ಹಾಸನ

ಮದ್ಯ ನಿಷೇಧಿಸಿದ ನಾರಿಯನ್ನು ಗೆಲ್ಲಿಸಿದ ಕ್ಷೇತ್ರ

Published On :

ದಯಾಶಂಕರ ಮೈಲಿ
ಹಾಸನ: ಈ ಕ್ಷೇತ್ರದ ಇತಿಹಾಸವನ್ನು ಕೆದಕಿ ನೋಡಿದರೇ ಜಾತಿಯತೆ ಪ್ರಭಾವ ಕಾಣುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ರಾಜ್ಯದಲ್ಲಿ ಪ್ರಥಮ ಬಾರಿಗೆ ಮದ್ಯಪಾನ ನಿಷೇಧಿಸಿದ ದಿಟ್ಟ ಮಹಿಳೆ ಯಶೋಧರ ದಾಸಪ್ಪನವರಂಥ ಮಹಾನ್ ಮಹಿಳೆಯನ್ನಲ್ಲದೇ ಅತ್ಯಲ್ಪ ಸಂಖ್ಯೆಯಲ್ಲಿರುವ ಜೈನ ಸಮುದಾಯದ ಎಚ್.ಬಿ. ಜ್ವಾಲನಯ್ಯನವರನ್ನು ಗೆಲ್ಲಿಸುವ ಮೂಲಕ ಜಾತಿ, ಮತಗಳ ಎಲ್ಲೆಯನ್ನು ಮೀರಿ ಸಾಮಾಜಿಕ ಬದ್ಧತೆಯನ್ನು ಮೆರೆದ ಕ್ಷೇತ್ರವಿದು.
ಆದರೆ, ಇದೆಲ್ಲ ಬರೀ ನೆನಪು, ಕನಸು ಎಂಬುವಷ್ಟು ಕ್ಷೇತ್ರದ ಚಿತ್ರಣವೀಗ ಬದಲಾಗಿದೆ. 1957ರಲ್ಲಿ  ಕಾಂಗ್ರೆಸ್ನಲ್ಲಿ ಹಾಸನ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, ಸಿದ್ದವನಹಳ್ಳಿ ನಿಜಲಿಂಗಪ್ಪನವರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಯಶೋಧರ ದಾಸಪ್ಪನವರು (ಮಾಜಿ ಸಂಸದ ತುಳಸಿ ದಾಸಪ್ಪನವರ ತಾಯಿ) ರಾಜ್ಯದಲ್ಲಿ ಏನೇ ಆಗಲಿ ಮದ್ಯ ನಿಷೇಧಿಸಬೇಕೆಂದು ಹೋರಾಡಿ, ಸಫಲರಾಗಿದ್ದರು.
ಅಲ್ಲದೇ ಒಂದೆರಡು ಸಾವಿರದಷ್ಟು ತಮ್ಮ ಸಮಾಜದ ಮತದಾರರನ್ನು ಹೊಂದಿದ್ದ ಎಚ್.ಬಿ. ಜ್ವಾಲನಯ್ಯ 1967ರಲ್ಲಿ ರಾಜಗೋಪಾಲಚಾರಿ ನೇತೃತ್ವದಲ್ಲಿ ಸ್ವತಂತ್ರ ಕಾಂಗ್ರೆಸ್ನಿಂದ (ಚುಕ್ಕಿ ಗುರುತು) ಸ್ಪರ್ಧಿಸಿ ಚುನಾಯಿತರಾಗಿದ್ದು, ಈಗ ಇತಿಹಾಸ. ಸಾಹಿತ್ಯ ಪ್ರಿಯರಾಗಿದ್ದ ಇವರು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು. 1978ರವರೆಗೆ ಕಾಂಗ್ರೆಸ್ ಭದ್ರಕೋಟೆಯಂತಿದ್ದ ಈ ಕ್ಷೇತ್ರ 1983ರಿಂದ ಇತ್ತೀಚೆಗೆ ಜನತಾದಳದ ಭದ್ರಕೋಟೆಯಾಗಿದೆ. 1978 ರಿಂದ 2008ರವರೆಗೆ ನಡೆದ 8 ವಿಧಾನಸಭೆ ಚುನಾವಣೆಗಳಲ್ಲಿ ಜೆಡಿಎಸ್ 5 ಬಾರಿ , ಕಾಂಗ್ರೆಸ್ 2 ಮತ್ತು ಬಿಜೆಪಿ ಒಂದು ಬಾರಿ ಮಾತ್ರ ಗೆದ್ದಿದೆ.
ಹಾಲಿ ಶಾಸಕರ ಮೂರು ಗೆಲವು: ಹಾಸನ ನಗರ ಮತ್ತು ಗ್ರಾಮಾಂತರ ಪ್ರದೇಶವನ್ನು ಒಳಗೊಂಡಿರುವ ಈ ಕ್ಷೇತ್ರದಿಂದ ಹಾಲಿ ಶಾಸಕ ಎಚ್.ಎಸ್. ಪ್ರಕಾಶ್ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅಧಿಕಾರವಧಿಯಲ್ಲಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕೃಷಿ, ಪಶು ವೈದ್ಯಕೀಯ ಕಾಲೇಜುಗಳಲ್ಲದೇ ಆನೇಕಾನೇಕ ಅಭಿವೃದ್ಧಿ ಕಾರ್ಯಗಳನ್ನು ಹಾಸನ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು ಪ್ರಕಾಶ್ ಗೆಲ್ಲಲು ಸಹಾಯವಾಯಿತು.
