ಗುಲ್ಬರ್ಗಾ

ಸಿಡಿಲು- ಮಳೆಗೆ ಒಬ್ಬ ಬಲಿ, ನಾಲ್ವರಿಗೆ ಗಾಯ

Published On :

ಹುಮನಾಬಾದ್: ತಾಲೂಕಿನ ಹಲವೆಡೆ ಬಿರುಗಾಳಿ  ಸಹಿತ ಮಳೆ, ಸಿಡಿಲಿಗೆ ವ್ಯಕ್ತಿಯೊಬ್ಬ ಮೃತಪಟ್ಟು ನಾಲ್ಕು ಜನರಿಗೆ ತೀವ್ರ ಗಾಯಗೊಂಡಿದ್ದಾರೆ. ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು ಮರಗಳು ಉರುಳಿ ಬಿದ್ದಿರುವ ಘಟನೆ ಗುರುವಾರ ಸಂಜೆ ನಡೆದಿದೆ.
  ತಾಲೂಕಿನ ಮಲಕಾಪುರ ವಾಡಿ ಗ್ರಾಮದ ಭೀಮಶಾ ವೆಂಕಪ್ಪ ಗಿರಿಗಿರಿ(45)ಮೃತನು. ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಈತ ಹುಮನಬಾದ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಪ್ರತ್ಯೇಕ ಘಟನೆ: ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಜಮೀನೊಂದರಲ್ಲಿ ಕೆಲಸ ಮಾಡುತ್ತಿರುವಾಗ ಮಳೆ ಸುರಿದಿದ್ದು, ಮರದ ಕೆಳಗೆ ಆಶ್ರಯಕ್ಕೆ ನಿಂತಿದ್ದ ಮಹ್ಮದ್ ಸಿದ್ದಿಕಿ, ಮಹ್ಮದ್‌ಜಿ ಬಾಬಾ, ಸೈಯದ್ ಹುಸೇನ್ ಸೇರಿ ನಾಲ್ವರಿಗೆ ಸಿಡಿಲು ಬಡಿದು ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬನಿಗೆ ಹಳ್ಳಿಖೇಡ(ಬಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಳಕೇರಾದ ಮೋಳಗಿ ಮಾರಯ್ಯಾ ದೇವಸ್ಥಾನ ಹತ್ತಿರ ಮಡಿವಾಳಯ್ಯಾ ಸ್ವಾಮಿ ಅವರಿಗೆ ಸೇರಿದ ಎಮ್ಮೆ ಸಿಡಿಲಿಗೆ ಮೃತಪ್ಟಟಿದೆ. ತಾಲೂಕಿನ ದುಬಲಗುಂಡಿ, ಜಲಸಿಂಗಿ ಮತ್ತಿತರ ಗ್ರಾಮಗಳಲ್ಲಿ ತೋಟಗಾರಿಕೆ ಸಬಂಧಿಸಿದ ಲಕ್ಷಾಂತರು ರು. ಮೌಲ್ಯದ ಬೆಳೆ ಹಾನಿ ಸಂಭವಿಸಿರುವ ಕುರಿತು ವರದಿಯಾಗಿದೆ.
ಅಲ್ಲಲ್ಲಿ ರಭಸದ ಗಾಳಿಗೆ ಗಿಡಗಳು ನೆಲಕ್ಕುರಳಿವೆ. ತಾಲೂಕಿನಾದ್ಯಂತ ಬೀಸಿದ ಗಾಳಿ- ಮಳೆಗೆ ಲಕ್ಷಾಂತರ ಮೌಲ್ಯದ ಬೆಳೆ ಹಾಗೂ ಮತ್ತಿತರ ಹಾನಿಯಾಗಿರುವ ಕುರಿತು ವರದಿಯಾಗಿದೆ.
  ತಹಸೀಲ್ದಾರ್ ಡಿ.ಎಂ. ಪಾಣಿ, ಡಿವೈಎಸ್ಪಿ ಅಮರನಾಥ ರೆಡ್ಡಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೋವಿಂದ, ಸಿಪಿಐ ಅನೀಲಕುಮಾರ, ಪಿಎಸ್‌ಐ ಶರಣಬಸಪ್ಪ ಕೊಡ್ಲಾ, ಕಂದಾಯ ನಿರೀಕ್ಷಕ ದೀಲರಾಜ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳು ಹಲವೆಡೆ ಭೇಟಿ ಮಾಡಿ ಮಾಹಿತಿ ಕಲೆ ಹಾಕುತಿದ್ದಾರೆ. ಈ ಕುರಿತು ಹಳ್ಳಿಖೇಡ(ಬಿ) ಹಾಗೂ ಹುಮನಬಾದ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ರೈತ ಸಂಘದ ಮಾಸಿಕ ಸಭೆ ನಾಳೆ
