ಗುಲ್ಬರ್ಗಾ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಲಾಖೆ ಸಕಲ ಸಜ್ಜು

Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ  ಯಾದಗಿರಿ  ಮಾ.27
ಇಂದಿನಿಂದ ಪ್ರಾರಂಭವಾಗುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.
ಜಿಲ್ಲಾದ್ಯಂತ ಒಟ್ಟು 39 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾದಗಿರಿ ತಾಲ್ಲೂಕಿನಲ್ಲಿ 16, ಸುರಪುರ 12, ಶಹಾಪುರ 11 ಕೇಂದ್ರಗಳನ್ನು ತೆರೆಯಲಾಗಿದೆ.
  ಒಟ್ಟು 189 ಶಾಲೆಗಳ ವಿದ್ಯಾರ್ಥಿಗಳು, ಅದರಲ್ಲಿ ಶಹಾಪುರದಿಂದ 60, ಸುರುಪುರದಿಂದ 64 ಮತ್ತು ಯಾದಗಿರಿಯಿಂದ 65 ಶಾಲೆಗಳ ಒಟ್ಟು 10610 ವಿದ್ಯಾರ್ಥಿಗಳು. ಇದರಲ್ಲಿ  5986 ಬಾಲಕರು, 4184 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ ಕಳೆದ ಬಾರಿ ಅನುತ್ತೀರ್ಣರಾದ 440 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.
  ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿದ್ದು, ಅದರಲ್ಲಿ ಮಾಧವವಾರ, ಕಂದಕೂರ ಮತ್ತು ನಗರದ ಡಾನ ಬಾಸ್ಕೋ ಶಾಲೆಗಳ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮವೆಂದು ಗುರ್ತಿಸಿಲಾಗಿದೆ. ಒಟ್ಟು 4140 ವಿದ್ಯಾರ್ಥಿಗಳಲ್ಲಿ 2529 ಬಾಲಕರು, 1912 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. 33 ಕೆಇಎಸ್ ಸಿಟಿಂಗ್ ಜಾಗೃತ ದಳ ನೇಮಿಸಲಾಗಿದೆ ಎಂದು ಯಾದಗಿರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣನ್ ಪ್ರಭು ತಿಳಿಸಿದ್ದಾರೆ.
ಶಹಾಪುರ ವರದಿ: ಒಟ್ಟು 11 ಕೇಂದ್ರ ಪರೀಕ್ಷಾ ಕೇಂದ್ರಗಳಿದ್ದು, ಅದರಲ್ಲಿ ವಡಗೇರಾ, ಸಗರ, ಕನ್ಯಾಗೋಗಿ,  ಢೋರನಹಳ್ಳಿ ಶಾಲೆಗಳ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮವೆಂದು ಗುರಿತಿಸಿಲಾಗಿದೆ.
  ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರಿಕ್ಷೆಗಾಗಿ ಒಟ್ಟು 3001 ವಿದ್ಯಾರ್ಥಿಗಳು ಇದ್ದು, 1759 ಬಾಲಕರು, 1242 ಬಾಲಕಿಯರು ಇದ್ದು, ಇದರಲ್ಲಿ 69 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ. ಒಟ್ಟು 60 ಶಾಲೆಗಳನ್ನು ಸಂಬಂಧಿಸಿದ 11ಕೇಂದ್ರಗಳಿಗೆ ಹೊಂದಾಣಿಕೆ ಮಾಡಲಾಗಿದೆ. 129 ಕೋಣೆಗಳನ್ನು ಕಲ್ಪಿಸಲಾಗಿದೆ. 10 ಜನ ಮುಖ್ಯ ಅಧೀಕ್ಷಕರು, 22 ಜನ ಕಾಯಂ ಜಾಗೃತ ದಳದವರು 169 ಜನ ಕೋಣೆಯ ಮೇಲ್ವಿಚಾರಕರನ್ನು ಪರಿಕ್ಷೆಯ ವ್ಯವಸ್ಥೆಗಾಗಿ ಕಲ್ಪಿಸಲಾಗಿದೆ. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಯರೆಡ್ಡಿ ತಿಳಿಸಿದ್ದಾರೆ.
ಸುರಪುರ ವರದಿ: ತಾಲೂಕಿನ 12 ಪರೀಕ್ಷಾ ಕೇಂದ್ರಗಳಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 3482 ವಿದ್ಯಾರ್ಥಿಗಳಲ್ಲಿ 2025 ಬಾಲಕರು, 1457 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.
  ತಾಲೂಕಿನ 12 ಕೇಂದ್ರಗಳ ಪೈಕಿ ಸುರಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು, ರಂಗಂಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ, ಕೆಂಭಾವಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜುಕಾಲೇಜು, ಹುಣಸಗಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾರಾಯಣಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕಕ್ಕೇರಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಒಟ್ಟು 7 ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳು ಎಂದು ಗುರುತಿಸಲಾಗಿದೆ ಎಂದು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ತಿಳಿಸಿದ್ದಾರೆ.
ತನಿಖಾ ದಳ ರಚನೆ: ಜಿಲ್ಲಾ ಮಟ್ಟದಲ್ಲಿ ಡಿಡಿಪಿಐ ಮತ್ತು ಅಕ್ಷರ ದಾಸೋಹ ಅಧಿಕಾರಿಗಳ ನೇತೃತ್ವದಲ್ಲಿ ಎರಡು ಜಾಗೃತ ದಳ ರಚಿಸಲಾಗಿದ್ದು, ಅಂತರ ಜಿಲ್ಲಾ ಮಟ್ಟದ ತಂಡ,  ವಿಭಾಗೀಯ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತ ತಂಡ ಹಾಗೂ ಆಯಾ ತಾಲೂಕುಗಳಲ್ಲಿ ಸ್ಥಾನಿಕ ಜಾಗೃತ ದಳ ನೇಮಿಸಲಾಗಿದೆ. ಇದರ ಜೊತೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಚಾರಿ ಜಾಗೃತ ದಳ ಹಾಗೂ ಮೊಬೈಲ್ ಜಾಗೃತ ದಳವನ್ನು ಸಹ ರಚಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದ ಹಾಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ.
  ಪರೀಕ್ಷಾ ದಿನಗಳ ನಡುವೆ ಯುಗಾದಿ ಹಬ್ಬ, ಭಾನುವಾರ ಸೇರಿದಂತೆ ಮತ್ತಿತರರ ಕಾರಣಗಳಿಗಾಗಿ ಆರು ದಿನಗಳ ರಜೆ (ಮಾ.30. 31, ಏಪ್ರಿಲ್ 2, 5, 6, ಮತ್ತು 8) ದೊರೆಯಲಿದೆ. ಸಂಗೀತ ಹಾಗೂ ಎಂಜಿಯರಿಂಗ್ ಡ್ರಾಯಿಂಗ್ ವಿಷಯಗಳ ಹೊರತು ಪಡಿಸಿ ಉಳಿದ ಎಲ್ಲ ಪರೀಕ್ಷೆಗಳು ಬೆ.9.30ರಿಂದ 12.45ರವರೆಗೆ ನಡೆಯಲಿವೆ.

