ಮಲ್ಲಿಕಾರ್ಜುನ ಖರ್ಗೆ ಗೆಲವಿಗೆ ಪಾಲಿಕೆ ಸದಸ್ಯರ ಪ್ರಮಾಣ
ಕಾಂಗ್ರೆಸ್, ಪಕ್ಷೇತರವಾಗಿ ಆಯ್ಕೆಯಾದ 25 ಸದಸ್ಯರು ಒಕ್ಕೊರಲಿನ ಮಾತು ಬಿಜೆಪಿಗೆ ಸಿದ್ಧಾಂತವಿಲ್ಲ: ಕುರಕುಂದಾ ಟೀಕೆ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.23
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಶಕ್ತಿಮೀರಿ ಶ್ರಮವಹಿಸಿ ಆಯ್ಕೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ಪ್ರಮಾಣ ಮಾಡಿದರು.
ಸಭೆಯಲ್ಲಿ ಪಾಲಿಕೆಯ ಕಾಂಗ್ರೆಸ್ ಮತ್ತು ಪಕ್ಷೇತರವಾಗಿ ಆಯ್ಕೆಯಾದ 25 ಸದಸ್ಯರು ಒಕ್ಕೊರಲಿನಿಂದ ಪ್ರಮಾಣ ಮಾಡಿ ಅಭ್ಯರ್ಥಿ ಗೆಲವಿಗೆ ಎಲ್ಲರೂ ಶ್ರಮಿಸುವುದಾಗಿ ಹೇಳಿದರು. ಸಭೆಯಲ್ಲಿ ಮಾತನಾಡಿದ ಖರ್ಗೆ, ತಾವು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪಾಟೀಲ ಪುಟ್ಟಪ್ಪ ಸೇರಿ ನಾಡಿನ ಗಣ್ಯರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಹೇಳುತ್ತಿದ್ದಾರೆ. ಭಾರಿ ಬಹುಮತದಿಂದ ಆಯ್ಕೆ ಮಾಡಿದರೆ ಅದೇ ಅವಿರೋಧ ಆಯ್ಕೆಯಾದಂತೆ ಎಂದರು.
ವಿಶ್ವಾಸ ತಮಗಿದೆ: ಕೇಂದ್ರದಲ್ಲಿ ಕಾರ್ಮಿಕ ಮತ್ತು ರೇಲ್ವೆ ಸಚಿವನಾಗಿ ಮಾಡಿರುವ ಕೆಲಸಗಳು ಜನರ ಮುಂದೆಯೇ ಇವೆ. ಅಭಿವೃದ್ಧಿ ಪರ ವ್ಯಕ್ತಿಯನ್ನು ಆಯ್ಕೆ ಮಾಡುವ ಹೊಣೆ ಮತದಾರರ ಮೇಲಿದ್ದು, ಅದನ್ನು ತೋರಿಸುವ ಕಾಲ ಈಗ ಬಂದಿದೆ. ಮತದಾರರು ಸಕಾರಾತ್ಮಕ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಪಾಲಿಕೆ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಪಾಟೀಲ್ ಕುರಕುಂದಾ ಮಾತನಾಡಿ, ನಮ್ಮದು ಸಿದ್ಧಾಂತ, ಅಭಿವೃದ್ಧಿ ಆಧಾರಿತ ಮತಯಾಚನೆಯಾಗಿದ್ದು, ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲದೆ ಇರುವುದರಿಂದ ವ್ಯಕ್ತಿಯೊಬ್ಬರನ್ನು ಮುಂದೆ ಮಾಡಿ ಮತ ಯಾಚಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದ್ದು ಎಂದರು.
ಬಾಲಿಶತನದ ಹೇಳಿಕೆ: ಖರ್ಗೆ ಅವರ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳದೇ ಬಿಜೆಪಿ ಅಭ್ಯರ್ಥಿ ರೇವುನಾಯಕ ಆ ಕೆಲಸಗಳಲ್ಲಿ ತಮ್ಮದು ಪಾಲಿದ್ದು, ಭೂಮಿ ನೀಡಿದ್ದಾಗಿ ಹೇಳಿಕೆ ನೀಡುತ್ತಿರುವುದು ಬಾಲಿಶತನದಿಂದ ಕೂಡಿದೆ. ಕೇಂದ್ರ ಯೋಜನೆಗಳಿಗೆ ಉಚಿತವಾಗಿ ಭೂಮಿ ನೀಡಬೇಕೆಂಬ ಷರತ್ತು ಇರುತ್ತದೆ. ಅದರನ್ವಯ ಸರ್ಕಾರಿ ಭೂಮಿ ನೀಡಿದ್ದಾರೆ ಹೊರತು ಅವರ ಸ್ವಂತ ಜಾಗ ಅಲ್ಲ ಎಂದು ತಿರುಗೇಟು ನೀಡಿದರು.
ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಸಂಸದ ಇಕ್ಬಾಲ್ ಅಹ್ಮದ ಸರಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗನಘಡ ಸಂಕನೂರ, ಮಹ್ಮದ್ ಅಸಗರ್ ಚುಲಬುಲ್, ಮಾಜಿ ಮೆಯರ್ ಬಾಬು ಒಂಟಿ ಇತರರು ಇದ್ದರು.
ಜಿಲ್ಲಾ ಕಾಂಗ್ರೆಸ್ ವಕ್ತಾರರ ನೇಮಕ
ಗುಲ್ಬರ್ಗ: ಜಿಲ್ಲಾ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪಕ್ಷದ ಪರವಾಗಿ ಹೇಳಿಕೆ ನೀಡಲು, ಪಕ್ಷದ ತತ್ವ ಸಿದ್ಧಾಂತಗಳ ಚೌಕಟ್ಟಿನಲ್ಲಿ ಪಕ್ಷದ ಪ್ರಚಾರ ಹೇಳಿಕೆಗಳನ್ನು ನೀಡುವ ಅಧಿಕಾರ ನೀಡುತ್ತ ಡಿಸಿಸಿ ಪ್ರ. ಕಾರ್ಯದರ್ಶಿ ಭೀಮರೆಡ್ಡಿ ಕುರಕುಂದಾ, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸಗರ್ ಚುಲಬುಲ್ ಇವರನ್ನೊಳಗೊಂಡ ವಕ್ತಾರರ ಸಮಿತಿ ರಚಿಸಿದೆ. ಈ ಕುರಿತಂತೆ ಭಾನುವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭಾಗಣಗೌಡ ಸಂಕನೂರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ಹೇಳಿಕೆ ನೀಡುವ, ವಿರೋಧ ಪಕ್ಷದವರು ನೀಡುವ ಹೇಳಿಕೆಗಳಿಗೆ ಕಾಂಗ್ರೆಸ್ ಸಿದ್ಧಾಂತದ ಅಡಿಯಲ್ಲಿ ಉತ್ತರಿಸುವ, ಪ್ರತ್ಯುತ್ತರ ನೀಡುವುದು ಸೇರಿದಂತೆ ಪಕ್ಷದ ಪರವಾಗಿ ಪ್ರಚಾರಕ್ಕೆ ಲೋಕಸಭಾ ಕ್ಷೇತ್ರಕ್ಕೆ ಬರುವ ನಾಯಕರ ಮಾಹಿತಿ ನೀಡುವುದು ಇತ್ಯಾದಿ ಕೆಲಸಕಾರ್ಯಗಳನ್ನು ಈ ಸಮಿತಿಯಲ್ಲಿನ ವಕ್ತಾರರು ಮಾಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

