ಮುಖಂಡರ ವಿರುದ್ಧ ಕಾಲುವೆ ರೈತರು ಗರಂ
ಕನ್ನಡಪ್ರಭ ವಾರ್ತೆ, ಹುಣಸಗಿ, ಮೇ 18
ನಾರಾಯಣಪುರ ಕೃಷ್ಣಾ ಭಾಗ್ಯ ಜಲ ನಿಗಮದ ವಲಯದ ಪಾಲನಾ ಪೋಷಣಾ ವಲಯದಲ್ಲಿ ನಾಲ್ಕು ವಿಭಾಗಗಳು ಕಾಲುವೆ ನಿರ್ವಹಣೆ ಮಾಡುತ್ತಿವೆ. ಪ್ರತಿವರ್ಷ ಬೇಸಿಗೆಯಲ್ಲಿ ಕಾಲುವೆ ಸ್ವಚ್ಛತೆ ಹಾಗೂ ದುರಸ್ತಿಗಾಗಿ ಟೆಂಡರ್ ಕರೆಯಲಾಗುತ್ತಿತ್ತು. ಆದರೆ ಈ ಬಾರಿ ಹುಣಸಗಿಯ ವಿಭಾಗಕ್ಕೆ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗದಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾರಾಯಣಪುರ ವಿಭಾಗಕ್ಕೆ 4.50 ಕೋಟಿ ನೀಡಲಾಗಿದೆ. ಆದರೆ ಒಂದೂವರೆ ಲಕ್ಷ ಎಕರೆಗೆ ನೀರುಣಿಸುವ, 14 ವಿತರಣಾ ಕಾಲುವೆಗಳನ್ನು ಹೊಂದಿರುವ ಹುಣಸಗಿ ವಿಭಾಗಕ್ಕೆ ಏನೂ ನೀಡಿಲ್ಲ. ಅನುದಾನ ಕೇಳಿದ್ದೇವೆ. ಆದರೆ ಈವರೆಗೆ ಬಂದಿಲ್ಲ ಎಂದು ಹುಣಸಗಿ ಇಇ ಅರುಣಕುಮಾರ ಸ್ಪಷ್ಟಪಡಿಸಿದ್ದಾರೆ.
ಅವಶ್ಯಕತೆ ಇಲ್ಲ: ಆದರೆ ಈ ವರ್ಷ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಅನುದಾನದ ಮೂಲಕ ಮುಖ್ಯ ಕಾಲುವೆಗಳ ನವೀಕರಣ ನಡೆದಿದೆ. ಈ ವರ್ಷ, ಹಿಂದಿನ ವರ್ಷದಷ್ಟು ಅನುದಾನ ನೀಡುವ ಅವಶ್ಯಕತೆ ಇಲ್ಲ ಎಂದು ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಡಿತ ಸರಿಯಲ್ಲ್ಲ: ನವೀಕರಣಕ್ಕೆ ಆಯ್ಕೆ ಮಾಡಿಕೊಳ್ಳದ ಕಾಲುವೆಗಳ ವಾರ್ಷಿಕ ನಿರ್ವಹಣೆ ಅಗತ್ಯವಿದೆ ಎಂಬುದು ರೈತರು ಆಗ್ರಹವಾಗಿದೆ. ನವೀಕರಣ ಕೈಗೆತ್ತಿಕೊಳ್ಳುವವರಿದ್ದೇವೆ ಎಂಬ ನೆಪ ಮತ್ತು ಅಲ್ಲಿ ಕಾಲುವೆಗಳ ದುರಸ್ತಿಯ ಅವಶ್ಯಕತೆ ಇಲ್ಲಾ ಎಂದು ಅನುದಾನ ಕಡಿತಗೊಳಿಸುವುದು ಸರಿಯಲ್ಲ್ಲ. ಇನ್ನು ಕಾಮಗಾರಿ ನಮಗೆ ಸಿಗಬೇಕು ಎಂದು ಓಡಾಡುವ ಅಧಿಕಾರಸ್ಥರು ಮತ್ತು ಗುತ್ತಿಗೆದಾರರ ತಂಡ ಕೂಡಾ ನಿರ್ಲಿಪ್ತರಾಗಿರುವುದು, ರೈತರಲ್ಲಿ ಜಿಗುಪ್ಸೆ ತಂದಿದೆ.
ಯಾಕೆ ಅರ್ಥವಾಗುತ್ತಿಲ್ಲ? ವಿತರಣಾ ಕಾಲುವೆಗಳ ನವೀಕರಣ ಕೈಗೊಳ್ಳಲು ಇನ್ನೂ ಒಂದು ವರ್ಷ ಇದೆ. ಅಲ್ಲಿಯವರೆಗೆ ರೈತರಿಗೆ ಸರಾಗವಾಗಿ ನೀರು ಹರಿಯಬೇಕು. ಇದು ನಿಗಮ ಮುಖ್ಯಸ್ಥರಿಗೆ ಯಾಕೆ ಅರ್ಥವಾಗುತ್ತಿಲ್ಲ? ವಜ್ಜಲ್, ಯಡಹಳ್ಳಿ, ಕಚಕ್‌ನೂರು, ಬೈಲಾಪುರ, ನಡಕೂರು, ಬೈಚಬಾಳ, ಕೂಡಲಗಿ, ಗುಳಬಾಳ, ತೆಗ್ಗೆಳ್ಳಿ, ಅಗತೀರ್ಥ, ಅರಕೇರಾ(ಜೆ), ಸೇರಿದಂತೆ ಕಾಲುವೆಗಳು ಜಾಲಿ, ಕಸದಿಂದ ಮುಚ್ಚಿದ್ದು, ಅನೇಕ ಕಡೆ ಅಡ್ಡಸೇತುವೆಗಳು ಹಾಳಾಗಿವೆ.
ಉಗ್ರ ಹೋರಾಟ: ಈ ಗ್ರಾಮಗಳ ಜಮೀನುಗಳಿಗೆ ನೀರು ತಲುಪುವ ಯಾವುದೇ ಭರವಸೆ ಇಲ್ಲ. ಹೀಗಿರುವಾಗ ಹುಣಸಗಿ ವಿತರಣಾ ವಿಭಾಗದ, ಕಾಲುವೆ ನಿರ್ವಹಣೆಗೆ ಒಂದು ರೂಪಾಯಿಯನ್ನೂ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಲೋಸರ್ ಅವಧಿಗೆ ಉಳಿದ ವಿಭಾಗ ಕಚೇರಿಗೆ ನೀಡಿದಂತೆ ನಮ್ಮ ಹುಣಸಗಿ ವಿಭಾಗ ಕಚೇರಿಗೂ ಅನುದಾನ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ ಹುಣಸಗಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

