ರಂಗಭೂಮಿ ಕಲಾವಿದರಿಂದ ಸಮಾಜದ ಕಸ ತೆಗೆಯುವ ಕಾಯಕ
ಕನ್ನಡಪ್ರಭ ವಾರ್ತೆ ಅರಸೀಕೆರೆ ಏ.6
ಸಮಾಜದ ಕಸ ತೆಗೆಯುವ ಕೆಲಸವನ್ನು ವೃತ್ತಿ ರಂಗಭೂಮಿ ಕಲಾವಿದರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ವೀರಶೈವ ಯುವ ವೇದಿಕೆ ಹಾಗೂ ಶಿವಕುಮಾರ ಬಳಗದ ಸಹಯೋಗದಲ್ಲಿ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ 3 ದಿನ ನಡೆಯಲಿರುವ ಶಿವಸಂಚಾರ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಕಾರ್ಯವನ್ನು ಪ್ರಸಿದ್ಧ ನಾಟಕ ರಂಗಭೂಮಿ ಕಲಾವಿದರೆಲ್ಲಾ ಮಾಡಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ರಂಗ ಕಲಾವಿದರನ್ನು ಗೌರವಿಸುವ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಪ್ರತಿ ಕಲಾವಿದನಿಗೂ ದೌರ್ಬಲ್ಯಗಳು ಹೆಚ್ಚು ಎನ್ನುವ ಮಾತು ಕೇಳಿಬರುತ್ತದೆ. ಕಲಾವಿದ ತನ್ನ ಕಲಾ ಪ್ರೌಢಮೆಯನ್ನು ತೋರಿಸಲು ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು. ಆಗ ಮಾತ್ರ ಕಲಾವಿದನ ಜೀವನ ಸಾರ್ಥಕವೆನಿಸಿ ಕೊಳ್ಳುತ್ತದೆ. ಇಲ್ಲದಿದ್ದಲ್ಲಿ ದುರಂತಮಯ ಅಂತ್ಯ ಕಾಣಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ವೃತ್ತಿ ರಂಗಭೂಮಿಯಲ್ಲಿ ಕಲಾವಿದನೆಂದ ಮೇಲೆ ಅನುಮಾನ, ಅಪಮಾನದ ನೆರಳಿನಡಿಯಲ್ಲಿಯೇ ಕಲಾಸೇವೆ ಮಾಡಬೇಕಾಗುತ್ತದೆ. ಇವುಗಳನ್ನು ಸಹಿಸಿದರೆ ಗೌರವ, ಸನ್ಮಾನಗಳು ತಾನಾಗಿಯೇ ಹುಡುಕಿಕೊಂಡು ಕಲಾವಿದನ ಮನೆ ಬಾಗಿಲಿಗೆ ಬರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು.
ಸಾಣೇಹಳ್ಳಿಯ ಕಲಾತಂಡ ಈ ಹಿನ್ನೆಲೆಯಲ್ಲಿಯೇ ರಾಜ್ಯ, ದೇಶ ವಿದೇಶಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಾರಿ ಪ್ರದರ್ಶಿಸುವ ಮೂಲಕ ನಾಡಿನ ಶರಣರ, ದಾರ್ಶನಿಕರ ಅನುಭವಿಗಳ ಅಮೃತವಾಣಿಯನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಪ್ರಶಂಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಟರಾಜ್ ಮಾತನಾಡಿ, ಸೃಜನಶೀಲ, ಆಧ್ಯಾತ್ಮಿಕ, ಕಲಾತಪಸ್ವಿಪಂಡಿತರಾಧ್ಯರ ರಂಗಭೂಮಿ ಸೇವೆ ಗುರುತಿಸಿ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿರುವುದು ವೃತ್ತಿ ರಂಗಭೂಮಿಗೆ ಸಂದ ಗೌರವವಾಗಿದೆ. ಸಮರ್ಥ ನಾಡು ಕಟ್ಟುವಲ್ಲಿ ತಲ್ಲೀನರಾಗಿರುವ ಶ್ರೀಗಳ ಕಾರ್ಯವನ್ನು ಬಣ್ಣಿಸಿದರು.
ಸಾದು ವೀರಶೈವ ಸಮಾಜದ ಅಧ್ಯಕ್ಷ ಎಚ್.ಜಿ.ರೇವಣ್ಣ, ಕಾಲೇಜು ಪ್ರಾಂಶುಪಾಲ ಶಿವಸ್ವಾಮಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್.ಸಿ.ಸಿದ್ದರಾಮಪ್ಪ, ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶಂಭಣ್ಣ, ಸಮಾಜದ ಮುಖಂಡ ಮಹಾಲಿಂಗಪ್ಪ ಇದ್ದರು. ಶಿಕ್ಷಕ ಓಂಕಾರಮೂರ್ತಿ ಸ್ವಾಗತಿಸಿದರು. ಚಂದ್ರಶೇಖರ್ ಬಾಬು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

