8 ಅಥವಾ 9 ರಂದು ಕೆಜೆಪಿ ಪ್ರಣಾಳಿಕೆ ಬಿಡುಗಡೆ: ಬಿಎಸ್ವೈ
ಕನ್ನಡಪ್ರಭ ವಾರ್ತೆ ಅರಸೀಕೆರೆ ಏ. 4
ಕೆಜೆಪಿ ಚುನಾವಣಾ ಪ್ರಣಾಳಿಕೆ ಏ. 8 ಅಥವಾ 9 ರಂದು ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅರಸೀಕೆರೆ ಪಟ್ಟಣದಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಲಕ್ಷ ರು. ವರೆಗೆ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡುವುದು. ಆ ಮೂಲಕ ರೈತರನ್ನು ಋಣಮುಕ್ತರನ್ನಾಗಿ ಮಾಡಲಾಗುವುದು. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಮತ್ತಿತರ ಉನ್ನತ ಶಿಕ್ಷಣ ಪಡೆಯುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತದೆ ಎಂದು ಹೇಳಿದರು.
ಅಲ್ಲದೇ ಸ್ತ್ರೀಶಕ್ತಿಗಳಲ್ಲದೇ ಹೈನುಗಾರಿಕೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಅದಕ್ಕಾಗಿ 1 ಸಾವಿರ ಕೋಟಿ ರು. ಗಳನ್ನು ಕಾಯ್ದಿರಿಸಲಾಗುವುದು. ನೇಕಾರರು, ಮೀನುಗಾರರು ಮತ್ತು ತೆಂಗು ಮತ್ತು ಕೊಬ್ಬರಿ ಬೆಳೆಗಾರರಿಗೂ ಆರ್ಥಿಕ ನೆರವನ್ನು ನೀಡುವುದು ಸೇರಿದಂತೆ ಆನೇಕ ಜನಪರ ಅಂಶಗಳು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇರುತ್ತವೆ ಎಂದು ಘೋಷಣೆ ಮಾಡಿದರು.
ಇದಲ್ಲಾ ಹೇಗೆ ಸಾಧ್ಯ ಎಂದು ಜನತೆ ಕೇಳಬಹುದು. ಸಾಧ್ಯವಿದೆ. ನಾನು ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗುವಾಗ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೊಳಿಸುವುದಾಗಿ ಹೇಳಿರಲಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವುದಾಗಿ ಹೇಳಿರಲಿಲ್ಲ. 25 ಸಾವಿರ ರು. ವರೆಗೆ ಸಾಲ ಮನ್ನಾ ಮಾಡುವ ಭರವಸೆ ನೀಡಿರಲಿಲ್ಲ. ಆದರೂ ಅವೆಲ್ಲಾ ಯೋಜನೆಗಳನ್ನು ಜಾರಿ ತರಲಾಯಿತು. ಅದಕ್ಕಾಗಿ ಬೇಕಾದ ಸಂಪನ್ಮೂಲವನ್ನು ನಾನಾ ಮೂಲಗಳಿಂದ ಸಂಗ್ರಹಿಸುವ ಸಂಕಲ್ಪವನ್ನು ತೊಡಲಾಯಿತು ಅಷ್ಟೇ ಎಂದು ಹೇಳಿದರು.
ಮುಖ್ಯಮಂತ್ರಿ ಜಗದೀಶೆ ಶೆಟ್ಟರ್ ರೈತರ ಸಾಲ ಮನ್ನಾ ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ನಾನು ಆಡಳಿತ ಪಕ್ಷದ ಶಾಸಕ ಎಂಬುದನ್ನು ಮರೆತು ರೈತರ ಸಾಲ ಮನ್ನಾ ಮಾಡದಿದ್ದರೆ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಆಗ ಶೆಟ್ಟರ್ ಅವರು ಸಾಲ ಮನ್ನಾ ಮಾಡುವುದಾಗಿ ವಿಧಾನಸಭೆ ಒಳಗೆ ಪ್ರಕಟಿಸಿದರು ಎಂದು ಹೇಳಿದರು. ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊರ ಒಪ್ಪಂದವೂ ಇಲ್ಲ. ಒಳ ಒಪ್ಪಂದವೂ ಇಲ್ಲ. ಎಲ್ಲಾ ವಿರೋಧ ಪಕ್ಷಗಳ ವಿರುದ್ಧ ಹೋರಾಟ ಮಾಡಲಾಗುವುದು. ಜನರು ಕೆಜೆಪಿ ಪರ ಮತ ನೀಡುವರು ಎಂಬ ಆಶಯವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಮಾಧುಸ್ವಾಮಿ, ಎಚ್.ಎಂ.ವಿಶ್ವನಾಥ್, ಅರಸೀಕೆರೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಡಾ. ಲೋಕೇಶ್ ಮಾತನಾಡಿದರು. ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವಶಂಕರ್, ಕಟ್ಟಾಯ ಅಶೋಕ್, ಅಗಿಲೆ ಯೋಗೀಶ್ ತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

