ಹಾಸನ

ಗೆದ್ದು ಸೋತವರು, ಸೋತು ಗೆದ್ದವರೆ ಹೆಚ್ಚು

Published On :

ಹಾಸನ: ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶವನ್ನು ಹೊಂದಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರ ಸಜ್ಜನ ರಾಜಕಾರಣಿಗಳು ಮತ್ತು ಮತದಾರರ ಕ್ಷೇತ್ರ ಎಂದೇ ಹೆಸರರಾಗಿತ್ತು. 1985 ರವರೆಗೆ ಈ ರಾಜಕೀಯ ಹೂದೋಟವಾಗಿಯೇ ನಳನಳಿಸುತ್ತಿತ್ತು.  ಆದರೆ ಈಗಿನ ಈ ಕ್ಷೇತ್ರದ ಸ್ಥಿತಿಗತಿ ನೋಡಿದರೆ, ಒಂದು ಕಡೆ ಅನುಕಂಪ ಮತ್ತೊಂದು ಕಡೆ ದುಃಖಕರವಾಗುವುದು ಉಂಟು.
ಖ್ಯಾತ ನೀರಾವರಿ ತಜ್ಞ ದಿ.ಎಚ್.ಎನ್.ನಂಜೇಗೌಡ, ಪ್ರಾಮಾಣಿಕತೆ,ಬದ್ಧತೆಗೆ ಪ್ರತೀಕವಾಗಿ ದಿ.ಕೆ.ಬಿ.ಮಲ್ಲಪ್ಪ, ಜಿ.ಎ.ತಿಮ್ಮೇಗೌಡರಂತಹ ಮಹಾನ್ ರಾಜಕಾರಣಿಗಳನ್ನು ವಿಧಾನಸಭೆಗೆ ಕಳುಹಿಸಿದ್ದ ಇಲ್ಲಿ ಮತದಾರರರು 1957ರಲ್ಲಿ ಜನಪರ ಕಾಳಜಿಯುಳ್ಳ ಖಾಸಗಿ ಬಸ್ ಕಂಡಕ್ಟರ್ ಪುಟ್ಟೇಗೌಡರಂತಹವರನ್ನು ಗೆಲ್ಲಿಸಿದ್ದು ಇದೆ.  ಇಲ್ಲಿನ ರಾಜಕಾರಣಿಗಳು ಜನರಗಿಲ್ಲದ್ದೆ ತಾವಿರುವ ಪಕ್ಷಕ್ಕೂ ನಿಷ್ಠರಾಗಿ ತನು,ಮನ,ಧನ ಅರ್ಪಿಸಿಕೊಂಡಿದ್ದರು. ಜನರು ಆಗ ರಾಜಕಾರಣಿಯಿಂದ ಪ್ರಾಮಾಣಿಕತೆಯನ್ನು ನಿರೀಕ್ಷೆ ಮಾಡುತ್ತಿದ್ದರು ವಿನ- ಬೇರ್ಯಾವ ಆಸೆ, ಆಮಿಷಗಳಿಗೂ ಬಲಿಯಾಗಿರಲಿಲ್ಲ.
ಇಂದು ರಾಜಕಾರಣಿಗಳು ಜನಪರ ಕಾಳಜಿ, ಪ್ರಾಮಾಣಿಕತೆಗಿಂತ ಹೆಚ್ಚಾಗಿ ದುಡ್ಡಿನ ಹೊಳೆಯನ್ನೇ ಹರಿಸಿ ಗೆಲ್ಲುವ ಪ್ರಯತ್ನದಲ್ಲಿ ಇದ್ದಾರೆ ಎಂಬುದು ರಹಸ್ಯವೇನು ಅಲ್ಲ. ಇದು ಕೊಡುವ ರಾಜಕಾರಣಿಗಳ ತಪ್ಪೋ, ತೆಗೆದುಕೊಳ್ಳುವ ಜನರ ತಪ್ಪೋ ಎಂಬುದನ್ನು ಕಾಲವೇ ನಿರ್ಧರಿಸಬೇಕಷ್ಟೆ. ಈ ಬಾರಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಿಗೆ ನಿವೃತ್ತ ಅಧಿಕಾರಿಗಳೊಂದಿಗೆ ರಾಜಕೀಯದಾಟ ಆಡಬೇಕಾದ ಸ್ಥಿತಿ ಇದೆ.