ಗುಲ್ಬರ್ಗ ಜಿಲ್ಲೆಯಲ್ಲಿ 36,450 ಮಕ್ಕಳು, 121 ಪರೀಕ್ಷಾ ಕೇಂದ್ರ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮಾ.27
ರಾಜ್ಯಾದ್ಯಂತ ಶುರುವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಗುಲ್ಬರ್ಗದಲ್ಲಿ ಸಕಲ ಸಿದ್ಧತೆಗಳಾಗಿವೆ. ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ನಕಲು ಮುಕ್ತವಾಗಿ ನಡೆಸಲು ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಈ ಬಾರಿ ಸೂಕ್ಷ್ಮ, ಅತಿಸೂಕ್ಷ್ಮ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿಯೂ ವಿಂಗಡಣೆ ಮಾಡಲಾಗಿದ್ದು, ಇಲ್ಲೆಲ್ಲಾ ನಕಲು ನಡೆಯದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಂಡಿದೆ.
  ಜಿಲ್ಲೆಯಲ್ಲಿ 121 ಪರೀಕ್ಷಾ ಕೇಂದ್ರಗಲಿದ್ದು, 36, 450 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. 23 ಪರೀಕ್ಷಾ ಕೇಂದ್ರಗಳನ್ನ ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇಲ್ಲಿನ ಪರೀಕ್ಷಾ ಪ್ರಕ್ರಿಯನ್ನೆಲ್ಲ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಡಿಡಿಪಿಐ ಜಿ.ಎಸ್. ಪರಮೇಶ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ನೀರು- ಆಸನ ಸೌಕರ್ಯ: ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು ಹಾಗೂ ಆಸನ ಸೌಕರ್ಯ ಒದಗಿಸಲಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಪರಮೇಶ ಹೇಳಿದ್ದಾರೆ.
  ಬೇಸಿಗೆ ಕಾರಣ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಶುದ್ಧ ಕುಡಿಯುವ ನೀರು ಹಾಗೂ ಸೂಕ್ತ ಆಸನ ಸೌಕರ್ಯ ಒದಗಿಸಬೇಕು ಎಂಬುದು ಇಲಾಖೆಯ ಸಂಕಲ್ಪವಾಗಿದೆ. ಸ್ಥಳೀಯವಾಗಿಯೂ ಈ ಕೆಲಸ ಪಕ್ಕಾ ಆಗಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಡಿಡಿಪಿ ಪರಮೇಶ ಹೇಳಿದ್ದಾರೆ.
ಚಿತ್ತಾಪುರ ತಾಲೂಕಲ್ಲಿ 4,487 ವಿದ್ಯಾರ್ಥಿಗಳು: ತಾಲೂಕಿನಲ್ಲಿ 2013-14ನೇ ಸಾಲಿಗಾಗಿ ಮಾ. 28ರಿಂದ ಏ. 9ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು 17 ಕೇಂದ್ರಗಳಲ್ಲಿ ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ತಿಳಿಸಿದ್ದಾರೆ.
  ತಾಲೂಕಿನಲ್ಲಿ ಒಟ್ಟು 4,487 ವಿದ್ಯಾರ್ಥಿಗಳು ಪರೀಕ್ಷೆಬರೆಯುತ್ತಿದ್ದಾರೆ. ಚಿತ್ತಾಪುರ, ಶಹಾಬಾದ್, ವಾಡಿ, ಹೆಬ್ಬಾಳ, ಕಾಳಗಿ, ರಾವುರ, ನಾಲವಾರ, ಅಳ್ಳೊಳ್ಳಿ, ಗುಂಡಗುರ್ತಿ ಸೇರಿದಂತೆ 17 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತಾಲೂಕಿನಲ್ಲಿ ಒಟ್ಟು 220 ಕೊಠಡಿಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
  ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ನಕಲು ತಡೆಯುವ ನಿಟ್ಟಿನಲ್ಲಿ 17 ಚೀಫ್, 34 ಜಾಗೃತ ದಳ, 4 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಚಿತ್ತಾಪುರದ 2 ಕೇಂದ್ರ, ವಾಡಿ ಮತ್ತು ಕಾಳಗಿಯ ತಲಾ ಒಂದು ಕೇಂದ್ರವನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಿ ಅಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
  ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರಗಳನ್ನು ರವಾನಿಸಿದ್ದು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುವುದು ಎಂದು ಬನ್ನಿಕಟ್ಟಿ ತಿಳಿಸಿದ್ದಾರೆ.

