ಟೈರು, ಟ್ಯೂಬು, ಬ್ಯಾಟರಿ ಖರೀದಿಯಲ್ಲಿ ಅವ್ಯವಹಾರ ಆರೋಪ
ದಯಾಶಂಕರ ಮೈಲಿ
ಹಾಸನ: ಪೊಲೀಸ್ ವಾಹನಗಳ ದುರಸ್ತಿ ಕಾರ್ಯದಲ್ಲಿ ಹಣ ದುರುಪಯೋಗ ಆರೋಪದ ಮೇಲೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಮೋಟಾರು ವಿಭಾಗದ ಇನ್ಸ್ಪೆಕ್ಟರ್ ಮತ್ತು ಅವರ ಕಚೇರಿಯಲ್ಲಿ ಬರಹಗಾರರಾಗಿರುವ (ರೈಟರ್) ಇಬ್ಬರು ಕಾನ್ಸ್ಟೇಬಲ್ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವರ್ಷದ ಹಿಂದಷ್ಟೆ ಇನ್ಸ್ಪೆಕ್ಟರ್ ಆಗಿ ಇಲ್ಲಿಗೆ ಬಂದ ತಿಮ್ಮಪ್ಪಗೌಡ ಮತ್ತು ಬರಹಗಾರರಾದ ರಾಘವೇಂದ್ರ ಮತ್ತು ಇಲಿಯಾಜ್ ಅವರನ್ನು ಏಪ್ರಿಲ್ 3 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇವೆಯಿಂದ ಅಮಾನತು ಮಾಡಿ, ಸೂಕ್ತ ತನಿಖೆಗಾಗಿ ಆದೇಶಿಸಿದ್ದಾರೆ.
ಕಡಿಮೆ ಸಿಬ್ಬಂದಿ: ನ್ಯಾಯಾಲಯಗಳಿಗೆ ಕೈದಿಗಳನ್ನು ಕರೆದುಕೊಂಡು ಹೋಗಲು ಡಿಎಆರ್ನಲ್ಲಿ ಕಾನ್ಸ್ಟೇಬಲ್ಗಳಿಲ್ಲ. ಆದರೂ 20 ಕಾನ್ಸ್ಟೇಬಲ್ಗಳನ್ನು ಎಸ್ಪಿ ಕಚೇರಿ ಕೆಲಸಕ್ಕೆ ನಿಯೋಜಿಸಲಾಗಿದೆ. ಇದರಿಂದ ಇರುವ ಅಲ್ಪಮಂದಿಗೆ ಕಾರ್ಯದೊತ್ತಡ ಹೆಚ್ಚಾಗಿ ಮಾನಸಿಕ ಹಿಂಸೆ ಆಗುತ್ತಿದೆ. ಪೊಲೀಸ್ ಕ್ವಾಟರ್ಸ್ಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಇತ್ತ ಗಮನಹರಿಸದೇ ಮೂಗರ್ಜಿ ಆಧಾರದ ಮೇಲೆ ಕ್ರಮ ಜರುಗಿಸುವುದು ಸರಿಯಲ್ಲ ಎಂದು ಪೊಲೀಸ್ ವಲಯದಲ್ಲಿ ವಾದಿಸಲಾಗುತ್ತಿದೆ.
ರಾಜ್ಯಾದ್ಯಂತ ವಿದ್ಯುತ್ ಆಭಾವ ಕಾಡುತ್ತಿದೆ. ಪೊಲೀಸ್ ವಸತಿಗಳಲ್ಲಿರುವ ಪೊಲೀಸ್ ಸಿಬ್ಬಂದಿ ಮಕ್ಕಳು ವಿದ್ಯುತ್ ಇಲ್ಲದೇ ಪರೀಕ್ಷೆಗೆ ಓದಲು ಆಗುತ್ತಿಲ್ಲ. ಇಂಥಹ ಸಂದರ್ಭದಲ್ಲಿ ಪೊಲೀಸ್ ಕವಾಯತು ಮೈದಾನದಲ್ಲಿ ಹೆಚ್ಚು ವಿದ್ಯುತ್ ಬೇಕಾಗುವ ಪೋಕಸ್ ಲೈಟ್ ಬಳಸಿ ರಾತ್ರಿ ವೇಳೆ ಷಟಲ್ ಆಟ ಆಡಲಾಗುತ್ತಿದೆ. ಇವೆಲ್ಲಾ ಉನ್ನತಾಧಿಕಾರಿಗಳಿಗೆ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಲಾಗುತ್ತಿದೆ.