ಈಗಾಗಲೇ ಜೆಡಿಎಸ್ನಿಂದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. 2008ರಲ್ಲಿ ನಡೆದ ಚುನಾವಣೆಯಲ್ಲಿ ಮೌನವಾಗಿ ನೇರವಾಗಿ ಸ್ಪರ್ಧಿಸಿದ್ದರೆ, ಎಟಿಆರ್ ಅವರಿಗೆ ಗೆಲವು ಕಷ್ಟವಾಗುತ್ತಿರಲಿಲ್ಲ. ಸ್ಪರ್ಧಿಸಲು ಹಿಂದೆ, ಮುಂದೆ ನೋಡಿ ನಂತರ ಸ್ಪರ್ಧಿಸಿದ್ದರಿಂದ ಸೋಲು ಅನುಭವಿಸಬೇಕಾಯಿತು. ನಾನೊಬ್ಬನೇ ಸರಿ, ಬೇರೆ ಯಾರು ಸರಿಯಲ್ಲ ಎಂಬ  ಧೋರಣೆ ಬಿಟ್ಟು ಬಿರುಸಿನ ಪ್ರಚಾರ ಮಾಡಿ ಜನಮನ ಸೆಳೆಯದಿದ್ದರೇ ಎಟಿಆರ್ ಈಗಲೂ ಗೆಲ್ಲುವುದು ಕಷ್ಟವೇ.
ಹಾಲಿ ಶಾಸಕ ಎ.ಮಂಜು ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರ ಆಪ್ತರಾದ ನಿವೃತ್ತ ಅಧಿಕಾರಿ ಕೆ.ಎಂ.ಪುಟ್ಟಸ್ವಾಮಿ ಕಾಂಗ್ರೆಸ್ ಟಿಕೆಟ್ ಪಡೆಯಲು ತೀವ್ರ ಯತ್ನ ನಡೆಸಿದ್ದಾರೆ. ಇದು ಮಂಜು ಅವರಿಗೆ ನುಂಗಲಾರದ ತುಪ್ಪವಾಗಿದೆ. ಮಂಜು ಎಲ್ಲಾ ಬಲದೊಂದಿಗೆ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಸರ್ಕಾರ ನಡೆಸಿದ ಆಪರೇಷನ್ ಕಮಲದ ಸುತ್ತ ಮಂಜು ಗಿರಕಿ ಹೊಡೆದರು ಎಂದು ಕೆಲವು ಕಾಂಗ್ರೆಸಿಗರೇ ಹೈಕಮಾಂಡ್ ಬಳಿ ದೂರು ನೀಡಿದ್ದಾರೆ. ಇದು ಮಂಜು ಅವರಿಗೆ ಸುಲಭವಾಗಿ ಟಿಕೆಟ್ ಪಡೆಯುವುದಕ್ಕೆ ಕಷ್ಟವಾಗಿದೆ.
ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪುಟ್ಟಸ್ವಾಮಿ ಅವರು ಕೆಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದರೆ ಆಶ್ಚರ್ಯವಿಲ್ಲ. ಹೀಗೆ ಸ್ಪರ್ಧಿಸಿದರೇ ಮಂಜು ಗೆಲುವು ಕಬ್ಬಿಣದ ಕಡಲೆ ಆಗುತ್ತದೆ.  ಪ್ರಾದೇಶಿಕ ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಯೋಗಾರವುಶ್, ಜೆಡಿಎಸ್ನಿಂದ ಟಿಕೆಟ್ ಪಡೆಯಲು ಮಾಡಿದ ಯತ್ನ ವಿಫಲವಾಗಿ ಈಗ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಪೊಟ್ಯಾಟೋ ಕ್ಲಬ್ ಸ್ಫಾಪಿಸಿಕೊಂಡು ಆ ಮೂಲಕ ಕ್ಷೇತ್ರದಲ್ಲಿ ರಾಜಕೀಯ ದಾಳ ಎಸೆದಿರುವ ರಮೇಶ್, ಕ್ಷೇತ್ರದ್ಯಾಂತ ಸಂಚರಿಸಿ ಆರ್ಥಿಕ ಸಂಪನ್ಮೂಲವನ್ನು ಯಥೇಚ್ಚವಾಗಿ ವೆಚ್ಚ ಮಾಡಿದ್ದಾರೆ ಎಂದು ಹೇಳಲಾಗಿದೆ. ಯೋಗಾ ರಮೇಶ್ ಪಕ್ಷೇತರರಾಗಿ ನಿಂತರೆ, ಜೆಡಿಎಸ್ ಅಭ್ಯರ್ಥಿ ಎ.ಟಿ. ರಾಮಸ್ವಾಮಿ ಅವರು ಗೆಲ್ಲಲು ಬೆಟ್ಟದಷ್ಟು ಶ್ರಮ ಹಾಕಬೇಕಾಗುತ್ತದೆ. ಬಿಜೆಪಿಯಿಂದ ನಿವೃತ್ತ ಅಧಿಕಾರಿ ಕೋಡಿಹಳ್ಳಿ ನಂಜುಂಡೇಗೌಡ ಸ್ಪರ್ಧಿಸಲು ಮುಂದಾಗಿರುವುದಲ್ಲದೆ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನವಿಲೆ ಅಣ್ಣಪ್ಪ ಕೂಡ ಸ್ಪರ್ಧಿಸಲು ಬಯಸಿದ್ದಾರೆ.
ಅಪ್ಪಟ ಗ್ರಾಮೀಣ ಹಿನ್ನೆಲೆಯುಳ್ಳ ಜೊತೆಗೆ ಕರ್ನಾಟಕದ ದಕ್ಷಿಣಾಕಾಶಿ ಎಂದೇ ಹೆಸರುವಾಸಿಯಾಗಿರುವ ರಾಮನಾಥಪುರ ಕ್ಷೇತ್ರವನ್ನು ಹೊಂದಿರುವ ಅರಕಲಗೂಡು ಕ್ಷೇತ್ರಗಳಲ್ಲಿ ಹಲವು ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮುಖ್ಯವಾಗಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಹೆಚ್ಚಾಗಿದೆ. ಇದೇ ಹಾಲಿ ಶಾಸಕರಿಗೆ ಸವಾಲು ಮತ್ತು ಪ್ರತಿಸ್ಪರ್ಧಿಗಳಿಗೆ ಚುನಾವಣೆ ಅಸ್ತ್ರವಾಗಲಿದೆ.  ಈ ನಡುವೆಯೂ ಕಳೆದ ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದ ಎ.ಮಂಜು ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2008 ಚುನಾವಣೆಯಲ್ಲಿ 9,040 ಸಾವಿರ ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್ನ ಎ.ಟಿ.ರಾಮಸ್ವಾಮಿ ಪ್ರಬಲ ಪೈಪೋಟಿ ಒಡ್ಡುವುದು ಖಚಿತ. ಹೀಗಾಗಿ ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ -ಕಾಂಗ್ರೆಸ್ ನಡುವೆಯೇ ನೇರವಾದ ಹಣಾಹಣಿ. ಇವರ ಮಧ್ಯೆ ಪಕ್ಷೇತರ ಅಭ್ಯರ್ಥಿ ಯೋಗಾರವುಶ್, ಯಾರ ಗೆಲವಿಗೆ ಅಡ್ಡಿಯಾಗುತ್ತಾರೋ ಕಾದು ನೋಡಬೇಕು.

