ಗುಲ್ಬರ್ಗಾ

ಮನೆಗೆ ಹೋಗಲಾಗುತ್ತಿಲ್ಲ,ಅಲ್ಲೇ ಇರಲೂ ಜಾಗವಿಲ್ಲ!

Published On :

ಚಿತ್ತಾಪುರ: ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಿರ್ಮಾಣವಾದ ಪಟ್ಟಣದ ಮಹಾದ್ವಾರದಲ್ಲಿ ಚರಂಡಿ ಒಡೆದ ಪರಿಣಾಮ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ನಿತ್ಯ ಸುಮಾರು ನಾಲ್ಕೈದು ಸಾವಿರ ಜನರು ಸಂಚರಿಸುವ ಮಹಾದ್ವಾರದಲ್ಲಿ ನಿರ್ಮಾಣ ಮಾಡಿರುವ ಚರಂಡಿ ಕಳಪೆ ಕಾಮಗಾರಿಯ ಕೃಪೆಯಿಂದ ಕಳೆದ 6 ತಿಂಗಳ ಹಿಂದೆಯೇ ಒಡೆದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆಗ ಜನರ ಒತ್ತಾಯದ ಮೇರೆಗೆ ಗ್ರಾಪಂ ಒಂದು ಬಾರಿ ದುರಸ್ತಿ ಮಾಡಿತ್ತು. ಭಾರಿ ವಾಹನಗಳು ಒಡಾಡುವ ಪ್ರಯುಕ್ತ ಮತ್ತೆ ಚರಂಡಿ ಕುಸಿದು ಸಂಚಾರ ಸ್ಥಗಿತಗೊಂಡಿದೆ. ರೈತರು ಹೊಲಗಳಿಗೆ ಹೋಗಿ ಬರುವಷ್ಟರಲ್ಲಿ ದ್ವಾರಬಾಗಿಲಲ್ಲಿ ತಗ್ಗು ಗೋಚರವಾಗಿತ್ತು. ಎತ್ತಿನ ಬಂಡಿ, ಜಾನುವಾರುಗಳು, ಮಾಗಿ ಉಳುಮೆಯ ಸಾಮಾನುಗಳನ್ನು ಮನೆಗಳಿಗೆ ಸಾಗಿಸಲು ಆಗದೆ, ಇಲ್ಲಿಯೇ ಇರಿಸಿ ಅತ್ತ ಮನೆಗೂ ಹೋಗಲು ರಸ್ತೆಯಿಲ್ಲದೆ, ಅಲ್ಲಿಯೇ ಇರಲು ಜಾಗವಿಲ್ಲದೆ ಪರದಾಡುವಂತಾಗಿತ್ತು.
ಅಭಿವೃದ್ಧಿ ಕನಸು ನುಚ್ಚುನೂರು: ಜಿಪಂ ಅಧ್ಯಕ್ಷರ, ತಾಪಂ ಹಾಗೂ ಗ್ರಾಪಂ ಕೇಂದ್ರವಾದ ಈ ಗ್ರಾಮವು ಇಲ್ಲಿ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ. ರಮೇಶ ಮರಗೋಳ ಜಿಪಂ ಅಧ್ಯಕ್ಷರಾದ ಮೇಲೆ ಕೇಂದ್ರ ಸ್ಥಾನ ಅಭಿವೃದ್ಧಿ ಹೊಂದಬಹುದು ಎಂಬ ಇಲ್ಲಿನ ಜನರ ಕನಸು ಚರಂಡಿ ಒಡೆದು ಸಂಚಾರ ಬಂದಾಗಿದ ಮೇಲೆ ನುಚ್ಚುನೂರಾಗಿದೆ.
ದೀಪದ ಕೇಳಗೆ ಕತ್ತಲು ಎಂಬಂತೆ ಈ ಮೂರು ಕೇಂದ್ರ ಸ್ಥಳಗಳು ಹೊಂದಿದ್ದರೂ ಕೇವಲ 8 ಅಡಿ ಉದ್ದದ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಕಾರಣ ಜನ ತಿರುಗಾಡಲು ಹರಸಾಹಸ ಪಡಬೇಕಾಗಿದೆ. ದ್ವಾರ ಬಾಗಿಲಿನ ಒಳಗೆ ಇರುವ ಜನ ಹೊರಗೆ ಬರಲಾಗುತ್ತಿಲ್ಲ. ಹೊರಗಿರುವ ಜನ ಒಳಗೆ ಪ್ರವೇಶ ಮಾಡಲಾಗುತ್ತಿಲ್ಲ. ಇಷ್ಟಕ್ಕೆಲ್ಲ ಕಾರಣ ಗ್ರಾಪಂ, ತಾಪಂ ಮತ್ತು ಜಿಪಂ ನೇರ ಹೊಣೆ ಎಂಬ ಮಾತು ಇಲ್ಲಿ ನೆರೆದಿದ್ದ ಜನರ ಬಾಯಲ್ಲಿ ಹರಿದಾಡುತ್ತಿತ್ತು.
ಪಿಡಿಒ ಭರವಸೆ: ಪಿಡಿಒ ರಮೇಶ ಶುಲ್ಪಿ ಸ್ಥಳಕ್ಕೆ ಆಗಮಿಸಿ ಸದ್ಯ ತಾತ್ಕಾಲಿಕವಾಗಿ ಜನ ಸಂಚಾರಕ್ಕೆ ಸುಗಮ ದಾರಿ ಕಲ್ಪಸಿ, ಮೇ 6ರ ನಂತರ ತುರ್ತು ಸಭೆ ಕರೆದು 15 ದಿನಗಳೊಳಗಾಗಿ ಶಾಶ್ವತವಾಗಿ ಸುಗಮವಾದ ದಾರಿ ಮಾಡಲಾಗುವುದು ಎಂದರು. ಪಿಡಿಒ ಹೇಳಿಕೆ ಕೇಳಿ ರಾಜಕೀಯ ನಾಯಕರಿಗೆ ಹಿಡಿ ಶಾಪ ಹಾಕುತ್ತಿದ್ದ ಜನ ನಿಟ್ಟುಸಿರು ಬಿಟ್ಟು ಸದ್ಯ ಇವತ್ತು ಮನೆ ಸೇರೋದು ಗ್ಯಾರಂಟಿ ಎಂಬ ಮಾತು ಅಲ್ಲಿ ನೆರೆದ ಜನರ ಬಾಯಲ್ಲಿ ಕೇಳಿಬರುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.