ರಾಜ್ಯಪಾಲ ರಿಗೆ ದೂರು: ಸುಪ್ರಿಂಕೋರ್ಟ್ ನಿರ್ದೇಶನದ ಪ್ರಕಾರ, ಅನಾಮಧೇಯ ಪತ್ರದ ಆಧಾರದ ಮೇಲೆ ಸೇವೆಯಿಂದ ಅಮಾನತು ಗೊಳಿಸುವಂತಿಲ್ಲ. ಪೊಲೀಸ್ ಶಿಸ್ತು ಕಾಯ್ದೆ ಬದಲಿಗೆ ರಾಜ್ಯ ಪೊಲೀಸ್ ಕಾಯ್ದೆಯ ಪ್ರಕಾರ, ಆರೋಪ ಹೊತ್ತ ಸಿಬ್ಬಂದಿಗೆ ನೊಟೀಸ್ ನೀಡಿ ವಿವರಣೆ ಪಡೆದ ನಂತರ ಅಮಾನತುಗೊಳಿಸಬೇಕು. ಇಲ್ಲಿ ಹಾಗೆ ಮಾಡಿಲ್ಲ. ಶಿಸ್ತು ಕಾಯ್ದೆ ಅನ್ವಯ ವಿವರಣೆ ಕೇಳದೆ ಅಮಾನತು ಮಾಡಲಾಗಿದೆ. ಶಿಸ್ತಿನ ನೆಪದಲ್ಲಿ ಕೆಳ ಹಂತದ ಸಿಬ್ಬಂದಿಗಳಿಗೆ ನೋವು ಉಂಟು ಮಾಡಲಾಗುತ್ತಿದೆ ಎಂದು ರಾಜ್ಯಪಾಲರಿಗೆ ದೂರು ನೀಡಲು ಕೆಲ ಸಿಬ್ಬಂದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅನಾಮಧೇಯ ಪತ್ರ (ಮೂಗರ್ಜಿ)
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಪ್ರಧಾನ ಕಚೇರಿಯಲ್ಲಿರುವ ಕುಂದುಕೊರತೆ ಘಟಕಕ್ಕೆ ಫೆಬ್ರವರಿ 4, 2013 ರಂದು ಬಂದ ಅನಾಮಧೇಯ ಪತ್ರದಲ್ಲಿ ಇನ್ಸ್ಪೆಕ್ಟರ್ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪತ್ರವನ್ನು ಪರಿಶೀಲನೆಗಾಗಿ ಜಿಲ್ಲಾ ಎಸ್ಪಿಗೆ ಕಳುಹಿಸಲಾಗಿತ್ತು. ಈ ಪತ್ರದಲ್ಲಿ ಮಾಡಿರುವ ಆರೋಪಗಳ ಬಗ್ಗೆ ಹೆಚ್ಚುವರಿ ಎಸ್ಪಿ ಅವರಿಂದ ಪೂರ್ವಭಾವಿ ವಿಚಾರಣೆ ನಡೆಸಿ, ಮೇಲ್ನೋಟಕ್ಕೆ ಸಾಬೀತಾದ್ದರಿಂದ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಲೆಕ್ಕ ಪರಿಶೋಧಕರು ಏಕೆ ಕ್ರಮ ತೆಗೆದುಕೊಂಡಿಲ್ಲ ?
ಇತ್ತೀಚೆಗಷ್ಟೇ ವಾಹನಗಳ ದುರಸ್ತಿ ಮತ್ತಿತರ ಖರ್ಚು, ವೆಚ್ಚಗಳ ಬಗ್ಗೆ ಪರಿಶೋಧನೆ ನಡೆಸಿದ ಬೆಂಗಳೂರಿನ ಲೆಕ್ಕ ಪರಿಶೋಧಕರು ಅವ್ಯವಹಾರ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿಲ್ಲ. ಅಂದ ಮೇಲೆ ಹಣ ದುರುಪಯೋಗ ಆಗಿದ್ದಾದ್ದರೂ ಹೇಗೆ ಎಂದು ಪೊಲೀಸ್ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.
ಎಸ್ಪಿ ಅಮಿತ್ಸಿಂಗ್ ಹೇಳುವುದು ಹೀಗೆ...
ಹೌದು... ಇಲಾಖೆಗೆ ಹಣ ನಷ್ಟ ಮಾಡಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ್ದರಿಂದ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡ ಸಿಬ್ಬಂದಿ ರಾಜ್ಯಪಾಲರಿಗೆ ದೂರು ಕೊಡಲಿ. ನಾವೇನು ಮಾಡಲಿಕ್ಕೆ ಆಗುತ್ತೇ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಅಮಿತ್ಸಿಂಗ್ ಕನ್ನಡಪ್ರಭಕ್ಕೆ ತಿಳಿಸಿದರು.