ಹೋಬಳಿಗಳು
ಅರಕಲಗೂಡು ಕ್ಷೇತ್ರದಲ್ಲಿ 6 ಹೋಬಳಿ ಹಾಗೂ 5 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿವೆ. ಅರಕಲಗೂಡು ತಾಲೂಕು ಕಸಬಾ, ಮಲ್ಲಿಪಟ್ಟಣ, ರಾಮನಾಥಪುರ,ದೊಡ್ಡಮಗ್ಗೆ, ಕೊಣನೂರು  ಮತ್ತು ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಗಳನ್ನು ಹೊಂದಿದೆ.

ಮತದಾರರು

2011 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 1,87,455  ಜನಸಂಖ್ಯೆ ಇದೆ. 97,481 ಪುರುಷರು, 89, 974 ಮಹಿಳೆಯರು ಇದ್ದಾರೆ. 70 ಸಾವಿರ ಒಕ್ಕಲಿಗರು ಇದ್ದರೆ, 45 ಸಾವಿರ ಕುರುಬ ಸಮುದಾಯದ ಮತಗಳಿವೆ.
    46 ಸಾವಿರ, ಪರಿಶಿಷ್ಟಜಾತಿ ಪಂಗಡದ ಮತದಾರರು, ಲಿಂಗಾಯಿತರು 20 ಮತ್ತು ಮುಸ್ಲಿಂ ಮತದಾರರು 11 ಸಾವಿರ ಇದ್ದಾರೆ. ಕ್ಷೇತ್ರದಲ್ಲಿ ಸಮಸ್ಯೆಗಿಂತ ಜಾತಿ ಲೆಕ್ಕಾಚಾರವೇ ಮೇಲಾಗಲಿದೆ.

ಗೆದ್ದಿದ್ದವರು-ಸೋತಿದ್ದವರು

  • 1983 ರಲ್ಲಿ ಜನತಾಪಕ್ಷದ ಕೆ.ಬಿ.ಮಲ್ಲಪ್ಪ, 31,925 ಮತ ಪಡೆದು ಗೆದ್ದರೇ, ಕಾಂಗ್ರೆಸ್ನ ಬಿ.ಎಸ್. ಪುಟ್ಟೇಗೌಡರು 22,225 ಮತದಿಂದ ಸೋಲು ಅನುಭವಿಸಿದರು.
  • 1985 ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಕೆ.ಬಿ. ಮಲ್ಲಪ್ಪ 8,729 ಮತ  ಪಡೆದು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು.  ಕಾಂಗ್ರೆಸ್ನ  ಜಿ.ಟಿ.ಕೃಷ್ಣಮೂರ್ತಿ 24, 738 ಮತ ಪಡೆದು ಪರಾಜಿತರಾದರು.
  • 1989 ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎ.ಟಿ.ರಾಮಸ್ವಾಮಿ 30, 507 ಮತ ಪಡೆದು ಚುನಾಯಿತರಾದರೆ, ಜನತಾದಳದ ಕೆ..ಬಿ. ಮಲ್ಲಪ್ಪ 20,889 ಮತ ಪಡೆದು ಸೋಲಿನ ರುಚಿ ಕಂಡರು.
  • 1994 ರಲ್ಲಿ  ಕಾಂಗ್ರೆಸ್ನಿಂದ ಮತ್ತೆ ಸ್ಪರ್ಧಿಸಿದ್ದ ಎ.ಟಿ.ರಾಮಸ್ವಾಮಿ 38, 222 ಮತ ಪಡೆದು ಪುನಾರಾಯ್ಕೆಯಾದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಮಂಜು 32, 181 ಮತ  ಪಡೆದು ಸೋತರು.
  • 1999 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಮಂಜು 53, 732 ಮತಗಳನ್ನು ಪಡೆದು ಗೆದ್ದರೆ, ಕಾಂಗ್ರೆಸ್ನ ಎ.ಟಿ.ರಾಮಸ್ವಾಮಿ 38,732 ಮತ ಪಡೆದು ಸೋತರು.
  • 2004ರ ಚುನಾವಣೆಯಲ್ಲಿ ಜೆಡಿಸ್ನಿಂದ ಸ್ಪರ್ಧಿಸಿದ್ದ ಎ.ಟಿ ರಾಮಸ್ವಾಮಿ  47,131 ಮತ ಪಡೆದು ಗೆಲವು ಸಾಧಿಸಿದರೆ, ರೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎ.ಮಂಜು 44,192 ಮತ ಪಡೆದು  ಪರಾಭವಗೊಂಡಿದ್ದರು.
  • 2008ರ ಚುನಾವಣೆಯಲ್ಲಿ  ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ  ಎ.ಮಂಜು  68,257 ಮತ ಪಡೆದು ವಿಜಯಶಾಲಿಯಾಗಿದ್ದರು. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎ.ಟಿ ರಾಮಸ್ವಾಮಿ 59,217 ಮತ ಪಡೆದು  ಪರಾಭವಗೊಂಡಿದ್ದರು.
- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.