ಹಾಸನ

ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ರೈತರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ೤ ಹೊಳೆನರಸೀಪುರ೤ ಏ 3
ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡದೇ ನಿರ್ಲಕ್ಷ ವಹಿಸುತ್ತಿರುವ ಕಾರಣದಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ ಎಂದು ಆರೋಪಿಸಿ ತಾಲೂಕಿನ ಗುಂಜೇವು ಗ್ರಾಮದ ರೈತರು ಪಟ್ಟಣದ ವಿದ್ಯುತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
 ಗುಂಜೇವು ಗ್ರಾಮದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಹದಿನೈದು ದಿನಗಳಿಂದ ದಿನಕ್ಕೆ ಒಂದು ಗಂಟೆಯಷ್ಟು ಸಹ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಸಾವಯವ ರೈತ ಮುಖಂಡ ಜಿ.ಎಸ್.ಶಿವಪ್ಪ ಸ್ಥಳದಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡರು.
 ಮತ್ತೊಬ್ಬ ರೈತ ಮುಖಂಡ ಪ್ರಕಾಶ್ ಮಾತನಾಡಿ, ನಮ್ಮ ಗ್ರಾಮದ ಪಕ್ಕದಲ್ಲೆ ಹೇಮಾವತಿ ನದಿ ಹರಿದು ಹೋಗುತ್ತಿದೆ. ಜತೆಗೆ ನದಿಯಲ್ಲಿ ಅಷ್ಟಿಷ್ಟು ನೀರು ಸಹ ಇದೆ. ಆದರೆ ಆ ನೀರನ್ನು ಮೇಲೆತ್ತಿ ನಮ್ಮ ಬೆಳೆ ಉಳಿಸಿಕೊಳ್ಳಲಾಗದ ದುಸ್ಥಿತಿ ತಲುಪಿದ್ದೇವೆ. ಜತೆಗೆ ನಮ್ಮ ಸುತ್ತ ಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಇಲಾಖೆ ಆಳವಡಿಸಿರುವ ಟ್ರಾನ್ಸ್ ಫಾರ್ಮರ್‌ಗಳಲ್ಲಿ ಆಯಿಲ್ ಸೋರುತ್ತಿದೆ. ಅದನ್ನು ದುರಸ್ಥಿಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ  ಮನವಿ ಸಲ್ಲಿಸಿದ್ದರೂ ಯಾವುದೆ ಪ್ರಯೋಜನ ಕಂಡಿಲ್ಲ ಎಂದು ಆರೋಪಿಸಿದರು.  ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಇದೀಗ ತಾನೇ ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ  ಮಕ್ಕಳು ವಿದ್ಯುತ್ ಅಭಾವದಿಂದ ಓದಲು ಆಗುತ್ತಿಲ್ಲ ಎಂದು ತಿಳಿಸಿದರು.
ವಿದ್ಯುತ್ ವ್ಯತ್ಯಯ ಸರಿಪಡಿಸದೆ ಹೋದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಘೇರಾವು ಹಾಕುವುದಲ್ಲದೇ ವಿದ್ಯುತಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತರು ಕಚೇರಿ ಮುಂದೆ ಧರಣಿ ನಡೆಸುತ್ತಿದ್ದ ವೇಳೆ ವಿದ್ಯುತ್ ಇಲಾಖೆ ಅಧಿಕಾರಿಗಳು ಇಲ್ಲದೆ ಹೋಗಿದ್ದರಿಂದ ರೈತರುಗಳು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಜಾಯಿಷಿ ನೀಡಿ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪಟ್ಟು ಹಿಡಿದರು. ಆದರೂ ಎಇಇ ಅನಿಲಲ್ಕುಮಾರ್ ಅವರು ಸ್ಥಳಕ್ಕೆ ಆಗಮಿಸುವುದು ತಡವಾಗಿದ್ದರಿಂದ ರೋಚ್ಚಿಗೆದ್ದ ರೈತರು ರಸ್ತೆ ತಡೆ ಮಾಡುವುದಾಗಿ ಬೆದರಿಕೆ ಒಡ್‌ಡಿದ್ದಲ್ಲದೆ, ಈ ವಿಚಾರವನ್ನು ಪೋಲಿಸ್ ಅಧಿಕಾರಿಗಳಿಗೆ ತಿಳಿಸಿ ಧರಣಿಗೆ ಮುಂದಾದರು.
 ಪ್ರತಿಭಟನೆಯ ತೀವ್ರತೆ ಅರಿತ ಎಂಜಿನಿಯರ್ಸುನಿಲ್ ಅವರು ತಮ್ಮ ಮೇಲಾಧಿಕಾರಿ ಅನಿಲ್‌ಕುಮಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪರಿಸ್ಥಿತಿ ಮನದಟ್ಟು ಮಾಡಿದ ನಂತರ ಪ್ರಭಾರಿ ಇಇ ಅನಿಲ್‌ಕುಮಾರ್ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಧರಣಿಯಲ್ಲಿ ಗುಂಜೇವು ಜಿ.ಸೋಮನಹಳ್ಳಿ, ಈಡಿಗನಹೊಸೂರು ಸೇರಿದಂತೆ ಹಲವು ಗ್ರಾಮಗಳ ರೈತರು  ಧರಣಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.