ಬೀದರ್‌ನ ಗಾಂಧಿ ಗಂಜ್‌ನ ರೈತ ಭವನದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ ಅಧ್ಯಕ್ಷತೆಯಲ್ಲಿ ಸಂಘದ ಮಾಸಿಕ ಸಭೆ ಆಯೋಜಿಸಲಾಗಿದೆ. ಈ ಕುರಿತು ಸಂಘದ ಕಾರ್ಯದರ್ಶಿ ಪ್ರಭುರಾವ ಪಾಟೀಲ್ ಹೊನ್ನಡಿ ಪ್ರಕಟಣೆ ಹೊರಡಿಸಿ, ಅಂದು ನಡೆಯಲಿರುವ ಸಭೆಯಲ್ಲಿ ಕಬ್ಬಿನ ಹಣ ಪಾವತಿ, ಆಲಿಕಲ್ಲು ಮಳೆಯಿಂದ ಬೆಳೆಹಾನಿಯ ಪರಿಹಾರ ನೀಡುವ ಹಾಗೂ ಪಂಪಸೆಟ್‌ಗಳಿಗೆ ನಿರಂತರ ಸಮರ್ಪಕ ವಿದ್ಯುತ ಒದಗಿಸುವುದರ ಬಗ್ಗೆ ಚರ್ಚಿಸಲಾಗುವುದು. ಅಲ್ಲದೇ ಸಂಘದ ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಆದ್ದರಿಂದ ಜಿಲ್ಲೆಯ ರೈತ ಪ್ರಮುಖರು, ಜಿಲ್ಲಾ ಸಮಿತಿ ಸದಸ್ಯರು, ಪದಾಧಿಕಾರಿಗಳು ತಾಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು ಹಾಜರಾಗಬೇಕೆಂದು ಮನವಿ ಮಾಡಿದ್ದಾರೆ.
ಜನವಾಡಾದಿಂದ ಬೀದರ್ ನಗರಕ್ಕೆ ಬಸ್
ಬೀದರ್ ತಾಲೂಕಿನ ಜನವಾಡಾದಿಂದ ಬೀದರ್ ನಗರಕ್ಕೆ ಸಿಟಿ ಬಸ್ ಆರಂಭಿಸಬೇಕೆಂದು ಅಖಿಲ ಭಾರತ ಕಿಸಾನ ಸಭಾ ಆಗ್ರಹಿಸಿದೆ. ಈ ಕುರಿತು ಕಿಸಾನ ಸಭಾದ ಉಪಾಧ್ಯಕ್ಷ ಪ್ರಕಾಶ ಕುಶನೂರೆ ಅವರು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜನವಾಡಾದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ, ನಾಡ ತಹಸಿಲ್ದಾರ್ ಕಚೇರಿ ಹಾಗೂ ಆಸ್ಪತ್ರೆ ಸೇರಿದಂತೆ ಎಲ್ಲ ಸೌಲಭ್ಯ ಇದ್ದರೂ ಕೂಡ ಇಲ್ಲಿಯವರೆಗೆ ಸಾರ್ವಜನಿಕರಿಗೆ ಹೋಗಿ ಬರಲು ಬಸ್ಸಿನ ಸೌಲಭ್ಯ ಇಲ್ಲ ಎಂದಿದ್ದಾರೆ. ಜನವಾಡಾದಿಂದ ಸಿಟಿ ಬಸ್ ಆರಂಭಿಸಿದರೆ ಶಿಕ್ಷಣ ಪಡೆಯುವ ವಿಧ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಅಲ್ಲದೇ ಈ ಮಾರ್ಗದಲ್ಲಿ ಮರಖಲ, ಚಿಕ್ಕಪೇಟ ಗ್ರಾಮಸ್ಥರು ಕೂಡ ನಾಡ ತಹಸೀಲ್ ಕಛೇರಿಗೆ ಬರಲು ಸೌಲಭ್ಯ ನೀಡಿದಂತಾಗುತ್ತದೆ. ಆದ್ದರಿಂದ ದಿನಾಲು 10 ಟ್ರಿಪ್ ಸಿಟಿ ಬಸ್ ಓಡಿಸಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಖಮರುಲ್ ಇಸ್ಲಾಂ ಮೇ 31ರಂದು ಬೆ.7.30ಕ್ಕೆ ರೈಲಿನ ಮೂಲಕ ಗುಲ್ಬರ್ಗಕ್ಕೆ ಆಗಮಿಸುವರು. ಅಂದು ಬೆ. 11ರಿಂದ ಮ.1 ಗಂಟೆಯವರೆಗೆ ಸಾರ್ವಜನಿಕರನ್ನು ಭೇಟಿಯಾಗಿ ಕುಂದು ಕೊರತೆಗಳನ್ನು ಸ್ವೀಕರಿಸುವರು. ಮ.3 ಗಂಟೆಗೆ ಹೆಚ್‌ಕೆಸಿಸಿಐದಲ್ಲಿ ಭಾರತೀಯ ರಫ್ತು ನಿಗಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು. ಜೂ. 1ರಂದು ಬೆ. 10ರಿಂದ 5 ಗಂಟೆಯವರೆಗೆ ಸಾರ್ವಜನಿಕರ ಭೇಟಿ ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸಿ ವಾಸ್ತವ್ಯ ಮಾಡುವರು. ಜೂನ್ 2ರಂದು ಬೆ. 10 ರಿಂದ ಮ.12 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುಲ್ಬರ್ಗ ಜಿಲ್ಲಾ ಸಾರ್ವಜನಿಕರೊಡನೆ ಜನತಾದರ್ಶನದಲ್ಲಿ ಭಾಗವಹಿಸುವರು. ಮ.2 ರಿಂದ 4 ಗಂಟೆಯವರೆಗೆ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವರು. ರಾತ್ರಿ 9 ಗಂಟೆಗೆ ಯಶವಂತಪೂರ-ಸೋಲಾಪೂರ ರೈಲಿನ ಮುಖಾಂತರ ಬೆಂಗಳೂರಿಗೆ ತೆರಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.