ಇನ್ಸ್ಪೆಕ್ಟರ್ನ್ಕಲಿ ಸಹಿ ಮಾಡಿ ಡಿಸೇಲ್ ದುರ್ಬಳಕೆ, ವಾಹನಗಳ ಬಿಡಿಭಾಗಗಳ ಮಾರಾಟ ಮತ್ತಿತರ ಆರೋಪ ಎಸಗಿದ್ದ ಕೆಲ ಚಾಲಕರನ್ನು ಈಗ ಸೇವೆಯಿಂದ ಅಮಾನತುಗೊಂಡಿರುವ ಇನ್ಸ್ಪೆಕ್ಟರ್ ತಿಮ್ಮಪ್ಪಗೌಡರು ಸೇವೆ ಅಮಾನತು ಮಾಡಲು ಎಸ್ಪಿ ಅವರಿಗೆ ಶಿಫಾರಸು ಮಾಡಿದ್ದರು. ಅದರ ಆಧಾರದ ಮೇಲೆ ಎಸ್ಪಿ ಚಾಲಕರನ್ನು ಅಮಾನತು ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚಾಲಕರು, ರಾಜ್ಯ ಪೊಲೀಸ್ ನಿರ್ದೇಶಕರಿಗೆ ಅನಾಮಧೇಯ ಪತ್ರ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಆರೋಪಗಳೇನು?:
ಟಿ ಮೋಟಾರು ವಾಹನ ವಿಭಾಗದಲ್ಲಿರುವ ದುರಸ್ತಿಗೊಂಡ ವಾಹನಗಳಿಗೆ ಟೈರು, ಟ್ಯೂಬು, ಬ್ಯಾಟರಿಗಳ ಖರೀದಿಯಲ್ಲಿ ಸ್ಥಳೀಯ ಕೆಲವರೊಂದಿಗೆ ಮಾತ್ರ ಸಂಪರ್ಕ ಹೊಂದಿ, ಅಂತಹ ವರ್ಕ್ಷಾಪ್ ಹಾಗೂ ಡೀಲರ್ಗಳ ಮಾಲೀಕರೊಂದಿಗೆ ಷಾಮೀಲಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿನ ದರಕ್ಕಿಂತ ಹೆಚ್ಚಿನ ದರದ ಕೊಟೇಷನ್ ಪಡೆದು, ಸುಳ್ಳು ಮಾಹಿತಿ ಒಳಗೊಂಡ ದಾಖಲಾತಿ ಸಲ್ಲಿಸಿ ಮಂಜೂರಾತಿ ಪಡೆದುಕೊಂಡು ಹಣ ನಷ್ಟ ಮಾಡಲಾಗಿದೆ.
ಟಿ ಮೋಟಾರು ವಾಹನ ವಿಭಾಗದ 23 ಲಾಗ್ ಪುಸ್ತಕಗಳನ್ನು ಪರಿಶೀಲಿಸಲಾಗಿ ಅವುಗಳಲ್ಲಿ 8 ಲಾಗ್ ಪುಸ್ತಕಗಳಲ್ಲಿ ವಾಹನ ಚಲಿಸಿದ ಕಿ.ಮೀಗಳಿಗಿಂತ ಹೆಚ್ಚಿನ ಕಿ.ಮೀಗಳನ್ನು ಚಾಲಕರು ಬರೆದಿದ್ದರೂ ಪರಿಶೀಲನೆ ನಡೆಸದೇ ಲೋಪ ಎಸಗಲಾಗಿದೆ.
ಟಿ ಹಲವು ಚಾಲಕರು 3 ರಿಂದ 4 ತಿಂಗಳವರೆಗೆ ಲಾಗ್ ಪುಸ್ತಕಗಳನ್ನು ಬರೆಯದೇ ಇದ್ದರೂ ಚಾಲಕರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಕೆಲ ವಾಹನಗಳಲ್ಲಿ ಮೀಟರ್ ರೀಡರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೆ ಅವುಗಳನ್ನು ದುರಸ್ತಿಪಡಿಸಿಲ್ಲ.
ಟಿ ತಮ್ಮೊಂದಿಗೆ ಸಹಕರಿಸದ ಸಿಬ್ಬಂದಿಗೆ ಪಕ್ಷಪಾತ ತೋರಿಸಿ ಸ್ವಾರ್ಥ ಸಾಧನೆಗಾಗಿ ಗುಂಪುಗಾರಿಕೆ ಮಾಡಿ ದುರ್ನಡನೆ ಪ್ರದರ್ಶನ.
ಈ ಆರೋಪಗಳ ಮೇಲೆ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