ಮೊಬೈಲ್ ಬಳಕೆ ನಿಷೇಧ
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳನ್ನು ಶಾಂತಿಯುತ, ಸುಗಮವಾಗಿ ನಡೆಸಲು ಹಾಗೂ ನಕಲನ್ನು ತಡೆಯುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಪರೀಕ್ಷಾ ಸಮಯದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿಗಳ ಹಾಗೂ ಯಾವುದೇ ವ್ಯಕ್ತಿಗಳು ಮೊಬೈಲ್ ಫೋನುಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಯ ದಿನಗಳಂದು ಬೆಳಗಿನ 9.30ರಿಂದ ಮಧ್ಯಾಹ್ನ 12.45ರವರೆಗೆ, ಮ.2 ರಿಂದ ಸಂಜೆ 5.15ರವರೆಗೆ  ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಿತ ಪ್ರದೇಶವೆಂದು ಘೋಷಿಸಿ, ಆ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆರಾಕ್ಸ್ ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆಯೂ ಜಿಲ್ಲಾಧಿಕಾರಿ ಜಮಾದಾರ್ ಆದೇಶಿಸಿದ್ದಾರೆ.

ಪರೀಕ್ಷಾ ವೇಳಾ ಪಟ್ಟಿ
ಸಮಯ ಬೆ.9.30ರಿಂದ 12.45ರ ವರೆಗೆ)
 ಮಾ.28-  ಶುಕ್ರವಾರ-  ಪ್ರಥಮ ಭಾಷೆ,
 ಮಾ.29 -  ಶನಿವಾರ-   ಅರ್ಥಶಾಸ್ತ್ರ
 ಏ.1- ಮಂಗಳವಾರ-  ಗಣಿತ
 ಏ.3- ಗುರುವಾರ-   ವಿಜ್ಞಾನ, ಭಾರತೀಯ ರಾಜ್ಯ ಶಾಸ್ತ್ರ ಮತ್ತು ಪೌರನೀತಿ
 ಏ.4- ಶುಕ್ರವಾರ-  ತೃತೀಯ ಭಾಷೆ
 ಏ.7- ಸೋಮವಾರ-  ಸಮಾಜ ವಿಜ್ಞಾನ
 ಏ.9 - ಬುಧವಾರ-  ದ್ವಿತೀಯ ಭಾಷೆ

87 ವಿದ್ಯಾರ್ಥಿಗಳ ಪ್ರವೇಶ ಪತ್ರ ವಾಪಸ್
10,697 ವಿದ್ಯಾರ್ಥಿಗಳಲ್ಲಿ 87 ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಹಾಜರಾತಿ ಕಡಿಮೆ ಹಾಗೂ ಇನ್ನಿತರ ಕಾರಣಗಳಿಂದ ವಾಪಸ್ಸಾಗಿವೆ. ಪ್ರವೇಶ ಪತ್ರ ವಾಪಸ್ಸಾದ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗಳು ಬರೆಯುತ್ತಿಲ್ಲ. ಜಿಲ್ಲೆಯಲ್ಲಿ 10,610 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುತ್ತಿದ್ದಾರೆ.
 ಟಿ.ರಾಮಲಿಂಗಪ್ಪ, ವಿಷಯ ಪರಿವೀಕ್ಷಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.