ಈ ಬಾರಿಯೂ ಪ್ರಕಾಶ್ಗೆ ಟಿಕೆಟ್ ಖಚಿತವಾಗಿದ್ದರೂ, ಮತ್ತೊಬ್ಬ ಮುಖಂಡ ಕೆ.ಎಂ.ರಾಜೇಗೌಡರಿಗೆ ಟಿಕೆಟ್ ನೀಡಬೇಕೆಂಬ ಒತ್ತಡವಿದೆ. ಯಾರಿಗೆ ಟಿಕೆಟ್ ಎಂಬ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಿಸದಿದ್ದರೆ ಪಕ್ಷದೊಳಗಿನ ಅಸಮಾಧಾನಕ್ಕೆ ಪುಷ್ಠಿ ನೀಡಿದಂತಾಗುತ್ತದೆ.
 ಈ ಬಾರಿ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಲ್ಲದೆ ತಾಲೂಕು ಪಂಚಾಯ್ತಿಯ ಎಲ್ಲ 25 ಕ್ಷೇತ್ರಗಳೂ ಜೆಡಿಎಸ್ ಪಾಲಾಗಿರುವುದೂ ಪ್ರಕಾಶ್ಗೆ ಅನುಕೂಲವಾಗಲಿದೆ. ಪ್ರಮುಖವಾಗಿ ಜಿಲ್ಲೆಯ ಕನಸಿನ ಕೂಸಾದ ಏರ್ಪೋರ್ಟ್ ಆಸೆಯನ್ನು ಬಿಜೆಪಿ ಸರ್ಕಾರ ಮಣ್ಣುಪಾಲು ಮಾಡಿರುವುದು, ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗಿರುವುದು ನಗರದ ಜನರ ಬೇಸರ ಮತ್ತು ಸಿಟ್ಟಿಗೆ ಕಾರಣವಾಗಿದೆ.  
ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಹಣಾಹಣಿ: ಕಾಂಗ್ರೆಸ್ನಲ್ಲಿಯೂ ಎಂಎಲ್ಸಿ ಎಸ್.ಎಂ. ಆನಂದ್ ಮತ್ತು ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್ ನಡುವೆ ಟಿಕೆಟ್ಗಾಗಿ ಹಣಾಹಣಿಯೇ ನಡೆಯುತ್ತಿದೆ. ಆನಂದ್ ಅವರು ಖರ್ಗೆ, ಸಿದ್ದರಾಮಯ್ಯ ಮತ್ತಿತರ ನಾಯಕರ ಪ್ರಭಾವದಿಂದ ಟಿಕೆಟ್ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದರೆ, ಮಹೇಶ್ ಕೃಷ್ಣಭೈರೇಗೌಡರ ಪ್ರಭಾವದಿಂದ ನೇರವಾಗಿ ರಾಹುಲ್ ಗಾಂಧಿ ಮೇಲೆ ಪ್ರಭಾವ ಬೀರಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ.
ಬಿಜೆಪಿಯಿಂದ ನಗರಸಭೆ ಮಾಜಿ ಸದಸ್ಯ ಮತ್ತು ಕ್ಷೇತ್ರದ ರಾಜಕೀಯ ಒಳ ಮತ್ತು ಹೊರಗನ್ನು ಸಮರ್ಥವಾಗಿ ಬಲ್ಲ ಎಂ.ಕೆ. ಕಮಲ್ ಕುಮಾರ್ಗೆ ಟೆಕೆಟ್ ನೀಡಲು ಪಕ್ಷದ ವರಿಷ್ಠರು ಒಲವು ತೋರಿದ್ದಾರೆ. ನಗರಸಭೆ ಚುನಾವಣೆಯಲ್ಲಿ 1 ಕ್ಷೇತ್ರವನ್ನು ಗೆದ್ದಿದ್ದಲ್ಲದೇ 3 ಕ್ಷೇತ್ರಗಳಲ್ಲಿ ಕೆಜೆಪಿ ಪ್ರಭಲ ಸ್ಪರ್ಧೆ ನೀಡುವಂತೆ ಮಾಡಿದ ಅಗಿಲೆ ಯೋಗೇಶ್ ಕೆಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ.




ಎಷ್ಟು ಹೋಬಳಿಗಳು?

ಟಿ    ಕ್ಷೇತ್ರದಲ್ಲಿ ಒಟ್ಟು 7 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು, 2 ಹೋಬಳಿಗಳಿವೆ. ಹಾಸನ ಕ್ಷೇತ್ರವು  ಕಸಬಾ ಮತ್ತು ಸಾಲಗಾಮೆ ಹೋಬಳಿಗಳನ್ನು ಒಳಗೊಂಡಿದೆ.



ಮತದಾರರು ಎಷ್ಟು?


ಟಿ    2011ರ ಜನಗಣತಿ ಪ್ರಕಾರ ಒಟ್ಟು 1,72,287 ಜನಸಂಖ್ಯೆ ಇದ್ದು, 86,110 ಪುರುಷರು,   86,177 ಮಹಿಳೆಯರಿದ್ದಾರೆ. ಹಾಸನ ಕ್ಷೇತ್ರದಲ್ಲಿ ಒಟ್ಟು ಮತದಾರರ ಪೈಕಿ 70 ಸಾವಿರ ಒಕ್ಕಲಿಗರಿದ್ದು, ಮುಸ್ಲಿಮರು, ದೇವಾಂಗ ಶೆಟ್ಟರು, ಪರಿಶಿಷ್ಟಜಾತಿ ಮತ್ತು ಇತರರು ತಲಾ 20 ಸಾವಿರದ ಆಚೆ-ಈಚೆ ಇದ್ದಾರೆ. ಇಲ್ಲೂ ಜೆಡಿಎಸ್ ಕಾಂಗ್ರೆಸ್ ನುಡುವೆಯೇ ಸ್ಪರ್ಧೆ ಇದ್ದು, ಒಕ್ಕಲಿಗರ ಓಟುಗಳೇ ನಿರ್ಣಾಯಕ. ಉಳಿದ ಯಾವುದೇ ಪಕ್ಷಗಳು ಅಷ್ಟೇನೂ ಪ್ರಭಾವಿಯಾಗಿ ಕಾಣುತ್ತಿಲ್ಲ.


ಮತಗಟ್ಟೆಗಳು ಎಷ್ಟು?


265

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.