಿಯಲ್ಲಿ ಶೌಚಾಲಯ, ಸ್ನಾನಗೃಹ ಮತ್ತು ಉಳಿದುಕೊಳ್ಳಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕು.
2. ಮತದಾನದ ವೇಳೆ ಮತಗಟ್ಟೆ ಕಾರ್ಯನಿಮಿತ್ತ ನಿಯೋಜಿಸಬೇಕಾದಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಇರುವಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆ ಕನಿಷ್ಠ ಇಬ್ಬರು ಮಹಿಳಾ ಪೊಲೀಸರನ್ನು ನಿಯೋಜಿಸಬೇಕು.
3. ಬಸುರಿ, ಬಾಣಂತಿಯರು ಅಥವಾ ತೀವ್ರ ಅನಾರೋಗ್ಯ ಎದುರಿಸುತ್ತಿರುವ ಮಹಿಳೆಯರಿಗೆ ಕೆಲಸದಿಂದ ವಿನಾಯ್ತಿ ಕೊಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

